ಕುರುಗೋಡು: ತಾಲ್ಲೂಕಿನ ಸೋಮಸಮುದ್ರ ಗ್ರಾಮಕ್ಕೆ ಶನಿವಾರ ಭೇಟಿನೀಡಿದ್ದ ತಾಲ್ಲೂಕು ಉಸ್ತುವಾರಿ ಕಾರ್ಯದರ್ಶಿ ಚನ್ನಪ್ಪ ನರೇಗಾ ಯೋಜನೆಯಲ್ಲಿ ಕೈಗೊಂಡ ನಾಲಾ ಮತ್ತು ಕಾಲುವೆ ಹೂಳೆತ್ತುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಅಂಗವಿಕರು ಮತ್ತು ವಯೋವೃದ್ದರಿಂದ ಕಡಿಮೆ ಕೆಲಸ ಮಾಡಿಸಿ ಪೂರ್ಣಪ್ರಮಾಣದ ಕೂಲಿ ಹಣ ನೀಡಬೇಕು. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಕುಡಿಯುವ ನೀರು, ನೆರಳು ಸೇರಿದಂತೆ ಮೂಲಸೌಕರ್ಯಕಲ್ಪಿಸಬೇಕು ಎಂದು ಸೂಚಿಸಿದರು.
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ 5954 ನರೇಗಾ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ನೀಡಿದ ಮಾಹಿತಿಗೆ ಸಿಡಿಮಿಡಿಗೊಂಡ ತಾಲ್ಲೂಕು ಉಸ್ತುವಾರಿ ಕಾರ್ಯದರ್ಶಿ ಚನ್ನಪ್ಪ, ನಿತ್ಯ ಕನಿಷ್ಟ 10 ಸಾವಿರ ಕಾರ್ಮಿಕರು ಕೆಲಸ ಮಾಡುವಂತೆ ನೋಡಿಕೊಳ್ಳಿ ಎಂದು ತಾಕೀತುಮಾಡಿದರು.ನರೇಗಾ ಕಾರ್ಮಿಕರು ಅಳತೆಗೆ ತಕ್ಕಂತೆ ಕೆಲಸ ಮಾಡಬೇಕು. ಕಡ್ಡಾಯವಾಗಿ ಪ್ರತಿನಿತ್ಯ ಎರಡು ಬಾರಿ ಆ್ಯಪ್ ಮೂಲಕ ಹಾಜರಾತಿ ಹಾಕಬೇಕು. ಕಾಯಕ ಬಂಧುಗಳು ಕಾರ್ಮಿಕರಿಗೆ ನಿತ್ಯ ಕೆಲಸದ ಅಳತೆ ನೀಡುವ ಜತೆಗೆ ನರೇಗಾ ಮತ್ತು ವಿಬಿಜಿ ರಾಮ್ ಜಿ ಯೋಜನೆಯ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.ಎನ್ಎಂಯಆರ್ ಪಡೆದು ಕಾರ್ಮಿಕರು ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸಕ್ಕೆ ಹಾಜರಾಗುವಂತೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.