ವಿಡಿಯೊ ಕಾಲ್ ಸ್ನೇಹದ ಹಿಂದೆ ಬ್ಲಾಕ್‌ಮೇಲ್‌ ಗ್ಯಾಂಗ್

KannadaprabhaNewsNetwork |  
Published : May 19, 2026, 02:30 AM IST
ಸಾಂದರ್ಬಿಕ ಚಿತ್ರ | Kannada Prabha

ಸಾರಾಂಶ

ನೀವು ರಾತ್ರಿ ಒಬ್ಬಂಟಿಯಾಗಿದ್ದೀರಾ? ಏಕಾಂಗಿತನ ನಿಮ್ಮನ್ನು ಕಾಡುತ್ತಿದೆಯಾ? ನಿಮ್ಮ ಬಯಕೆಗಳನ್ನು ಇನ್ನೊಬ್ಬರ ಜತೆ ಹಂಚಿಕೊಳ್ಳಬೇಕು ಅನಿಸಿದೆಯಾ? ಏನೂ ಚಿಂತೆ ಮಾಡಬೇಡಿ...

ಮಧ್ಯರಾತ್ರಿ ಹರಟೆ, ಬೆಳಗ್ಗೆ ಬೆದರಿಕೆ: ಯುವಕರಿಗೆ ಸೈಬರ್ ಶಾಕ್

ಖಾಸಗಿ ಕ್ಷಣಗಳೇ ವಂಚಕರ ಕೈಯಲ್ಲಿ ಅಸ್ತ್ರ

ಒಂಟಿತನಕ್ಕೆ ಜೊತೆ ಎಂದವರಿಂದ ಲಕ್ಷಾಂತರ ವಂಚನೆ

ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ನೀವು ರಾತ್ರಿ ಒಬ್ಬಂಟಿಯಾಗಿದ್ದೀರಾ? ಏಕಾಂಗಿತನ ನಿಮ್ಮನ್ನು ಕಾಡುತ್ತಿದೆಯಾ? ನಿಮ್ಮ ಬಯಕೆಗಳನ್ನು ಇನ್ನೊಬ್ಬರ ಜತೆ ಹಂಚಿಕೊಳ್ಳಬೇಕು ಅನಿಸಿದೆಯಾ? ಏನೂ ಚಿಂತೆ ಮಾಡಬೇಡಿ... ನಿಮ್ಮ ಜತೆ ಮಿಡ್‌ನೈಟ್ ಹರಟೆ ಹೊಡೆಯಲು ನಾವಿದ್ದೇವೆ... ಹೀಗೊಂದು ಆ್ಯಪ್‌ಗಳ ಜಾಹೀರಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಜಾಹೀರಾತು ನಂಬಿ ನೀವೇನಾದ್ರು ಹರಟೆಗೆ ಹೋದರೆ ಕಥೆ ಮುಗೀತು...

ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಂದರ ಯುವತಿಯರು ಅಥವಾ ಎಐ ಸುಂದರಿಯರು ಮಿಡ್‌ನೈಟ್‌ ಹರಟೆ ಮಾತುಗಳ ಬಗ್ಗೆ ಮಾಹಿತಿ ನೀಡುತ್ತಾರೆ. ನಿಮ್ಮ ಖಾಸಗಿ ವಿಚಾರಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ ಎಂಬಿತ್ಯಾದಿ ಬಣ್ಣಬಣ್ಣದ ಮಾತುಗಳಿಂದ ನಂಬಿಸ್ತಾರೆ.

ಇದನ್ನು ನಂಬಿದ ಕೆಲವು ಯುವಕರು ಆ್ಯಪ್ ಡೌನ್ ಲೋಡ್ ಮಾಡಿ, ಅವರ ಮಾತಿಗೆ ಫಿದಾ ಆಗಿ ಅವರು ಬೀಸಿದ ಬಲೆಗೆ ಬೀಳುತ್ತಾರೆ. ಕೆಲವೊಂದು ಈ ಪ್ರಕರಣಗಳು ಕೇಸಾದರೆ, ಕೆಲವರು ಮರ್ಯಾದೆಗೆ ಅಂಜಿ ಮೌನವಾಗುತ್ತಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

ವಿಡಿಯೊ ಬ್ಲಾಕ್‌ಮೇಲ್‌:

ಮೊಬೈಲ್ ನಂಬರ್ ಪಡೆದ ಬಳಿಕ ಖಾಸಗಿ ಕ್ಷಣಗಳನ್ನು ಯುವಕರು ಹಂಚಿಕೊಳ್ಳುವಾಗ ಯುವತಿಯರು ವಿಡಿಯೋ ಬಳಕೆ ಮಾಡಿ ಗೊತ್ತಿಲ್ಲದೇ ಎಲ್ಲವನ್ನೂ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಈ ಬಗ್ಗೆ ಅರಿವಿಗೆ ಬಾರದೇ ಯುವಕರು ವಂಚನಾ ಜಾಲದೊಳಗೆ ಬೀಳುತ್ತಾರೆ. ವಿಡಿಯೋ ದಾಖಲೀಕರಣ ಮಾಡುವ ಯುವತಿಯರು ಮರುದಿನದಿಂದ ಯುವಕರ ವಾಟ್ಸ್‌ಆ್ಯಪ್‌ಗೆ ಸಂದೇಶ ಹಾಕಿ ಬ್ಲಾಕ್‌ಮೇಲ್‌ ಶುರು ಮಾಡುತ್ತಾರೆ. ಹಣ ನೀಡದಿದ್ದರೆ ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಎಚ್ಚರಿಕೆ ನೀಡುತ್ತಾರೆ. ಇದರಿಂದ ಸ್ವಾಭಿಮಾನಿ ಯುವಕರು ಆತಂಕಕ್ಕೊಳಗಾಗಿ ಲಕ್ಷಾಂತರ ಹಣ ಕಳೆದುಕೊಳ್ಳುತ್ತಾರೆ. ಉಕ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚಿವೆ. ಇವುಗಳಲ್ಲಿ ಕೆಲವೇ ಕೆಲವು ಪ್ರಕರಣ ಮಾತ್ರ ಪೊಲೀಸ್ ಠಾಣೆ ಮೆಟ್ಟಿಲೇರಿವೆ.

ದೂರು ಕೊಡಲು ಹಿಂದೇಟು:

ಜಿಲ್ಲೆಯ ಹಲವು ಮಂದಿ ಸ್ಥಿತಿವಂತರೇ ಈ ಜಾಲಕ್ಕೆ ಸಿಕ್ಕಿ ಒದ್ದಾಡುತ್ತಿದ್ದಾರೆ. ಆದರೆ ಈ ಬಗ್ಗೆ ದೂರು ನೀಡಿದರೆ ಗೌರವಕ್ಕೆ ಚ್ಯುತಿ ಬರುತ್ತದೆ ಎಂದು ಸುಮ್ಮನಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಕೆಲವರು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದರೆ, ಇನ್ನು ಕೆಲವರು ಮೊಬೈಲ್ ನಂಬರ್‌ನ್ನೇ ಬದಲಾಯಿಸಿಕೊಂಡು ಸುಮ್ಮನಿದ್ದಾರೆ ಎಂದು ಬಲ್ಲಮೂಲಗಳು ತಿಳಿಸಿವೆ.

ಮರ್ಯಾದೆಗೆ ಅಂಜಿಕೆ

ಫೇಸ್‌ಬುಕ್‌ ಖಾತೆಯಲ್ಲಿ ಪರಿಚಯವಾದ ಯುವತಿಯ ಏಕಾಂಗಿತನದ ರಸದೌತಣಕ್ಕೆ ಹೋಗಿ ಇಲ್ಲಿನ ಸಾರಿಗೆ ಘಟಕದ ನಿರ್ವಾಹಕರೊಬ್ಬರು ₹1 ಲಕ್ಷದ 37 ಸಾವಿರ ಕಳೆದುಕೊಂಡ ಘಟನೆ ನಡೆದಿದೆ. ಮರ್ಯಾದೆಗೆ ಅಂಜಿ ಪ್ರಕರಣದಿಂದ ದೂರ ಸರಿದಿದ್ದರು ಎಂದು ಗೊತ್ತಾಗಿದೆ. ಆದರೆ ದೂರು ನೀಡಿದವರ ಮಾಹಿತಿ ಗೌಪ್ಯವಿಡಲಾಗುವುದು ಎಂಬ ಮಾಹಿತಿಯ ಮೇರೆಗೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.ಆ್ಯಪ್, ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರ ಜತೆ ವಿಡಿಯೋ ಕಾಲ್, ವಾಟ್ಸ್ಆ್ಯಪ್‌ ಕಾಲ್ ಮೂಲಕ ಮಾತನಾಡುವುದು, ಖಾಸಗಿ ಕ್ಷಣ ಹಂಚಿಕೊಳ್ಳುವುದು ತೀರಾ ಅಪಾಯಕಾರಿಯಾಗಿದೆ. ಮೋಸದ ಜಾಲಕ್ಕೆ ಬೀಳದಿರಿ. ಒಂದಾನು ವೇಳೆ ವಂಚನೆಯ ಜಾಲಕ್ಕೆ ಸಿಲುಕಿದಲ್ಲಿ ಧೈರ್ಯದಿಂದ ಪ್ರಕರಣ ದಾಖಲಿಸಿ ಎಂದು ಕಾರವಾರ ಸೈಬರ್‌ ಕ್ರೈಂ ಸಿಪಿಐ ನಿತ್ಯಾನಂದ ಪಂಡಿತ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಐಡಿ ಕಡ್ಡಾಯ: ಮುಂದಿನ ವರ್ಷದಿಂದ ಹಂತ ಹಂತವಾಗಿ ಮಾಡಿ-ಭುವನೇಶ್ವರ ಶಿಡ್ಲಾಪುರ
ಬೇರೆ ತಾಲೂಕಿಗೆ ಗೊಬ್ಬರ ಸರಬರಾಜಾದರೆ ಕ್ರಮ-ಶಾಸಕ ಪಠಾಣ್‌