ವ್ಯಾಪಾರದಲ್ಲಿ ಕೆಲವರು ಪ್ರಗತಿ ಸಾಧಿಸಿ ಶ್ರೀಮಂತರಾಗುತ್ತಾರೆ. ಇನ್ನೂ ಕೆಲವರು ನಿರಂತರ ನಷ್ಟದಿಂದ ಸಂಕಷ್ಟಕ್ಕೆ ಸಿಲುಕುತ್ತಾರೆ. ಯಾವುದೇ ಹೊಸ ಯೋಜನೆಗೆ ಕೈಹಾಕುವ ಮೊದಲು ಪೂರ್ವ ತಯಾರಿ, ಮಾರುಕಟ್ಟೆ ಅಧ್ಯಯನ ಹಾಗೂ ಸೂಕ್ತ ಯೋಜನೆ ಇರಬೇಕು ಎಂದು ಸಲಹೆ ನೀಡಿದರು. ವ್ಯಾಪಾರದಲ್ಲಿ ನಿರಂತರ ನಷ್ಟವಾಗುತ್ತಿದ್ದರೆ ಅದರ ಹಿಂದಿರುವ ತಪ್ಪುಗಳನ್ನು ಅರಿತು ಸರಿಪಡಿಸಿಕೊಳ್ಳಬೇಕು. ಸಮಸ್ಯೆಗಳನ್ನು ಕಡೆಗಣಿಸಿದರೆ ವ್ಯಾಪಾರದಲ್ಲಿ ಉಳಿಯುವುದು ಕಷ್ಟವಾಗುತ್ತದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಇಂದಿನ ತೀವ್ರ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆಯಬೇಕಾದರೆ ತಾಳ್ಮೆ, ಪರಿಶ್ರಮ ಹಾಗೂ ಸರಿಯಾದ ಯೋಜನೆಗಳು ಅತ್ಯಗತ್ಯ ಎಂದು ಪುಷ್ಪಗಿರಿ ಮಠದ ಸೋಮಶೇಖರ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಬಸವೇಶ್ವರ ದೇವಾಲಯ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಜಿಲ್ಲಾ ವೀರಶೈವ ಲಿಂಗಾಯತ ಸಂಘದ ವತಿಯಿಂದ ಆಯೋಜಿಸಿದ್ದ ವೀರಶೈವ ಲಿಂಗಾಯತ ಬ್ಯುಸಿನೆಸ್ ಎಕ್ಸ್ಪೋ-2026 ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಿಯೂ ಯಶಸ್ವಿ ಉದ್ಯಮಿಯಾಗುವ ಜ್ಞಾನ ಹಾಗೂ ಶಕ್ತಿ ಅಡಗಿದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು. ವ್ಯಾಪಾರದಲ್ಲಿ ಕೆಲವರು ಪ್ರಗತಿ ಸಾಧಿಸಿ ಶ್ರೀಮಂತರಾಗುತ್ತಾರೆ. ಇನ್ನೂ ಕೆಲವರು ನಿರಂತರ ನಷ್ಟದಿಂದ ಸಂಕಷ್ಟಕ್ಕೆ ಸಿಲುಕುತ್ತಾರೆ. ಯಾವುದೇ ಹೊಸ ಯೋಜನೆಗೆ ಕೈಹಾಕುವ ಮೊದಲು ಪೂರ್ವ ತಯಾರಿ, ಮಾರುಕಟ್ಟೆ ಅಧ್ಯಯನ ಹಾಗೂ ಸೂಕ್ತ ಯೋಜನೆ ಇರಬೇಕು ಎಂದು ಸಲಹೆ ನೀಡಿದರು. ವ್ಯಾಪಾರದಲ್ಲಿ ನಿರಂತರ ನಷ್ಟವಾಗುತ್ತಿದ್ದರೆ ಅದರ ಹಿಂದಿರುವ ತಪ್ಪುಗಳನ್ನು ಅರಿತು ಸರಿಪಡಿಸಿಕೊಳ್ಳಬೇಕು. ಸಮಸ್ಯೆಗಳನ್ನು ಕಡೆಗಣಿಸಿದರೆ ವ್ಯಾಪಾರದಲ್ಲಿ ಉಳಿಯುವುದು ಕಷ್ಟವಾಗುತ್ತದೆ ಎಂದು ಹೇಳಿದರು.ರಾಜ್ಯದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಮಹಾಸಭಾದ ಪದಾಧಿಕಾರಿಗಳು ನಿಗಮವನ್ನು ಸಕ್ರಿಯಗೊಳಿಸುವ ಕೆಲಸ ಮಾಡಬೇಕು ಎಂದರು. ಸಮಾಜದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಾಲ ಸೌಲಭ್ಯ, ಸ್ವಉದ್ಯೋಗ ಯೋಜನೆಗಳು ಹಾಗೂ ಉದ್ಯಮ ಮಾರ್ಗದರ್ಶನ ಒದಗಿಸುವ ಮೂಲಕ ಸಮಾಜದ ಆರ್ಥಿಕ ಪ್ರಗತಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿ ನಾವು ನಮಗೋಸ್ಕರ ಬದುಕಬೇಕು ಹೊರತು ಇನ್ನೊಬ್ಬರ ಮೆಚ್ಚುಗೆಗಾಗಿ ಅಲ್ಲ ಎಂದು ಹೇಳಿದರು. ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡುವವರೆಗೆ ನಿಜವಾದ ಅಭಿವೃದ್ಧಿ ಸಾಧ್ಯವಿಲ್ಲ. ಬಸವಣ್ಣರು ಯಾವತ್ತೂ ಜಾತಿ ಆಧಾರಿತ ಭೇದಭಾವ ಮಾಡಿಲ್ಲ. ಆದ್ದರಿಂದ ಜಾತಿ, ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡದೆ ಎಲ್ಲರೂ ಒಂದೇ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಮೊಬೈಲ್ ಬಳಕೆ ಯುವಕರ ಯೋಚನಾ ಶಕ್ತಿ ಸೀಮಿತಗೊಳಿಸುತ್ತಿದೆ. ಯುವಕರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದ ಬಳಿಕ ಜೀವನಶೈಲಿ ಬಹಳ ಬದಲಾಗಿದೆ. ಸಾಮಾಜಿಕ ಜಾಲತಾಣಗಳು ಯುವಕರ ಯೋಚನಾ ವ್ಯಾಪ್ತಿಯನ್ನು ಸೀಮಿತಗೊಳಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕಾದರೆ ಕೌಶಲಾಭಿವೃದ್ಧಿ ಅತ್ಯಗತ್ಯ. ಉದ್ಯೋಗಕ್ಕಾಗಿ ಮಾತ್ರ ಕಾಯದೆ ಸ್ವಂತ ಉದ್ಯಮ ಆರಂಭಿಸುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.ರಾಜ್ಯಾದ್ಯಂತ ಇಂತಹ ಎಕ್ಸ್ಪೋಗಳು ನಡೆಯಲಿ:ಲಿಂಗಾಯತ ಸಮಾಜದ ಉದ್ಯಮಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ವ್ಯವಹಾರ, ಉದ್ಯಮ ಮತ್ತು ಸಂಪರ್ಕ ವಿಸ್ತರಣೆಗೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯ ಎಂದು ದೊಡ್ಡಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.ಇಂತಹ ಬ್ಯುಸಿನೆಸ್ ಎಕ್ಸ್‌ಪೋಗಳು ಕೇವಲ ಹಾಸನಕ್ಕೆ ಸೀಮಿತವಾಗದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆಯಬೇಕು. ಇದರಿಂದ ಹೊಸ ಉದ್ಯಮಿಗಳಿಗೆ ಪ್ರೇರಣೆ ಸಿಗುವುದರ ಜೊತೆಗೆ ಸಮಾಜದ ಆರ್ಥಿಕ ಶಕ್ತಿ ಮತ್ತಷ್ಟು ವೃದ್ಧಿಯಾಗುತ್ತದೆ ಎಂದು ಹೇಳಿದರು.ವಿವಿಧ ಮಳಿಗೆಗಳ ಉದ್ಘಾಟನೆ:ವೀರಶೈವ ಲಿಂಗಾಯತ ಬ್ಯುಸಿನೆಸ್ ಎಕ್ಸ್‌ಪೋ ಅಂಗವಾಗಿ ವಿವಿಧ ವ್ಯಾಪಾರ, ಕೈಗಾರಿಕೆ ಹಾಗೂ ಸ್ವಉದ್ಯೋಗ ಮಳಿಗೆಗಳನ್ನು ತೆರೆಯಲಾಗಿತ್ತು. ಅವುಗಳನ್ನು ಸೋಮಶೇಖರ ಸ್ವಾಮೀಜಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಪತ್ರಕರ್ತ ಬಿ. ಆರ್. ಉದಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ವೀರಶೈವ ಲಿಂಗಾಯತ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಐಸಾಮಿಗೌಡ, ಎಂಟಿಇಎಸ್ ಅಧ್ಯಕ್ಷ ಬಿ. ಆರ್. ಗುರುದೇವ್ ಸೇರಿದಂತೆ ಸಂಗಂ, ಮುಕ್ತಾಂಬಾ, ಗ್ರಾನೈಟ್ ರಾಜಶೇಖರ್, ಕಟ್ಟಾಯ ಶಿವಕುಮಾರ್, ಮಮತಾ ಪಾಟೀಲ್, ಮನುಕುಮಾರ್, ವಿಕಾಸ್ ಅಶೋಕ್ ಕುಮಾರ್, ಗೀರಿಜಾಂಬಿಕೆ, ಧನಲಕ್ಷ್ಮೀ, ಶೋಭಾ ಚಂದ್ರಶೇಖರ್, ವೀಣಾ ದೇವರಾಜ್, ಭಾಮಿನಿ ಹೇಮಂತ್, ಶೈಲಾ ಮದನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.