ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ಪೋಡಿ ದುರಸ್ತಿ, ಸಿ ಮತ್ತು ಡಿ ಸಮಸ್ಯೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು.
ಸೋಮವಾರಪೇಟೆ: ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ಪೋಡಿ ದುರಸ್ತಿ, ಸಿ ಮತ್ತು ಡಿ ಸಮಸ್ಯೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಅಪ್ಪಚ್ಚುರಂಜನ್ ಮಾತನಾಡಿ, ಈಗಾಗಲೇ ಪಟ್ಟಾ ನೀಡಿರುವುದನ್ನು ವಾಪಾಸು ಪಡೆಯುವುದರಲ್ಲಿ ಅರ್ಥವೇನು, ಫಾರಂ 53 ಮತ್ತು 57 ರಲ್ಲಿ ಕಾಫಿಗೆ ಆದ್ಯತೆ ಇದೆ, ಅದನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಬಾರದು ಎಂದು ಸಲಹೆ ನೀಡಿದರು. ಅರಣ್ಯ ಹಕ್ಕಿನ ಮೂಲಕ ನಮ್ಮ ಭಾಗದ ಚೌಡ್ಲು, ಬಜೆಗುಂಡಿ, ರಂಗ ಸಮುದ್ರ ಭಾಗಗಳಲ್ಲಿ ಪಟ್ಟಾ ನೀಡಿದ್ದೇವೆ. ತಹಶೀಲ್ದಾರ್ ಕಚೇರಿಯಲ್ಲಿ ಬಾಕಿ ಉಳಿದಿರುವ ದುರಸ್ತಿ ಕಡತಗಳನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಸಾಮಾಜಿಕ ಕಾರ್ಯಕರ್ತ ಬಗ್ಗನ ಅನಿಲ್ ಮಾತನಾಡಿ, ತಹಶೀಲ್ದಾರ್ ಕಚೇರಿಯಲ್ಲಿ ಹಣ ನೀಡಿದವರಿಗೆ ಮಾತ್ರ ಕೆಲಸ ಮಾಡಿಕೊಡಲಾಗುತ್ತಿದೆ. ಬೆಂಗಳೂರಿನಲ್ಲಿ ಇರುವ ಹಣವಂತರಿಗೆ ಬೇಗನೆ ಕೆಲಸ ಮಾಡಿಕೊಡುತ್ತಾರೆ. ಆದರೆ ರೈತರ ಅರ್ಜಿಗಳು ದುರಸ್ತಿಯಾಗದೆ ಹಲವು ವರ್ಷಗಳಿಂದ ಬಾಕಿ ಉಳಿದಿದೆ ಎಂದು ಹೇಳಿದರು.
ಶಾಸಕರು, ತಹಸೀಲ್ದಾರ್ ಅವರು ಪೋಡಿ ದುರಸ್ತಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಸಿ ಮತ್ತು ಡಿ ಜಮೀನಿನಲ್ಲಿ ಪಟ್ಟಾ ನೀಡಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ತಹಸೀಲ್ದಾರ್ ಕಚೇರಿಯಲ್ಲಿ ಯಾವ ಕಡತಕ್ಕೆ ಎಷ್ಟು ಹಣ ಕೊಡಬೇಕು ಎಂದು ಬೋರ್ಡ್ ಹಾಕಿದರೆ ರೈತರು ಹಣ ನೀಡಿ ಈಗಾಗಲೇ ಸರ್ಕಿಯರಾಗಿರುವ ಬ್ರೋಕರ್ ಗಳಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಹೂವಯ್ಯ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ಸಣ್ಣ ರೈತರಿಗೆ ಅನಗತ್ಯ ತೊಂದರೆ ನೀಡುವುದನ್ನು ನಿಲ್ಲಿಸಬೇಕು, ರೈತರು ಎಷ್ಟು ವರ್ಷಗಳಿಂದ ಕೃಷಿ ನಡೆಸುತ್ತಿದ್ದಾರೆ ಎಂದು ಪರಿಶೀಲಿಸಿ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್ ಮಾತನಾಡಿ, ರೈತರ ಸಮಸ್ಯೆಗಳ ಕುರಿತು ತನಿಖೆಗಾಗಿ ಎಸ್ಐಟಿ ರಚಿಸಿ ಒಂದು ವರ್ಷ ಕಳೆದಿದ್ದರೂ ಈವರೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ಮುಂಬರುವ ಚಳಿಗಾಲದ ಅಧಿವೇಶನಕ್ಕೂ ಮುನ್ನಾ ವರದಿಯನ್ನು ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಯಾವ ಪಕ್ಷದ ರಾಜಕರಣಿಗಳು ಕೂಡ ರೈತರ ಪರವಾಗಿ ನಿಲ್ಲುತ್ತಿಲ್ಲ, ಹತ್ತು ಹಲವು ಹೋರಾಟಗಳನ್ನು ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ತನಳ್ಳಿ, ಬಿ.ಜೆ.ದೀಪಕ್, ದಿವಾಕರ್, ಮಾಜಿ ಎಂಎಲ್ಸಿ ಎಸ್.ಜಿ.ಮೇದಪ್ಪ, ಉದ್ಯಮಿ ಎಡಕೇರಿ ಪ್ರಸನ್ನ, ರೈತ ಹೆಚ್.ಈ. ರಮೇಶ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮನವಿ ಸ್ವೀಕರಿಸಿ ತಹಶೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಕಚೇರಿಯಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿಲ್ಲ ಎಂಬುದರ ಕುರಿತು ತಮ್ಮ ಗಮನಕ್ಕೆ ತರಬೇಕು. ಕಚೇರಿಯಲ್ಲಿ ಬ್ರೋಕರ್ ಗಳ ಹಾವಳಿಯನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಡಿಡಿಎಲ್ಆರ್ ನಿರಂಜನ್ ಮತ್ತು ತಹಶೀಲ್ದಾರ್ ನೀಡಿದ ಭರವಸೆಯ ಮೇರೆಗೆ ರೈತರು ಪ್ರತಿಭಟನೆ ಹಿಂಪಡೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.