ಕನ್ನಡಪ್ರಭ ವಾರ್ತೆ ಪಾವಗಡ
ಆಗಿದ್ದೇನು ? : ಶನಿವಾರ ಮಧ್ಯಾಹ್ನ 12ರ ಸುಮಾರಿಗೆ ಹೊಸಕೋಟೆ ಗ್ರಾಮದ ಸೈಯ್ಯದ್ ಅಕ್ರಂ ಅವರಿಗೆ ಉಸಿರಾಟದ ತೊಂದರೆಯಾಗಿದ್ದು ಮನೆಯವರು ಚಿಕಿತ್ಸೆಗಾಗಿ ಇಲ್ಲಿನ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಕರೆ ತಂದಿದ್ದರು. ಆದರೆ ರೋಗಿಗೆ ಹೆಚ್ಚಿನ ಚಿಕಿತ್ಸೆ ಬೇಕಾಗಿದ್ದು ಪಾವಗಡಕ್ಕೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದಾರೆ. ಆಗ ಮನೆಯವರು ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಒಂದುವರೆ ಗಂಟೆ ಕಳೆದರೂ ಆ್ಯಂಬುಲೆನ್ಸ್ ಬರದ ಹಿನ್ನೆಲೆಯಲ್ಲಿ ಸೈಯ್ಯದ್ ಅಕ್ರಂ ಅವರ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದು ಈ ವೇಳೆ ರೋಗಿಯ ಮನೆಯವರ ಮನವಿ ಮೇರೆಗೆ ವೈದ್ಯರು ಎಮರ್ಜೆನ್ಸಿ ಕೊಠಡಿಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಚಿಕಿತ್ಸೆ ಫಲಿಸದ ಪರಿಣಾಮ ಸೈಯ್ಯದ ಮೃತರಾಗಿದ್ದಾರೆ. ಈ ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮೃತ ವ್ಯಕ್ತಿಯ ತಂದೆ ಸಾದಿಕ್ ಸಾಬ್ ಇಷ್ಟು ದೊಡ್ಡ ಊರಿಗೆ ಒಳ್ಳೆಯದಾಗಲಿ ಎಂದು ಕೋಟ್ಯಂತರ ಮೌಲ್ಯದ ಜಮೀನನ್ನು ನಾನು ಸರ್ಕಾರಕ್ಕೆ ದಾನ ಕೊಟ್ಟಿದ್ದೇನೆ. ಆದರೆ ಇಂದು ಇದೇ ಜಾಗದಲ್ಲಿ ನನ್ನ ಮಗ ಸರಿಯಾದ ಚಿಕಿತ್ಸೆ ವ್ಯವಸ್ಥೆ ಇಲ್ಲದೆ ಮೃತಪಟ್ಟಿರುವುದು ಅತ್ಯಂತ ನೋವು ತಂದಿದೆ. ನನ್ನ ಮಗನಿಗೆ ಈ ಪರಿಸ್ಥಿತಿ ಇದ್ದರೆ ಇನ್ನು ಸಾರ್ವಜನಿಕರ ಪರಿಸ್ಥಿತಿ ಹೇಗೆ ಇರಬೇಕು ನನ್ನ ಮಗನಿಗೆ ಬಂದ ಪರಿಸ್ಥಿತಿ ಬೇರೆ ಯಾವ ಮಕ್ಕಳಿಗೂ ಬೇಡ. ಕೂಡಲೇ ಸರ್ಕಾರ ಇದರ ಬಗ್ಗೆ ಗಮನಹರಿಸಿ ವೈದ್ಯರು , ಚಿಕಿತ್ಸೆ ಸಲಕರಣೆಗಳು ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ಕೇವಲ 2 ಆ್ಯಂಬುಲೆನ್ಸ್:ಹೊಸಕೋಟೆ ಆರೋಗ್ಯ ಕೇಂದ್ರದಲ್ಲಿನ ಸರ್ಕಾರಿ ಆ್ಯಂಬುಲೆನ್ಸ್ ಸರಿಯಾದ ನಿರ್ವಹಣೆ ಇಲ್ಲದೆ ಇರುವುದರಿಂದ ಕೆಟ್ಟು ಹೋಗಿದ್ದು, ವೈದ್ಯರು ಸಹ ಅದರ ಬಗ್ಗೆ ಕಾಳಜಿ ವಹಿಸದೆ ಇರುವುದರಿಂದ ತಾಲೂಕಿನಲ್ಲಿ ಇದು ಎರಡನೇ ಘಟನೆಯಾಗಿದೆ. ಈ ಕುರಿತು ಮಾತನಾಡಿದ 108 ಸಿಬ್ಬಂದಿ ಪಾವಗಡ ತಾಲೂಕಿನಲ್ಲಿ ಕೇವಲ 2 ಆ್ಯಂಬುಲೆನ್ಸ್ ಮಾತ್ರ ಇವೆ ಎಂಬ ಆಘಾತಕಾರಿ ಆಂಶ ಬೆಳಕಿದೆ ಬಂದಿದೆ.