ಶೀಘ್ರ ಧಾರವಾಡ ಜಿಲ್ಲಾಮಟ್ಟದ ಉದ್ಯೋಗ ಮೇಳ ಆಯೋಜನೆ: ಭುವನೇಶ ಪಾಟೀಲ

KannadaprabhaNewsNetwork |  
Published : Feb 18, 2025, 12:33 AM IST
17ಡಿಡಬ್ಲೂಡಿ2ಜಿಪಂ ಸಭಾಭವನದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಹಾಗೂ ಕೈಗಾರಿಕೆ ಸಂಘಗಳ ಪ್ರತಿನಿಧಿಗಳೊಂದಿಗೆ ಸೋಮವಾರ ಜಿಪಂ ಇಸಿಓ ಭುವನೇಶ ಪಾಟೀಲ ಸಭೆ ಜರುಗಿಸಿದರು.  | Kannada Prabha

ಸಾರಾಂಶ

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಪಂ ಸಹಯೋಗದಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಶೀಘ್ರದಲ್ಲಿ ಆಯೋಜಿಸಲಾಗುತ್ತಿದೆ.

ಧಾರವಾಡ: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಪಂ ಸಹಯೋಗದಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಶೀಘ್ರದಲ್ಲಿ ಆಯೋಜಿಸಲಾಗುತ್ತಿದೆ. ಉದ್ಯೋಗ ಆಕಾಂಕ್ಷಿಗಳು ಮತ್ತು ಉದ್ಯೋಗದಾತರಾದ ಉದ್ಯಮಿಗಳು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು, ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.

ಜಿಪಂ ಸಭಾಭವನದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಹಾಗೂ ಕೈಗಾರಿಕೆ ಸಂಘಗಳ ಪ್ರತಿನಿಧಿಗಳೊಂದಿಗೆ ಸೋಮವಾರ ಸಭೆ ಜರುಗಿಸಿದ ಅವರು, ರಾಜ್ಯ ಸರ್ಕಾರ ಯುವ ನಿಧಿ ಯೋಜನೆ ಜಾರಿಗೊಳಿಸಿದ್ದು, ಜಿಲ್ಲೆಯ ಆರು ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿದ್ದಾರೆ. ಅವರಿಗೆ ಅಗತ್ಯ ತರಬೇತಿ ನೀಡುವ ಕಾರ್ಯದಲ್ಲಿ ಕೈಗಾರಿಕೆಗಳು ಕೈಜೋಡಿಸಬೇಕು. ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಹೆರಳವಾದ ಮಾನವ ಸಂಪನ್ಮೂಲವಿದೆ. ಅವರಿಗೆ ಅಗತ್ಯ ಕೌಶಲ್ಯ ತರಬೇತಿ ನೀಡುವ ಮೂಲಕ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಉದ್ಯೋಗ ಮೇಳದಲ್ಲಿ ಜಿಲ್ಲೆಯ ಎಲ್ಲ ಪದವಿ, ಐಟಿಐ ಕಾಲೇಜುಗಳ ಪದವೀಧರ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮಾಹಿತಿ ನೀಡಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಯಾ ಕಾಲೇಜಿನ ಕ್ಯಾಂಪಸ್‌ನಿಂದ ಉದ್ಯೋಗ ಮೇಳದ ಸ್ಥಳಕ್ಕೆ ಆಗಮಿಸಲು ಬಸ್ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುತ್ತದೆ. ಉದ್ಯೋಗ ಮೇಳದಲ್ಲಿ 8-10 ಸಾವಿರ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲೆಯ ಬೇಲೂರು, ತಾರಿಹಾಳ ಮತ್ತು ಸತ್ತೂರ ಕೈಗಾರಿಕಾ ಪ್ರದೇಶಗಳಲ್ಲಿನ ಕೈಗಾರಿಕೋದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹುಬ್ಬಳ್ಳಿ ಚೇಂಬರ್‌ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ಪಿ. ಸಂಶಿಮಠ ಮಾತನಾಡಿ, ಈ ಉದ್ಯೋಗ ಮೇಳದಲ್ಲಿ 60ಕ್ಕೂ ಹೆಚ್ಚು ಕೈಗಾರಿಕೋಧ್ಯಮಿಗಳು ಭಾಗವಹಿಸಲಿದ್ದಾರೆ. ಆಯಾ ಕೈಗಾರಿಕೆಗಳಿಗೆ ಅಗತ್ಯವಿರುವ ಉದ್ಯೋಗಿಗಳ ಸಂಖ್ಯೆಯನ್ನು ಮುಂಚಿತವಾಗಿ ನೀಡಲಿದ್ದಾರೆ. ಅಕೌಶಲ್ಯವಿರುವ ಉದ್ಯೋಗ ಆಕಾಂಕ್ಷಿಗಳನ್ನು ಸಹ ಆಯ್ಕೆ ಮಾಡಿಕೊಂಡು ಕೆಲವು ಕೈಗಾರಿಕೆಗಳು ತರಬೇತಿ ನೀಡುತ್ತಿವೆ ಎಂದರು.

ಧಾರವಾಡ ಕೈಗಾರಿಕಾ ಬೆಳವಣಿಗೆ ಕೇಂದ್ರದ ಉಪಾಧ್ಯಕ್ಷ ಶಿರಿಶ್ ಉಪ್ಪಿನ ಮಾತನಾಡಿ, ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ಉದ್ಯೋಗ ಮೇಳದ ಮಾಹಿತಿ ನೀಡಲಾಗಿದೆ. ಉದ್ಯೋಗಿಗಳ ಬೇಡಿಕೆ ಪಟ್ಟಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಉದ್ಯೋಗ ಬಯಸಿ ಬರುವ ಅನೇಕ ಆಕಾಂಕ್ಷಿಗಳು ಅರ್ಧಕ್ಕೆ ಕೆಲಸ ಬಿಡುತ್ತಾರೆ. ತರಬೇತಿ ನಂತರ ಕೆಲವು ಬಾರಿ ಬೇರೆ ಕೈಗಾರಿಕೆಗಳಿಗೆ ಹೋಗುತ್ತಾರೆ. ಇದರಿಂದ ಆಯ್ಕೆ ಮಾಡಿಕೊಂಡ ಕೈಗಾರಿಕೆಗಳಿಗೆ ಸ್ವಲ್ಪಮಟ್ಟಿಗೆ ತೊಂದರೆ ಆಗುತ್ತಿದೆ. ಈ ಕುರಿತು ಮೇಳದಲ್ಲಿ ಗಮನ ಹರಿಸಬೇಕು ಎಂದು ವಿನಂತಿಸಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರವೀಂದ್ರ ದ್ಯಾಬೇರಿ, ಜಿಪಂ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ ಹಾಗೂ ಶಾಹಿ ಎಕ್ಸ್‌ಪೊಜ್, ಕನೆಕ್ಟಿವಿಟಿ, ಪಿಡ್‌ಕಾರ್ಡ್‌, ಡಾಪ್ಸಮ್ ಸೇರಿದಂತೆ ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳು ಮತ್ತು ಐಟಿಐ, ಕಾಲೇಜು ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಾನಗರ ಪಾಲಿಕೆ, ಉದ್ಯೋಗ ವಿನಿಮಯ ಇಲಾಖೆ ಅಧಿಕಾರಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!