ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡಿಸಿ ಶ್ರೀ ಧರ್ಮಸ್ಥಳ ಧರ್ಮ ಸಂರಕ್ಷಣಾ ವೇದಿಕೆ ಪುತ್ತೂರು ತಾಲೂಕು ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಜನಾಗ್ರಹ ಸಭೆ ನಡೆಯಿತು.
ಪುತ್ತೂರು ದೇವಾಲಯದ ದೇವರಮಾರು ಗದ್ದೆಯಲ್ಲಿ ಜನಾಗ್ರಹ ಸಭೆ
ಕನ್ನಡಪ್ರಭ ವಾರ್ತೆ ಪುತ್ತೂರು
ಧರ್ಮಸ್ಥಳದ ಕುರಿತು ಕೃತಕತೆಯನ್ನು ಬಿಂಬಿಸಿ ಇಂದು ಮಾತನಾಡುತ್ತಿದ್ದಾರೆ. ಕೆಲವರು ಆಹಂನಿಂದ ಮಾಡುತ್ತಿರುವ ಈ ಕೃತ್ಯಗಳಿಗೆ ಧರ್ಮಸ್ಥಳ ಕ್ಷೇತ್ರದ ದೇವರು ಕೆಲವೇ ದಿನಗಳಲ್ಲಿ ಇತಿಶ್ರೀ ಹಾಡಲಿದ್ದಾರೆ. ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರ ಎಸಗುತ್ತಿರುವ ವಿಚಾರದಲ್ಲಿ ಎಲ್ಲರೂ ಏಕ ಮನಸ್ಕರಾಗಿ ಕ್ಷೇತ್ರವನ್ನು ಉಳಿಸಲು ಮುಂದಾಗಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡಿಸಿ ಶ್ರೀ ಧರ್ಮಸ್ಥಳ ಧರ್ಮ ಸಂರಕ್ಷಣಾ ವೇದಿಕೆ ಪುತ್ತೂರು ತಾಲೂಕು ವತಿಯಿಂದ ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು.ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಧರ್ಮಸ್ಥಳಕ್ಕೆ ನೀಡಿದ ದೇಣಿಗೆಯು ಸಮಾಜಕ್ಕೆ ಅರ್ಪಣೆಯಾಗುತ್ತದೆ. ಕೆಲವೊಂದು ನಂಜು ಮನಸ್ಸುಗಳಿಂದ ಕ್ಷೇತ್ರದ ಮೇಲೆ ಷಡ್ಯಂತ್ರ ನಡೆದಿದೆ. ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ನಡೆಸುವ ಮೂಲಕ ಇದನ್ನು ಸರಿಪಡಿಸುವ ಮತ್ತು ಕ್ಷೇತ್ರಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಿದೆ. ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಸೌಜನ್ಯಳಿಗೂ ನ್ಯಾಯ ಸಿಗಬೇಕು ಎಂದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಸರ್ಕಾರ ಮಾಡಬಹುದಾದ ಕಾರ್ಯಗಳನ್ನು ಧರ್ಮಸ್ಥಳದ ಒಂದು ದೇವಾಲಯ ಮಾಡಿದೆ. ಇದನ್ನು ಸಹಿಸದವರು ಕ್ಷೇತ್ರದ ಮೇಲೆ ವೈಚಾರಿಕ ದಾಳಿ ಮಾಡುತ್ತಿದ್ದಾರೆ. ಸೌಜನ್ಯಾಗೆ ನ್ಯಾಯ ಸಿಗಬೇಕು, ಆದರೆ ಅದರ ಹೆಸರಿನಲ್ಲಿ ಮಂಜುನಾಥ, ಅಣ್ಣಪ್ಪನಿಗೆ ಅನ್ಯಾಯ ಮಾಡುವುದನ್ನು ಸಹಿಸುವುದಿಲ್ಲ. ಕೆಟ್ಟವರಿಗೆ ಒಳ್ಳೆಯ ಬುದ್ದಿ ನೀಡಲಿ ಎಂದು ಈ ಜನಾಗ್ರಹ ಸಭೆ ನಡೆಸಿದ್ದೇವೆ ಎಂದರು.ಮಾಜಿ ಶಾಸಕ ಸಂಜೀವ ಮಠಂದೂರು, ಬೆಳ್ತಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ನ್ಯಾಯವಾದಿ ಕೇಶವ ಗೌಡ, ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿದರು. ಜನಜಾಗೃತಿ ವೇದಿಕೆಯ ಸಾಜ ರಾಧಾಕೃಷ್ಣ ಆಳ್ವ, ಪದ್ಮನಾಭ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಸದಸ್ಯ ಶಿವನಾಥ ರೈ ಮೇಗಿನಗುತ್ತು, ವಿಶ್ವ ಹಿಂದೂ ಪರಿಷದ್ ಮುಖಂಡ ಯು. ಪೂವಪ್ಪ, ಪ್ರಮುಖರಾದ ಚನಿಲ ತಿಮ್ಮಪ್ಪ ಶೆಟ್ಟಿ, ಬೂಡಿಯಾರು ರಾಧಾಕೃಷ್ಣ ರೈ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಅಶ್ವಿನಿ ಎಲ್. ಶೆಟ್ಟಿ, ನ್ಯಾಯವಾದಿ ಚಿದಾನಂದ ಬೈಲಾಡಿ, ಆರ್.ಸಿ.ನಾರಾಯಣ, ಸೀತಾರಾಮ ರೈ ಕೆದಂಬಾಡಿಗುತ್ತು, ಡಾ.ಸುರೇಶ್ ಪುತ್ತೂರಾಯ, ಶ್ರೀರಾಮ ಭಟ್ ಬಂಗಾರಡ್ಕ, ನ್ಯಾಯವಾದಿ ಕೇಶವ ಗೌಡ ಧರ್ಮಸ್ಥಳ, ರವೀಂದ್ರನಾಥ ಶೆಟ್ಟಿ ನುಳಿಯಾಲು ಮತ್ತಿತರರು ಉಪಸ್ಥಿತರಿದ್ದರು.ಸಂಘಟಕ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.