ಮರ್ಯಾದಾ ಹತ್ಯೆ ತಡೆಗೆ ಕಾನೂನು : ಸಿದ್ದರಾಮಯ್ಯ ಘೋಷಣೆ

KannadaprabhaNewsNetwork |  
Published : Dec 29, 2025, 02:00 AM ISTUpdated : Dec 29, 2025, 05:39 AM IST
Siddaramaiah

ಸಾರಾಂಶ

ರಾಜ್ಯದಲ್ಲಿ ಮರ್ಯಾದಾ ಹತ್ಯೆ ತಡೆ ಸಂಬಂಧ ಕಾನೂನು ಜಾರಿಗೊಳಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕನ್ನಡ ಹೋರಾಟಗಾರರ ಸಮಿತಿಯಿಂದ ಭಾನುವಾರ ಅರಮನೆ ಮೈದಾನದಲ್ಲಿ ನಡೆದ ‘ಜನರಾಜ್ಯೋತ್ಸವ’ ಕಾರ್ಯಕ್ರಮದಲ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದರು.

  ಬೆಂಗಳೂರು :  ರಾಜ್ಯದಲ್ಲಿ ಮರ್ಯಾದಾ ಹತ್ಯೆ ತಡೆ ಸಂಬಂಧ ಕಾನೂನು ಜಾರಿಗೊಳಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನ್ನಡ ಹೋರಾಟಗಾರರ ಸಮಿತಿಯಿಂದ ಭಾನುವಾರ ಅರಮನೆ ಮೈದಾನದಲ್ಲಿ ನಡೆದ ‘ಜನರಾಜ್ಯೋತ್ಸವ’ ಕಾರ್ಯಕ್ರಮದಲ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಅವರು, ಅನ್ಯಜಾತಿಯ ಯುವಕನನ್ನು ವಿವಾಹ ಆಗಿದ್ದ ಕಾರಣಕ್ಕೆ ತಂದೆಯೊಬ್ಬರು ಗರ್ಭಿಣಿ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ‘ಹುಬ್ಬಳ್ಳಿ ಸೇರಿ ಇತರೆಡೆ ನಡೆದ ಮರ್ಯಾದಾ ಹತ್ಯೆ ಕುರಿತ ವಿಚಾರ ಗಮನಕ್ಕಿದೆ. ಇದರ ತಡೆಗೆ ಕಾನೂನು ಜಾರಿಗೊಳಿಸಲು ಒತ್ತಾಯವಿದೆ. ಆದರೆ, ಕೇವಲ ಕಾನೂನು ತಂದರೆ ಸಾಲದು ಅದನ್ನು ಜಾರಿ ಮಾಡುವ ಕೆಲಸ ಕೂಡ ಗಂಭೀರವಾಗಿ ಆಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಲಿದೆ’ ಎಂದು ಹೇಳಿದರು.

ಗರ್ಭಿಣಿ ಮಗಳನ್ನೇ ಕೊಂದ ಪ್ರಕರಣ:

ಇತ್ತೀಚೆಗೆ ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ತಂದೆಯೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿತ್ತು.

ತಂದೆಯಿಂದ ಹತ್ಯೆಯಾದ ಮಾನ್ಯ ಪಾಟೀಲ್‌ ಮತ್ತು ಮದುವೆಯಾದ ಹುಡುಗ ವಿವೇಕಾನಂದ ಒಂದೇ ಗ್ರಾಮದವರಾಗಿದ್ದರು. ಇಬ್ಬರದ್ದೂ ಬೇರೆ ಬೇರೆ ಜಾತಿಯಾಗಿದ್ದರಿಂದ ಹುಡುಗಿಯ ಕುಟುಂಬದವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ವಿರೋಧದ ನಡುವೆ ಮೇ ತಿಂಗಳಲ್ಲಿ ಇಬ್ಬರ ಮದುವೆಯಾಗಿತ್ತು. ಮದುವೆ ನಂತರ ಇಬ್ಬರೂ ಪ್ರಾಣ ಭಯದಿಂದ ಹಾವೇರಿಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ವಾಪಸ್‌ ಇನಾಂ ವೀರಾಪುರಕ್ಕೆ ಬಂದು ಸಂಸಾರ ನಡೆಸುತ್ತಿದ್ದರು.

ಮರ್ಯಾದೆ ಹಾಳು ಮಾಡಿದ್ದಾಳೆಂದು ಮಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಮಗಳು ವಾಪಸ್‌ ಬಂದಿರುವ ಮಾಹಿತಿ ತಿಳಿದ ಹುಡುಗಿಯ ತಂದೆ ಹಾಗೂ ಕುಟುಂಬಸ್ಥರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವಿವೇಕಾನಂದ ಹಾಗೂ ಆತನ ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ. ಇಷ್ಟಾಗಿ ಸುಮ್ಮನಾಗದೆ ಹುಡುಗನ ಮನೆಗೆ ತೆರಳಿ ಮಗಳು ಮಾನ್ಯ ಸೇರಿದಂತೆ ಮನೆಯಲ್ಲಿ ಇದ್ದ ಎಲ್ಲರ ಮೇಲೆ ಹಲ್ಲೆ ಮಾಡಿದ್ದರು. ತನ್ನ ಕುಟುಂಬದ ಮರ್ಯಾದೆ ಹಾಳು ಮಾಡಿದ್ದಾಳೆಂದು ಮಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ತೀವ್ರ ಗಾಯಗಳಿಂದಾಗಿ ಮಗಳು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಳು.

ಘಟನೆ ಬಗ್ಗೆ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಇಂತಹ ಮರ್ಯಾದಾ ಹತ್ಯೆ ಘಟನೆ ತಡೆಯಲು ವಿಶೇಷವಾದ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ