ಬಿಜೆಪಿಯಲ್ಲಿನ ಒಳಬೇಗುದಿ ಸ್ಪೋಟ : ವರಿಷ್ಠರ ವಿರುದ್ಧ ತಿರುಗಿ ಬೀಳುವ ಮೂಲಕ ಸೊರಬ ಬಿಜೆಪಿ ಬಣ ರಾಜಕೀಯ ಉಲ್ಬಣ

KannadaprabhaNewsNetwork |  
Published : Nov 29, 2024, 01:02 AM ISTUpdated : Nov 29, 2024, 12:19 PM IST
ಫೋಟೊ:೨೮ಕೆಪಿಸೊರಬ-೦೧ : ಸೊರಬ ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಎಂ.ಡಿ. ಉಮೇಶ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. | Kannada Prabha

ಸಾರಾಂಶ

ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣಾ ಕಾಲಕ್ಕೆ ಬೂದಿ ಮುಚ್ಚಿದ ಕೆಂಡವಾಗಿದ್ದ ತಾಲೂಕು ಬಿಜೆಪಿಯಲ್ಲಿನ ಒಳಬೇಗುದಿ ಸ್ಪೋಟಗೊಂಡಿದ್ದು, ಜಿಲ್ಲಾ ವರಿಷ್ಠರ ವಿರುದ್ಧ ತಿರುಗಿ ಬೀಳುವ ಮೂಲಕ ತಾಲೂಕು ಬಿಜೆಪಿಯಲ್ಲಿ ಬಣ ರಾಜಕೀಯ ಇನ್ನಷ್ಟು ಉಲ್ಬಣವಾಗುವ ಲಕ್ಷಣಗಳು ಗೋಚರಿಸುತ್ತಿವೆ.

  ಸೊರಬ : ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣಾ ಕಾಲಕ್ಕೆ ಬೂದಿ ಮುಚ್ಚಿದ ಕೆಂಡವಾಗಿದ್ದ ತಾಲೂಕು ಬಿಜೆಪಿಯಲ್ಲಿನ ಒಳಬೇಗುದಿ ಸ್ಪೋಟಗೊಂಡಿದ್ದು, ಜಿಲ್ಲಾ ವರಿಷ್ಠರ ವಿರುದ್ಧ ತಿರುಗಿ ಬೀಳುವ ಮೂಲಕ ತಾಲೂಕು ಬಿಜೆಪಿಯಲ್ಲಿ ಬಣ ರಾಜಕೀಯ ಇನ್ನಷ್ಟು ಉಲ್ಬಣವಾಗುವ ಲಕ್ಷಣಗಳು ಗೋಚರಿಸುತ್ತಿವೆ.ಗುರುವಾರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಆಪ್ತ ವಲಯ ಹಾಗೂ ಮಾಜಿ ಪುರಸಭಾ ಅಧ್ಯಕ್ಷ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಎಂ.ಡಿ. ಉಮೇಶ ಅವರು ಪತ್ರಿಕಾಗೋಷ್ಠಿ ನಡೆಸಿ ಕುಮಾರ್ ಬಂಗಾರಪ್ಪ ವಿರುದ್ಧ ನಮೋ ವೇದಿಕೆ ರಚಿಸಿಕೊಂಡು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ಪಕ್ಷ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

2024ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದ ಕುಮಾರ ಬಂಗಾರಪ್ಪ ಅವರನ್ನು ಪರಾಜಿತರನ್ನಾಗಿ ಮಾಡಬೇಕು ಎನ್ನುವ ಜಿದ್ದು ಕಟ್ಟಿಕೊಂಡು ನಮೋ ವೇದಿಕೆ ಹುಟ್ಟು ಹಾಕಿದ್ದ ಕೆಲವು ಮುಖಂಡರು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಜತೆಗೆ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಮಧು ಬಂಗಾರಪ್ಪ ಅವರ ಗೆಲುವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ನಮೋ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಗಜಾನನರಾವ್, ಎ.ಎಲ್. ಅರವಿಂದ, ಸುರೇಂದ್ರಗೌಡ, ವಿಜಯೇಂದ್ರಗೌಡ, ಎಂ.ಕೆ. ಯೋಗೇಶ್ ಸೇರಿದಂತೆ ಸುಮಾರು 18 ಜನರಿಗೆ ಜಿಲ್ಲಾ ಮತ್ತು ತಾಲೂಕು ಬಿಜೆಪಿಯಲ್ಲಿನ ವಿವಿಧ ಹುದ್ದೆಗಳಿಂದ ತೆರವುಗೊಳಿಸಿಲ್ಲ. ಇತ್ತೀಚಿನ ಶಕ್ತಿ ಕೇಂದ್ರಗಳ ಸಂಘಟನಾ ಪರ್ವಕ್ಕೂ ಅವರನ್ನೇ ನೇಮಕಮಾಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನಿಷ್ಟೆ ತೋರಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿ ಸುಮಾರು 54 ಸಾವಿರ ಮತಗಳು ಹಾಗೂ ಲೋಕಸಭಾ ಚುನಾವಣೆಯಲ್ಲಿ ಅಧಿಕ ಅಂತರದ ಮತಗಳು ಚಲಾವಣೆಯಾಗಲು ಕುಮಾರ ಬಂಗಾರಪ್ಪ ಕಾರಣರಾಗಿದ್ದಾರೆ ಎಂದು ತಿಳಿಸಿದರು.ಪಕ್ಷದಲ್ಲಿ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿರುವ ಸಮಸ್ಯೆಗೆ ನಮೋ ವೇದಿಕೆಯೇ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಇನ್ನಷ್ಟು ಬಿರುಕು ಬಿಡುವ ಕಾಲ ದೂರವಿಲ್ಲ. ಇದನ್ನು ರಾಜ್ಯ ವರಿಷ್ಠರೂ ಸಹ ಗಮನಿಸಬೇಕು ಎನ್ನುವುದು ಕುಮಾರ ಬಂಗಾರಪ್ಪ ಅವರ ಬೆಂಬಲಿಗರ ಒತ್ತಾಯವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಪಕ್ಷೀಯರಿಂದಲೇ ಸೋಲು ಅನುಭವಿಸುವಂತಾಗಿದೆ ಎಂದು ಕಳೆದ ಒಂದೂವರೆ ವರ್ಷದಿಂದ ಬಿಜೆಪಿ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಗೊಳ್ಳದೇ ಅಂತರ ಕಾಯ್ದುಕೊಂಡು ಮೌನಕ್ಕೆ ಶರಣಾಗಿದ್ದ ಮಾಜಿ ಸಚಿವ ಕುಮಾರ ಬಂಗಾರಪ್ಪ ನಮೋ ವೇದಿಕೆ ಮುಖಂಡರ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಮೂಲಕ ತಮ್ಮ ಬೆಂಬಲಿಗರಿಂದ ಜಿಲ್ಲಾ ವರಿಷ್ಠರ ಮುಂದೆ ದಾಳ ಉರುಳಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ನಮೋ ವೇದಿಕೆ ಕಾರಣ. ಪಕ್ಷದ ಅಭ್ಯರ್ಥಿ ವಿರುದ್ಧ ನಡೆಸಿದ ಪ್ರಚಾರ ಮತ್ತು ಕಾಂಗ್ರೆಸ್‌ನೊಂದಿಗಿನ ಒಳ ಒಪ್ಪಂದದಿಂದ ಕುಮಾರ ಬಂಗಾರಪ್ಪ ತಾಲೂಕಿನ ಅಭಿವೃದ್ಧಿ ಮಾಡಿಯೂ ಸೋತಿದ್ದಾರೆ. ಆದರೆ ಕಳೆದ 5 ವರ್ಷಗಳಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವವರಿಗೆ ಜಿಲ್ಲೆ ಮತ್ತು ತಾಲೂಕಿನಲ್ಲಿ ಮನ್ನಣೆ ನೀಡಲಾಗಿದೆ. ನಮೋ ವೇದಿಕೆ ವಿರುದ್ಧ ಕ್ರಮ ಜರುಗಿಸದ ಅಸಮರ್ಥ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು ತಕ್ಷಣ ರಾಜಿನಾಮೆ ನೀಡಬೇಕು.

ಎಂ.ಡಿ. ಉಮೇಶ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ