ಜ್ಞಾನ ಕಾರ್ಯಗಳಿಗೆ ಆದ್ಯತೆ ನೀಡಿ

KannadaprabhaNewsNetwork |  
Published : Aug 10, 2026, 01:15 AM IST
46 | Kannada Prabha

ಸಾರಾಂಶ

Sosale Sri, 10th Chaturmasa Vrat Acceptance

ಕನ್ನಡಪ್ರಭ ವಾರ್ತೆ ಮೈಸೂರು

ಜ್ಞಾನ ಕಾರ್ಯಗಳಿಗೆ ಆದ್ಯತೆ ನೀಡುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಸೋಸಲೆ ಶ್ರೀ ವ್ಯಾಸರಾಜರ ಮಠಾಧೀಶರಾದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ತಿಳಿಸಿದರು.

ತಿರುಮಕೂಡಲು ವ್ಯಾಸರಾಜರ ಮಠದಲ್ಲಿ ಶನಿವಾರ 10ನೇ ಚಾತುರ್ಮಾಸ ವ್ರತ ದೀಕ್ಷೆ ಸ್ವೀಕರಿಸಿ ಸಂದೇಶ ನೀಡಿದ ಅವರು, ಜೀವನದ ಪ್ರತಿಯೊಂದು ಕ್ಷಣವೂ ಅಮೂಲ್ಯ. ದಿನ ಮತ್ತು ವರ್ಷ ಕಳೆದಂತೆ ಆಯುಷ್ಯ ಕಡಿಮೆ ಆಗುತ್ತಿರುತ್ತದೆ. ಹೀಗಾಗಿ, ಒಂದೊಂದು ಕ್ಷಣವನ್ನೂ ಸಾಧನೆಗೆ ಬಳಸಿಕೊಳ್ಳಬೇಕು ಎಂದರು.

ಸಜ್ಜನರ ಸಂಘ ಮತ್ತು ಗುರು ಕೃಪೆಯಿಂದ ಗಳಿಸುವ ಜ್ಞಾನವೇ ನಮ್ಮನ್ನು ಸದಾ ಎತ್ತರಕ್ಕೆ ಕೊಂಡೊಯ್ಯುತ್ತದೆ. ಸಜ್ಜನರು, ಸಾಧಕರು, ತಪಸ್ವಿಗಳು ಮತ್ತು ಜ್ಞಾನಿಗಳು ಯಾವಾಗಲೂ ಚಾತಕ ಪಕ್ಷಿಗಳಂತೆ ಭಗವಂತನ ಕರುಣಾ ದೃಷ್ಟಿಗಾಗಿ ಕಾಯುತ್ತಿರುತ್ತಾರೆ. ಶ್ರೀಕೃಷ್ಣನೆಂಬ ಮೇಘವು ಅನುಗ್ರಹವೆಂಬ ಮಳೆಯನ್ನು ಸುರಿಸಲಿ ಎಂದು ಪ್ರಾರ್ಥಿಸುತ್ತಾರೆ. ಕೃಪೆಯ ವೃಷ್ಟಿಯಾದರೆ ಲೌಕಿಕ ಜೀವನದ ಯಾವ ಸಮಸ್ಯೆಗಳೂ ನಮ್ಮನ್ನು ಕಾಡಲಾರವು. ಆದಕಾರಣ ದಕ್ಷಿಣಾಯಣ ಪುಣ್ಯಕಾಲದ ಚಾತುರ್ಮಾಸ ವ್ರತ ಸ್ವೀಕಾರದ ಈ ಸಂದರ್ಭದಲ್ಲಿ ನಾವೆಲ್ಲರೂ ಭಗವಂತನ ಮಹಾಕೃಪೆಗಾಗಿ ಶ್ರದ್ಧೆಯಿಂದ ಪ್ರಾರ್ಥನೆ ಸಮರ್ಪಿಸೋಣ ಎಂದು ಅವರು ಹೇಳಿದರು.

ಚಾತುರ್ಮಾಸ ಪರ್ಯಂತ ನಾವೆಲ್ಲರೂ ವ್ರತ, ನಿಯಮ ಮತ್ತು ಆಹಾರ ಪದ್ಧತಿ ಅನುಸರಿಸೋಣ. ಶಾರೀರಿಕವಾಗಿ, ಮಾನಸಿಕವಾಗಿ ಸದೃಢರಾಗಿ ಜ್ಞಾನಕಾರ್ಯಗಳನ್ನು ಹೆಚ್ಚಾಗಿ ನಡೆಸೋಣ. ಮಹಾಗುರು ಶ್ರೀ ವ್ಯಾಸರಾಜರು ಹೇಳಿದ ಮಾರ್ಗದಲ್ಲಿ ಸಾಗಿ, ಮುಖ್ಯಪ್ರಾಣನನ್ನು ಅನಂತವಾಗಿ ಅರ್ಚಿಸೋಣ ಎಂದರು.

ಮಹಾ ಸಂಸ್ಥಾನದ ದಿವಾನರಾದ ಬ್ರಹ್ಮಣ್ಯ ಆಚಾರ್ಯ ಅವರು, ಚಾತುರ್ಮಾಸ ಸಂಕಲ್ಪ ವಿಧಿಗಳನ್ನು ಪಠಿಸಿದರು. ಮಠದ ವ್ಯವಸ್ಥಾಪಕ ಶ್ರೀಧರ, ಬಲಸೇವೆ ಕೃಷ್ಣಾಚಾರ್ಯ, ರಾಯರ ಹುಂಡಿ ಆನಂದ ಆಚಾರ್ಯ, ಗುರುಗಳ ಆಪ್ತ ಕಾರ್ಯದರ್ಶಿ ಅಭಿಜಿತ್ ಇದ್ದರು.

ಸಂಸ್ಥಾನ ಪೂಜೆ- ಹಸಿ ದರ್ಬಾರ್

ಚಾತುರ್ಮಾಸ ಸಂಕಲ್ಪಕ್ಕೂ ಮುನ್ನ ಸ್ವಾಮೀಜಿ ಸಂಸ್ಥಾನ ಪ್ರತಿಮಾ ಶ್ರೀ ಮೂಲ ಗೋಪಾಲಕೃಷ್ಣದೇವರ ಪೂಜೆ ನೆರವೇರಿಸಿ, ಪರಂಪರೆಯ ಹಿರಿಯ ಗುರುಗಳ ವೃಂದಾವನಗಳಿಗೆ ಹಸ್ತೋದಕ ಸಮರ್ಪಣೆ ಮಾಡಿದರು. ವಿದ್ವಾಂಸರಿಂದ ವೇದಘೋಷವಾದನಂತರ ವ್ರತ ಸಂಕಲ್ಪ ಮಾಡಿದರು. ನಂತರ ವಿಶೇಷ ವೇದಿಕೆಯಲ್ಲಿ ಶ್ರೀಗಳು ಸಾಂಪ್ರದಾಯಿಕ ವಸ್ತ್ರ, ಪೇಟಾ ಧರಿಸಿ ಹಸಿ ದರ್ಬಾರ್ ನಡೆಸಿ, ನೂರಾರು ಭಕ್ತರಿಗೆ ಮಂತ್ರಾಕ್ಷತೆ ಅನುಗ್ರಹ ಮಾಡಿದ್ದು ವಿಶೇಷವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಾಪ್‌ ರೈಟ್‌.....ಸಾವಳೇಶ್ವರ ವಿದ್ಯಾರ್ಥಿಗಳು ತಾಲೂಕುಮಟ್ಟಕ್ಕೆ ಆಯ್ಕೆ
12ರಂದು ಶಿರಾ ತಾಲೂಕಿನಲ್ಲಿ ಬೈಕ್‌ ರ್ಯಾಲಿ