ಕುಮಟಾ: ಸಮಾಜಕ್ಕಾಗಿ ಕೆಲಸ ಮಾಡುವ ಸೌರಭದಂತಹ ಸಂಘಟನೆಯ ಮೂಲಕ ಅದರ ಸದಸ್ಯರು ಸಮಾಜ ಋಣ ತೀರಿಸಲು ಮುಂದಾಗಿರುವುದು ಇತರರಿಗೆ ಆದರ್ಶ ಕಾರ್ಯವಾಗಿದೆ ಎಂದು ''''ಥಟ್ ಅಂತ ಹೇಳಿ'''' ಕಾರ್ಯಕ್ರಮದ ಖ್ಯಾತಿಯ ಡಾ. ನಾ. ಸೋಮೇಶ್ವರ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಂ. ಗಣಪತಿ ಭಟ್ಟ ಹಾಸಣಗಿ, ನಾನು ಕಾಲೇಜು ದಿನಗಳಲ್ಲಿಯೇ ಸಂಗೀತ ಕಲಿಯಲು ಮುಂದಾದೆ. ನನ್ನೊಳಗಿದ್ದ ಬೇಡಗಳನ್ನು ತೆಗೆದು, ಬೇಕಾಗಿದ್ದನ್ನು ತಿದ್ದಿ ತೀಡಿ ಈ ರೀತಿಯಾಗಿ ರೂಪಿಸಿರುವುದರಲ್ಲಿ ಗುರುಗಳ ಕಾರ್ಯ ಮಹತ್ವದ್ದು, ನನ್ನದು ಏನೂ ಇಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೌರಭದ ಅಧ್ಯಕ್ಷ ಶ್ರೀಕಾಂತ ಭಟ್ಟ ತುಂಬಲೆಮಠ ಮಾತನಾಡಿ, ಆರ್ಥಿಕ, ರಾಜಕೀಯ, ಇತರ ಯಾವುದೇ ಉದ್ದೇಶವಿಲ್ಲದೆ, ಸುಧೋರಣೆಯ ಕಲಾಸಕ್ತರ, ಕಲಾವಿದರ, ಪ್ರಾಯೋಜಕರ ನೆರವಿನಿಂದ ನಮ್ಮ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುತ್ತಾ ಬಂದ ಸಂತೃಪ್ತಿ ಹೊಂದಿರುವ ಸಾಂಸ್ಕೃತಿಕ ಸಂಘಟನೆ ನಮ್ಮದು. ಈ ಸಂಘಟನೆಯು ಯಶಸ್ವಿಯಾಗಿ ರಜತ ಸಂಭ್ರಮ ಆಚರಿಸಿದ್ದು, ಎಲ್ಲರ ಸಹಕಾರದಿಂದ ಎಂದರು.ಉಪಾಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಸೌರಭದ ಹಿನ್ನೋಟ ಹಾಗೂ ಮುನ್ನೋಟ ತೆರೆದಿಡುತ್ತಾ, ರಾಜ್ಯದ ಎಲ್ಲ ಭಾಗಗಳಲ್ಲಿ ಸಂಗೀತ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ನಡೆಯುವಾಗ ಕುಮಟಾದಲ್ಲಿ ಅಂತಹ ಸದಭಿರುಚಿಯ ಸಂಸ್ಥೆ ಇರಲಿಲ್ಲ. ಹೀಗಾಗಿ ಹಿರಿಯರೆಲ್ಲರ ಮಾತಿನಂತೆ ಸೌರಭ ಸಂಘಟನೆ ಹುಟ್ಟುಹಾಕಿ ಸದಭಿರುಚಿಯ ಕಾರ್ಯಕ್ರಮ ಹಮ್ಮಿಕೊಂಡು ಬಂದಿದ್ದೇವೆ. ಉತ್ತರ ಕನ್ನಡದಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಿಸುವುದು, ಮುಂದಿನ ಪೀಳಿಗೆಗೆಯನ್ನು ಕಲಾಸಕ್ತರಾಗಿಸುವುದು ನಮ್ಮ ಗುರಿ ಎಂದರು.
ಮುಂಜಾನೆ ’ಉದಯರಾಗ ಸೌರಭ’ ಕಾರ್ಯಕ್ರಮದಲ್ಲಿ ಖ್ಯಾತ ಹಿಂದುಸ್ತಾನಿ ಗಾಯಕ ಪಂ. ಶ್ರೀಪಾದ ಹೆಗಡೆ, ಕಂಪ್ಲಿ ಅವರು ಉದಯರಾಗದಲ್ಲಿ ವಸಂತಮುಖಾರಿ ರಾಗ ಪ್ರಸ್ತುತಪಡಿಸಿದರು. ’ಕಾವ್ಯಾಭಿನಯ ಸೌರಭ’ ಕಾರ್ಯಕ್ರಮದಲ್ಲಿ ಡಾ. ಶ್ರೀಪಾದ ಭಟ್ ಪರಿಕಲ್ಪನೆಯ ’ಹಕ್ಕಿ ಮತ್ತು ಅವಳು’ ಕಾವ್ಯಾಭಿನಯವನ್ನು ಉಡುಪಿ, ಕೋಟದ ಸುವಿಕಾ ಸಾಂಸ್ಕೃತಿಕ ಸಂಘಟನೆಯ ಕಾವ್ಯಾ ಹಂದೆ ಪ್ರಸ್ತುತಪಡಿಸಿದಳು.
’ಯಕ್ಷ-ಗಾನ- ವ್ಯಾಖ್ಯಾನ ಸೌರಭ’ ಕಾರ್ಯಕ್ರಮದಲ್ಲಿ ವಿದ್ವಾನ್ ಗಣಪತಿ ಭಟ್ಟ ಯಲ್ಲಾಪುರ, ವಿದ್ವಾನ್ ಕೆ. ಶ್ರೀಪತಿ ಉಪಾಧ್ಯಾಯ, ಮೃದಂಗದಲ್ಲಿ ಬಾಲಚಂದ್ರ ಭಾಗ್ವತ್, ವಯೋಲಿನ್‌ನಲ್ಲಿ ಶರ್ಮಿಳಾ ರಾವ್, ಉಡುಪಿ ಪಾಲ್ಗೊಂಡರು. ಎಂ.ಎ. ಹೆಗಡೆ ದಂಟಕಲ್ ವಿರಚಿತ ’ದಶಾವತಾರ’ದ ಅನನ್ಯ ಪ್ರಸ್ತುತಿ ’ಲೀಲಾವತಾರಮ್’ ರೂಪಕವನ್ನು, ತುಳಸಿ ಹೆಗಡೆ ಯಕ್ಷ ರೂಪಕದಲ್ಲಿ ರಂಜಿಸಿದಳು. ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಮೃದಂಗದಲ್ಲಿ ಶಂಕರ ಭಾಗ್ವತ್ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಕೆಸರಕೊಪ್ಪ, ಪ್ರಸಾಧನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕರಿಸಿದರು.