ಕನ್ನಡಪ್ರಭ ವಾರ್ತೆ ದಾವಣಗೆರೆ
ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ಸಿದ್ದಪಡಿಸುವ ಕೆಲಸ ಆರಂಭವಾಗಿದ್ದು 2025ರ ನವೆಂಬರ್ 1ಕ್ಕೆ ಮೂರು ವರ್ಷಗಳ ಹಿಂದೆ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಪದವಿ ಅಂಕಪಟ್ಟಿ ಅಥವಾ ಪದವಿ ಉತ್ತೀರ್ಣ ಪ್ರಮಾಣಪತ್ರವನ್ನು ನಿಗದಿತ ನಮೂನೆಯೊಂದಿಗೆ ಮತದಾರರ ನೋಂದಣಿ ಅಧಿಕಾರಿಗಳಿಗೆ ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಮಾತನಾಡಿದರು.
ಆಗ್ನೇಯ ಪದವೀಧರರ ಕ್ಷೇತ್ರದ ವ್ಯಾಪ್ತಿಗೆ ದಾವಣಗೆರೆ, ಹರಿಹರ ಹಾಗೂ ಜಗಳೂರು ತಾಲೂಕುಗಳು ಒಳಪಡುತ್ತವೆ. ಈ ತಾಲ್ಲೂಕು ವ್ಯಾಪ್ತಿಯಲ್ಲಿ ಕನಿಷ್ಠ 6 ತಿಂಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಕಾಯಂ ನಿವಾಸಿಯಾಗಿದ್ದಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನಮೂನೆ-18ರಲ್ಲಿ ಭರ್ತಿ ಮಾಡಿ ನಿವಾಸಿ ಸ್ಥಾನದ 11 ದಾಖಲೆಗಳಲ್ಲಿ ಒಂದನ್ನು ಹಾಗೂ ಪದವಿ ದಾಖಲೆಗಳೊಂದಿಗೆ ದಾವಣಗೆರೆ ತಾಲೂಕು ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.ಚುನಾವಣಾ ಆಯೋಗವು ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆಗೆ ಸೆ.30ರಂದು ಅಧಿಸೂಚನೆ ಹೊರಡಿಸಿದ್ದು ನಮೂನೆ 18ರೊಂದಿಗೆ ನೋಂದಣಿಗೆ ನ.6ರೊಳಗೆ ಸಲ್ಲಿಸಬೇಕು. ನ.25ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಡಿ.10ರೊಳಗೆ ಸಲ್ಲಿಸಬೇಕು. ನಂತರ ಡಿ.30ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದರು.
ಪದವೀಧರ ಕ್ಷೇತ್ರದ ಮತದಾರರಾಗಲು 2022ರ ನವೆಂಬರ್ 1ಕ್ಕೂ ಪೂರ್ವ ಅಥವಾ 2025ರ ನವೆಂಬರ್ 1ಕ್ಕೆ 3 ವರ್ಷಗಳ ಹಿಂದೆ ಪದವಿ ಉತ್ತೀರ್ಣರಾಗಿರಬೇಕು. ಇವರು ಮಾತ್ರ ಮತದಾರರಾಗಲು ಅರ್ಹತೆ ಪಡೆಯುತ್ತಾರೆ ಎಂದರು.ಜಿಲ್ಲಾಧಿಕಾರಿಗಳು ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿದ್ದು ದಾವಣಗೆರೆ, ಹರಿಹರ, ಜಗಳೂರು ತಾಲೂಕುಗಳಿಗೆ ಸಂಬಂಧಿಸಿದಂತೆ 08192-234640, 7259700555, ದಾವಣಗೆರೆ ಗ್ರಾಮಾಂತರಕ್ಕೆ ಉಪವಿಭಾಗಾಧಿಕಾರಿ ಸಂತೋಷ ಕುಮಾರ: 08192-272955, 9845482973, ದಾವಣಗೆರೆ ನಗರ ಉತ್ತರ ಮತ್ತು ಕಸಬಾ ಹೋಬಳಿ ವ್ಯಾಪ್ತಿಗೆ ಮಮತಾ ಹೊಸಗೌಡರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ: 99480863001, ಮಹಾನಗರ ಪಾಲಿಕೆ ವ್ಯಾಪ್ತಿಗೆ ಆಯುಕ್ತರಾದ ರೇಣುಕಾ: 9902982111, ಹರಿಹರ ತಾಲೂಕಿಗೆ ದೂಡಾ ಆಯುಕ್ತ ಹುಲಿಮನಿ ತಿಮ್ಮಣ್ಣ: 9538302836, ಜಗಳೂರು ತಾಲೂಕಿಗೆ ಸಹಕಾರ ಸಂಘಗಳ ಉಪ ನಿಬಂಧಕ ಮಧು ಶ್ರೀನಿವಾಸ್.ಟಿ ಇವರು ಸಹಾಯಕ ನೊಂದಣಾಧಿಕಾರಿಯಾಗಿದ್ದು ಹೆಚ್ಚಿನ ಮಾಹಿತಿಗೆ 9945979177 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.
ಸಮೀಕ್ಷೆ ಕೈಗೊಳ್ಳದ ಮತ್ತು ತಾತ್ಸಾರ ಮಾಡಿದ ಒಟ್ಟು 4 ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಇದರಲ್ಲಿ ಸಕಾರಣ ನೀಡಿದ ಕಾರ್ಯದರ್ಶಿಯ ಅಮಾನತು ವಾಪಸ್ ಪಡೆಯಲಾಗಿದೆ. ಉಳಿದ ಮೂರು ಸಿಬ್ಬಂದಿಯನ್ನು ಅಮಾನತು ಮಾಡಿ ಇಲಾಖೆ ವಿಚಾರಣೆ ನಡೆಸಲಾಗುತ್ತಿದೆ ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಇದ್ದರು.