- ಜಿಲ್ಲಾ ಕ್ರೀಡಾಂಗಣದಲ್ಲಿ ಹಿರಿಯ ಪುರುಷರು, ಮಹಿಳೆಯರಿಗೆ ಆಯೋಜನೆ: ದಿನೇಶ್ ಕೆ. ಶೆಟ್ಟಿ - - -
- ಬೆಳಗ್ಗೆ 8 ಗಂಟೆಗೆ ಪಂದ್ಯಾವಳಿ ಆರಂಭ 2 ಮ್ಯಾಟ್ ಅಂಕಣಗಳಲ್ಲಿ ಹಣಾಹಣಿ- 90 ಪುರುಷ, 90 ಮಹಿಳಾ ಖೋ ಖೋ ಪಟುಗಳು, 36 ತರಬೇತುದಾರರು ಮತ್ತು ವ್ಯವಸ್ಥಾಪಕರು
- 32 ರೆಫರಿಗಳು, 30 ತಾಂತ್ರಿಕ ಅಧಿಕಾರಿಗಳು, ಸ್ವಯಂಸೇವಕರು- ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಎಲ್ಲರಿಗೂ ವಸತಿ, ಊಟದ ವ್ಯವಸ್ಥೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಕ್ಷಿಣ ಭಾರತಮಟ್ಟದ 31ನೇ ಹಿರಿಯ ಪುರುಷ ಮತ್ತು ಮಹಿಳೆಯರ ಖೋ ಖೋ ಚಾಂಪಿಯನ್‌ಶಿಪ್ ಇದೇ ಅ.24 ರಿಂದ 26ರವರೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ ಎಂದು ದಾವಣಗೆರೆ ಜಿಲ್ಲಾ ಖೋ ಖೋ ಸಂಸ್ಥೆ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.ಶನಿವಾರ ಸಂಜೆ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಟೂರ್ನಿ ಆಯೋಜನೆ ಸಿದ್ಧತೆ ಕುರಿತು ಮಾಹಿತಿ ನೀಡಿದ ಅವರು, ದಕ್ಷಿಣ ಭಾರತ ಖೋ ಖೋ ಕಮಿಟಿ, ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ, ಜಿಲ್ಲಾ ಖೋ ಖೋ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕ್ರೀಡಾ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ 31ನೇ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ಹೇಳಿದರು.
3 ದಿನಗಳ ಟೂರ್ನಿಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ಪುದುಚೇರಿ ರಾಜ್ಯಗಳ 6 ಪುರುಷ ಹಾಗೂ 6 ಮಹಿಳಾ ತಂಡಗಳು ಸೇರಿ ಒಟ್ಟು 12 ತಂಡಗಳು ಪಾಲ್ಗೊಳ್ಳಲಿವೆ. ಅ.24ರಂದು ಬೆಳಗ್ಗೆ 8 ಗಂಟೆಗೆ ಪಂದ್ಯಾವಳಿ ಆರಂಭವಾಗಲಿದೆ. ಜಿಲ್ಲಾ ಕ್ರೀಡಾಂಗಣದ ಎರಡು ಮ್ಯಾಟ್ ಅಂಕಣಗಳಲ್ಲಿ ಪಂದ್ಯಗಳು ನಡೆಯಲಿವೆ. ಈ ಪೈಕಿ ಒಂದು ಅಂಕಣದಲ್ಲಿ ಹೊನಲು ಬೆಳಕಿನ ಪಂದ್ಯಗಳನ್ನು ನಡೆಸಲಾಗುತ್ತದೆ ಎಂದರು.90 ಪುರುಷ, 90 ಮಹಿಳಾ ಖೋ ಖೋ ಪಟುಗಳು, 36 ತರಬೇತುದಾರರು ಮತ್ತು ವ್ಯವಸ್ಥಾಪಕರು, 32 ರೆಫರಿಗಳು, 30 ತಾಂತ್ರಿಕ ಅಧಿಕಾರಿಗಳು, ಸ್ವಯಂಸೇವಕರು ಸೇರಿ 300ಕ್ಕೂ ಹೆಚ್ಚು ಮಂದಿ ಕ್ರೀಡಾಕೂಟದ ಭಾಗವಹಿಸಲಿದ್ದು, ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಎಲ್ಲರಿಗೂ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಾವಳಿ ಜರುಗಲಿದೆ. ಪ್ರತಿ ತಂಡ ಎಲ್ಲ ತಂಡಗಳೊಂದಿಗೆ ಪಂದ್ಯ ಆಡಲಿವೆ. ಭಾರತೀಯ ಖೋ ಖೋ ಫೆಡರೇಷನ್ ಹೊಸ ನಿಯಮಗಳ ಅನುಸಾರವೇ ಪಂದ್ಯಗಳು ನಡೆಯಲಿವೆ ಎಂದರು.
ಅ.24ರಂದು ಸಂಜೆ 6.30ಕ್ಕೆ ತಮ್ಮ ಅಧ್ಯಕ್ಷತೆಯಲ್ಲಿ ಪಂದ್ಯಾವಳಿಯನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ, ಕೆಕೆಎಫ್‌ಐ ಆಡಳಿತಾಧಿಕಾರಿ ಎಂ.ಎಸ್.ತ್ಯಾಗಿ, ಉಪಾಧ್ಯಕ್ಷ ಸೀತಾರಾಮ ರೆಡ್ಡಿ, ಇತರೆ ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕೆಎಸ್‌ಕೆಕೆಐ ಅಧ್ಯಕ್ಷ ಲೋಕೇಶ್ವರ, ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಜೆ.ರಾಮಲಿಂಗಪ್ಪ, ಶಿವಯೋಗಿ ಎಲೆ, ಖೋ ಖೋ ಕೋಚ್ ರಘು, ಕಾಂಗ್ರೆಸ್ ಮುಖಂಡ ಶಶಿ ಹುಲಿಕುಂಟೆ ಮಠ್, ಹಿರಿಯ ಕಬಡ್ಡಿ ಪಟು ಮಲ್ಲಿಕಾರ್ಜುನ್, ಎನ್.ಕೆ.ಕೊಟ್ರೇಶ್ ಇತರರಿದ್ದರು.
- - --19ಕೆಡಿವಿಜಿ42: ದಿನೇಶ ಕೆ. ಶೆಟ್ಟಿ