ಬೆಂಗಳೂರಿನಲ್ಲಿ 26ರಂದು ವಿದ್ಯುತ್ ಬಳಕೆದಾರರ ದಕ್ಷಿಣ ಭಾರತ ವಲಯ ಸಮಾವೇಶ: ಜ್ಞಾನಮೂರ್ತಿ

KannadaprabhaNewsNetwork |  
Published : Oct 15, 2025, 02:07 AM IST
ವಿ.ಜ್ಞಾನಮೂರ್ತಿ  | Kannada Prabha

ಸಾರಾಂಶ

ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘ ದೇಶಾದ್ಯಂತ ಗ್ರಾಹಕರ ಆಂದೋಲನವನ್ನು ಬೆಳೆಸುತ್ತಿದೆ. ಅದರ ಭಾಗವಾಗಿ ನಾಲ್ಕು ಭಾಗಗಳಲ್ಲಿ ವಲಯವಾರು ಸಮಾವೇಶ ಸಂಘಟಿಸಲಾಗುತ್ತಿದೆ.

ಬಳ್ಳಾರಿ: ವಿದ್ಯುತ್ ಖಾಸಗೀಕರಣ ಹಾಗೂ ಸ್ಮಾರ್ಟ್ ಮೀಟರ್ ವಿರುದ್ಧ ಹೋರಾಟವನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಅ. 26ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತ ವಲಯದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ವಿದ್ಯುತ್ ಬಳಕೆದಾರರ ಸಂಘದ ರಾಜ್ಯ ಕಾರ್ಯದರ್ಶಿ ವಿ. ಜ್ಞಾನಮೂರ್ತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘ ದೇಶಾದ್ಯಂತ ಗ್ರಾಹಕರ ಆಂದೋಲನವನ್ನು ಬೆಳೆಸುತ್ತಿದೆ. ಅದರ ಭಾಗವಾಗಿ ನಾಲ್ಕು ಭಾಗಗಳಲ್ಲಿ ವಲಯವಾರು ಸಮಾವೇಶ ಸಂಘಟಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಜರುಗುವ ಸಮಾವೇಶದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಪುದುಚೇರಿ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳ ಗ್ರಾಹಕರ ಪ್ರತಿನಿಧಿಗಳು ಭಾಗವಹಿಸಲಿದ್ದು, ಆಲ್ ಇಂಡಿಯಾ ಎಲೆಕ್ಟ್ರಿಸಿಟಿ ಕಂಜೂಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಸ್ವಪನ್ ಘೋಷ್ ಅವರು ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಹಾಗೂ ಹರಿಯಾಣ ವಿದ್ಯುತ್ ಮಂಡಳಿಯ ಮಾಜಿ ಅಧ್ಯಕ್ಷ ಎಂ.ಜಿ.ದೇವಸಹಾಯಂ, ಆಂಧ್ರಪ್ರದೇಶದ ಮಾಜಿ ಸಂಸದ ಹಾಗೂ ಸಂಯುಕ್ತ ಕೃಷಿ ಮೋರ್ಚಾ ಸಂಚಾಲಕ ವಡ್ಡೆ ಸೋಭನಾದ್ರೀಶ್ವರ ಅವರು ಸೇರಿದಂತೆ ವಿವಿಧ ರಾಜ್ಯಗಳ ಹೋರಾಟಗಾರರು ಭಾಗವಹಿಸುವರು ಎಂದು ತಿಳಿಸಿದರು.

ವಿದ್ಯುತ್ ಜನರ ಹಕ್ಕು ಹಾಗೂ ಅಗತ್ಯ ಸೇವೆ. ಅದನ್ನು ಲಾಭಕೋರರ ವ್ಯಾಪಾರ ಸರಕಾಗಲು ಬಿಡಬಾರದು. ದೇಶ ಸ್ವಾತಂತ್ರ್ಯಗೊಂಡ ತರುವಾಯ ವಿದ್ಯುತ್‌ನ್ನು ಉತ್ಪಾದಿಸಿ ಲಾಭ ಮತ್ತು ನಷ್ಟ ನೋಡದೆ ಅದನ್ನು ಕಟ್ಟಕಡೆಯ ಗ್ರಾಹಕರಿಗೂ ಲಭಿಸುವಂತೆ ಕನಿಷ್ಠ ದರದಲ್ಲಿ ಒದಗಿಸುವುದು ಸರ್ಕಾರಗಳ ಆದ್ಯತೆಯಾಗಿತ್ತು. ಆದರೆ, 90 ರ ದಶಕದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಾಗತೀಕರಣ ಹಾಗೂ ಉದಾರೀಕರಣ ನೀತಿಗಳನ್ನು ಜಾರಿಗೊಳಿಸಿದ ಬಳಿಕ ವಿದ್ಯುತ್ ಬಳಕೆಯ ಧೋರಣೆಯೇ ಬದಲಾಯಿತು. 2003ರಲ್ಲಿ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಖಾಸಗಿ ಕಂಪನಿಗಳಿಗೆ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅವಕಾಶ ನೀಡಲಾಯಿತು. ಇದರ ಪರಿಣಾಮವಾಗಿ ದೇಶದ ಶೇ.50ಕ್ಕೂ ಹೆಚ್ಚು ವಿದ್ಯುತ್ ಕಂಪನಿಗಳು ಖಾಸಗಿಯವರ ಹಿಡಿತ ಸೇರಿದವು. ಇತ್ತೀಚೆಗೆ ವಿದ್ಯುತ್ ಮಸೂದೆ 2022 ಮೂಲಕ ಹೊಸ ತಿದ್ದುಪಡಿ ಮಾಡಿ ಜನರ ವಿರೋಧದ ನಡುವೆಯೂ ಸಂಸತ್ತಿನಲ್ಲಿ ತರಾತುರಿಯಲ್ಲಿ ಮಂಡಿಸಿ, ಯತ್ನಿಸಿ ವಿದ್ಯುತ್ ಸರಬರಾಜನ್ನು ಸಹ ಖಾಸಗಿ ಕಂಪನಿಗಳ ಕೈಗೆ ಒಪ್ಪಿಸಲು ಕೇಂದ್ರ ಸರ್ಕಾರ ಹೊರಟಿದೆ. ಇದರಿಂದ ಸ್ಮಾರ್ಟ್ ಮೀಟರ್, ಪ್ರಿ ಪೇಡ್ ಮೀಟರ್‌ ಮತ್ತು ಟವೊಟಿ ಎಂಬ ಹೊಸ ಕ್ರಮಗಳನ್ನು ಜಾರಿಗೆ ತರಲು ಬಹುತೇಕ ಎಲ್ಲ ರಾಜ್ಯಗಳು ಸಜ್ಜಾಗಿವೆ. ನಮ್ಮ ರಾಜ್ಯ ಸರ್ಕಾರ ಸಹ ಸ್ಮಾರ್ಟ್ ಮೀಟರ್ ಅಳವಡಿಕೆ, ವಾಣಿಜ್ಯ ದರ ಏರಿಕೆ ಕ್ರಮಕ್ಕೆ ಮುಂದಾಗಿದೆ. ನೌಕರರಿಗೆ ಗ್ರಾಚ್ಯೂಟಿ ಕೊಡಬೇಕಾದ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು ಅದನ್ನು ಪ್ರತಿ ಯೂನಿಟ್‌ಗೆ 0.36 ಪೈಸೆ ದರ ವಿಧಿಸುವ ಮೂಲಕ ಗ್ರಾಹಕರ ಹೆಗಲಿಗೆ ವರ್ಗಾಯಿಸಿ, ಇನ್ನಷ್ಟು ಅವರ ಹೊರೆಯನ್ನು ಹೆಚ್ಚಿಸಿದೆ. ಹೀಗಾಗಿ ಸರ್ಕಾರದ ಸ್ಮಾರ್ಟ್ ಮೀಟರ್ ಅಳವಡಿಕೆ ನೀತಿಯನ್ನು ಖಂಡಿಸಿ, ಬೆಂಗಳೂರಿನಲ್ಲಿ ದಕ್ಷಿಣ ಭಾರತ ವಲಯದ ವಿದ್ಯುತ್ ಬಳಕೆದಾರರ ಸಮಾವೇಶವನ್ನು ನಡಸಲಾಗುತ್ತಿದೆ ಎಂದು ಜ್ಞಾನಮೂರ್ತಿ ತಿಳಿಸಿದರು. ಸಂಘಟನೆಯ ಪ್ರಮುಖರಾದ ಕೆ.ಸೋಮಶೇಖರಗೌಡ ಹಾಗೂ ಗುರಳ್ಳಿ ರಾಜ ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ಮರಳು ದಂಧೆ ತಡೆದ ಎಎಸ್‌ಐಗೆ ಹಲ್ಲೆ: ರಾಜೂಗೌಡ
ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ