- ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ನಸೀರ್ ಅಹಮ್ಮದ್ ಮನವಿ - - -
ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಗೆ ಬಿಜೆಪಿಯಿಂದ ತಾವು ಟಿಕೆಟ್ ಆಕಾಂಕ್ಷಿಯಾಗಿದ್ದು, ಈಗಾಗಲೇ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೂ ಉಪ ಚುನಾವಣೆಗೆ ಬಿಜೆಪಿಯಿಂದ ತಮಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ. ಸಿ.ಆರ್.ನಸೀರ್ ಅಹಮ್ಮದ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷದಿಂದ ಬಿಜೆಪಿಯಲ್ಲಿ ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇವೆ. ಅಲ್ಪಸಂಖ್ಯಾತರೇ 75 ಸಾವಿರದಷ್ಟಿದ್ದು, ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ತಾವು ಸಹ ಟಿಕೆಟ್ ಆಕಾಂಕ್ಷಿ. ತಮಗೆ ಟಿಕೆಟ್ ನೀಡುವಂತೆ ನಾಯಕರಿಗೆ ಭೇಟಿ ಮಾಡಿದ್ದೇನೆ ಎಂದರು.ಬಿಜೆಪಿ ಟಿಕೆಟ್ ನೀಡಿದರೆ ಉಪ ಚುನಾವಣೆಯಲ್ಲಿ ಖಂಡಿತಾ ಗೆಲ್ಲುತ್ತೇನೆಂಬ ವಿಶ್ವಾಸವಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅಧಿಕಾರ ಅವಧಿಯಲ್ಲಿ ಕರ್ನಾಟಕ ರಾಜ್ಯ ಯೋಜನಾ ಆಯೋಗದ ಸದಸ್ಯನಾಗಿದ್ದ ಅನುಭವವಿದೆ. ಸಿಂಡಿಕೇಟ್ ಮತ್ತು ಕೆನರಾ ಬ್ಯಾಂಕ್ ನಿರ್ದೇಶಕನಾಗಿಯೂ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಯಾವುದೇ ಕ್ಷಣದಲ್ಲಿ ಉಪ ಚುನಾವಣೆ ಘೋಷಣೆಯಾಗಬಹುದು. ದಕ್ಷಿಣದಲ್ಲಿ ಒಟ್ಟು 2.33 ಲಕ್ಷಕ್ಕಿಂತ ಅಧಿಕ ಮತದಾರರಿದ್ದಾರೆ. ಅದರಲ್ಲಿ 75 ಸಾವಿರಕ್ಕೂ ಅಧಿಕ ಮುಸ್ಲಿಂ ಜನರಿದ್ದಾರೆ. ಸುಮಾರು 30 ಸಾವಿರ ಮತದಾರರು ಲಿಂಗಾಯತ ಸಮುದಾಯದವರಿದ್ದಾರೆ. ಉಳಿದಂತೆ 1.20 ಲಕ್ಷ ಮತದಾರರು ಹಿಂದುಳಿದ ವರ್ಗಗಳಿಗೆ ಸೇರಿದವರು. ನನಗೆ ಸ್ಪರ್ಧೆಗೆ ಅವಕಾಶ ನೀಡಿದರೆ ಬಿಜೆಪಿ ಗೆಲ್ಲಲು ಸಹಕಾರಿಯಾಗಲಿದೆ ಎಂದು ಡಾ.ನಸೀರ್ ಅಹಮ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಮುಖಂಡರಾದ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಶಾಮೀರ್ ಆಲಂ ಖಾನ್, ಟಿಪ್ಪು ಸುಲ್ತಾನ್, ಎಕ್ಬಾಲ್ ಇತರರು ಇದ್ದರು.- - -
-13ಕೆಡಿವಿಜಿ3:ದಾವಣಗೆರೆಯಲ್ಲಿ ಶುಕ್ರವಾರ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಡಾ. ಸಿ.ಆರ್. ನಸೀರ್ ಅಹಮ್ಮದ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.