ವಾಮ ಮಾರ್ಗದಲ್ಲಿ ನೈಋತ್ಯ ಕ್ಷೇತ್ರ ಚುನಾವಣೆ ಗೆಲುವು: ಆಯನೂರು ಮಂಜುನಾಥ್‌

KannadaprabhaNewsNetwork |  
Published : Jun 09, 2024, 01:34 AM IST
ಪೊಟೊ: 8ಎಸ್‌ಎಂಜಿಕೆಪಿ01ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌ ಮಾತನಾಡಿದರು. | Kannada Prabha

ಸಾರಾಂಶ

ಪದವೀಧರರ, ಅತಿಥಿ ಉಪನ್ಯಾಸಕರ ಹಾಗೂ ಕಾರ್ಮಿಕರ ಸಮಸ್ಯೆಗಳಿಗೆ ಹೋರಾಡಿದೆ. ನನ್ನ ಹೋರಾಟವೇ ಇವರ ಒಳಿತಿಗಾಗಿ ಇತ್ತು. ಆದರೂ ಕೂಡ ಕೊನೆಯ ಕ್ಷಣಗಳಲ್ಲಿ ನನ್ನ ಪರವಾಗಿದ್ದವರು ನನ್ನ ಹೋರಾಟಕ್ಕೆ ಬೆಂಬಲ ನೀಡಿದವರು, ನನ್ನ ಜೊತೆ ತಮ್ಮ ದುಃಖಗಳ ಹಂಚಿಕೊಂಡವರು ಏಕೆ ರಾಜೀಯಾದರೋ? ಇದು ನನ್ನ ಸೋಲೋ ಅಥವಾ ಮತದಾರರ ಸೋಲೋ ಎಂಬುದು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನನ್ನ ಸೋಲಿಗೆ ನಾನೇ ಹೊಣೆ. ಸೋತೆ ಎಂದು ಖಂಡಿತ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಹೋರಾಟವೇ ನನ್ನ ಬದುಕು, ಹೋರಾಟದಿಂದಲೇ ನಾನು ಮೇಲೆ ಬಂದವನು, ನನ್ನೊಳಗಿನ ಹೋರಾಟ ಯಾವಾಗ ಕೊನೆಯಾಗುತ್ತದೆಯೋ ಆಗ ಚುನಾವಣೆಯಿಂದ ನಿವೃತ್ತನಾಗುತ್ತೇನೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೈಋತ್ಯ ಕ್ಷೇತ್ರದ ಚುನಾವಣೆ ಈ ಬಾರಿ ವಾಮ ಮಾರ್ಗದಲ್ಲಿಯೇ ನಡೆಯಿತು. ಹಣ ಹೆಂಡದ ಹೊಳೆಯನ್ನೇ ಕೆಲವರು ಹರಿಸಿದರು. ಗುಂಡಿನ ಪಾರ್ಟಿಗಳು ಎಲ್ಲಿಬೇಕೆಂದರಲ್ಲಿ ನಡೆದವು. ಜಾತಿ-ಒಳಜಾತಿಗಳು ಕೆಲಸ ಮಾಡಿದವು. ನನ್ನ 30 ವರ್ಷದ ರಾಜಕಾರಣದಲ್ಲಿ ಇಂತಹ ಚುನಾವಣೆ ನಿರೀಕ್ಷೆ ಮಾಡಿರಲಿಲ್ಲ ಎಂದರು.

ಪದವೀಧರರ, ಅತಿಥಿ ಉಪನ್ಯಾಸಕರ ಹಾಗೂ ಕಾರ್ಮಿಕರ ಸಮಸ್ಯೆಗಳಿಗೆ ಹೋರಾಡಿದೆ. ನನ್ನ ಹೋರಾಟವೇ ಇವರ ಒಳಿತಿಗಾಗಿ ಇತ್ತು. ಆದರೂ ಕೂಡ ಕೊನೆಯ ಕ್ಷಣಗಳಲ್ಲಿ ನನ್ನ ಪರವಾಗಿದ್ದವರು ನನ್ನ ಹೋರಾಟಕ್ಕೆ ಬೆಂಬಲ ನೀಡಿದವರು, ನನ್ನ ಜೊತೆ ತಮ್ಮ ದುಃಖಗಳ ಹಂಚಿಕೊಂಡವರು ಏಕೆ ರಾಜೀಯಾದರೋ? ಇದು ನನ್ನ ಸೋಲೋ ಅಥವಾ ಮತದಾರರ ಸೋಲೋ ಎಂಬುದು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ ಎಂದು ತಿಳಿಸಿದರು.ನನ್ನ ಸೋಲಿಗೆ ನೋವಿಲ್ಲ:

ಚುನಾವಣೆ ಮುಗಿದಿದೆ. ಅತಿಥಿ ಉಪನ್ಯಾಸಕರ, ಶಿಕ್ಷಕರ ಕಾರ್ಮಿಕರ ಸಮಸ್ಯೆಗಳು ಉಳಿದುಕೊಂಡಿವೆ. ಮುಖ್ಯವಾಗಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕಾಗಿದೆ ಅದಕ್ಕಾಗಿ ಹೋರಾಟ ಮುಂದುವರಿಸಬೇಕಾಗಿದೆ. 3 ರಿಂದ 4 ಸಾವಿರ ಪಡೆದು ನನ್ನ ವಿರುದ್ಧ ವೋಟು ಹಾಕಿದವರ ಪರವಾಗಿಯೂ ನಾನು ಕೆಲಸ ಮಾಡಬೇಕಾಗಿದೆ. 13 ಸಾವಿರಕ್ಕೂ ಹೆಚ್ಚು ಜನ ನನಗೆ ಮತಹಾಕಿದ್ದಾರೆ. ಅವರನ್ನು ಗೌರವಿಸಬೇಕಾಗಿದೆ. ಚುನಾವಣೆಯಿಂದ ನಿವೃತ್ತಯಾಗುವವರೆಗೂ ನಾನು ಚೈತನ್ಯಶೀಲನಾಗಿಯೇ ಇರುತ್ತೇನೆ. ವ್ಯವಸ್ಥೆಯ ಸರಿ ಮಾಡಲು ಪ್ರಯತ್ನಿಸುತ್ತೇನೆ. ನನ್ನ ಸೋಲಿಗೆ ನೋವಿಲ್ಲ, ನನ್ನ ನಿಲುವುಗಳು ಎಂದು ಸೋಲಲ್ಲ ಎಂದರು.

ನನ್ನ ಪರವಾಗಿ ಪ್ರಚಾರ ಮಾಡಿದ ಕಾರ್ಯಕರ್ತರು, ನನ್ನ ಗೆಲುವನ್ನು ಬಯಸಿದ್ದ ಅಭಿಮಾನಿಗಳಿಗೆ, ಮುಖ್ಯವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೊನೆಗೆ ನನ್ನ ಸೋಲಿಗೆ ಕಾರಣರರಾದ ಮತದಾರರಿಗೂ ನನ್ನ ಕೃತಜ್ಞತೆಗಳು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ವೈ.ಎಚ್.ನಾಗರಾಜ್, ಡಾ.ಟಿ.ನೇತ್ರಾವತಿ, ಸೈಯ್ಯದ್ ಅಡ್ಡು, ಶಿ.ಜು.ಪಾಶ, ಧೀರರಾಜ್ ಹೊನ್ನವಿಲೆ, ಜಿ.ಪದ್ಮನಾಬ್, ಚನ್ನೇಶ್, ಚಾಮರಾಜು, ಲಕ್ಷ್ಮಣಪ್ಪ ಸೇರಿ ಹಲವರಿದ್ದರು.-------------------ಹಣ ಹಂಚಿ ಸಿಕ್ಕಿಬಿದ್ದ ಉಪನ್ಯಾಸಕಿ ರಕ್ಷಣೆಗೆ ಯಾರು?

ಹೊನ್ನಾಳಿಯಲ್ಲಿ ಅತಿಥಿ ಉಪನ್ಯಾಸಕಿಯೊಬ್ಬರು ತನ್ನ ವ್ಯಾನಟಿ ಬ್ಯಾಗ್‍ನಲ್ಲಿ ಲಕ್ಷಾಂತರ ರುಪಾಯಿ ಇಟ್ಟುಕೊಂಡು ಮತದಾರರಿಗೆ ಹಣ ಹಂಚಿ ಸಿಕ್ಕಿಬಿದ್ದಿದ್ದಾರೆ. ಈಗ ಅವಳ ಮೇಲೆ ಕೇಸು ಕೂಡ ದಾಖಲಾಗಿದೆ. ಆಕೆ ಬೀದಿಪಾಲಾಗುತ್ತಾಳೆ, ನೌಕರಿ ಕಳೆದುಕೊಳ್ಳುತ್ತಾಳೆ, ಈಗ ಅವಳ ರಕ್ಷಣೆಗೆ ಯಾರು ಬರುತ್ತಾರೆ. ಅವಳಿಗೆ ಹಣ ಕೊಟ್ಟ ಅಭ್ಯರ್ಥಿ ಅವಳ ಕುಟುಂಬವನ್ನು ಸಾಕುತ್ತಾನೆಯೇ ಎಂದು ಆಯನೂರು ಮಂಜುನಾಥ್‌ ಪ್ರಶ್ನಿಸಿದರು.

-----------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ