ಲೈಂಗಿಕ ಸಂತ್ರಸ್ತೆ ದೂರಿನನ್ವಯ ಸ್ಥಳಕ್ಕೆ ಮಾಜಿ ಸಂಸದನ ಜತೆ ಬಂದ ಎಸ್‌ಐಟಿ । ಡಿಆರ್ ವ್ಯಾನಿನಲ್ಲಿ ಮಲಗಿಸಿಕೊಂಡು ಪ್ರಯಾಣ
ಪಟ್ಟಣದಲ್ಲಿರುವ ಶಾಸಕ ಎಚ್.ಡಿ.ರೇವಣ್ಣ ಮನೆಗೆ ಶನಿವಾರ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ಅವರನ್ನು ಎಸ್‌ಐಟಿ ಅಧಿಕಾರಿಗಳ ತಂಡ ಸ್ಥಳ ಮಹಜರು ಸಲುವಾಗಿ ಕರೆತಂದರು.
ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಸಂತ್ರಸ್ತ ಮಹಿಳೆಯೊಬ್ಬರು ಏ.೨೮ ರಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ಹಿನ್ನಲೆಯಲ್ಲಿ ಮೇ ೪ ರಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ ಸ್ಥಳಗಳಲ್ಲಿ ಮಹಜರು ನಡೆಸಿದ್ದರು. ಮೇ ೧೩ ಹಾಗೂ ಮೇ ೨೮ ರಂದು ಸಹ ಎಸ್‌ಐಟಿ ಅಧಿಕಾರಿಗಳ ತಂಡ ಶಾಸಕ ಎಚ್.ಡಿ.ರೇವಣ್ಣ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ಲೋಕಸಭಾ ಚುನಾವಣೆಯ ನಂತರ ಕಾಣೆಯಾಗಿದ್ದರು. ಮೇ ೩೦ ರಂದು ಎಸ್‌ಐಟಿ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಜಿ ಸಂಸದ ಪ್ರಜ್ವಲ್ ಅವರನ್ನು ಬಂಧಿಸಿದ್ದರು. ಮಾಜಿ ಸಂಸದ ಪ್ರಜ್ವಲ್ ಬಂಧಿಸಿದ ನಂತರ ತನಿಖೆ ಪ್ರಾರಂಭಿಸಿದ ಎಸ್‌ಐಟಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ೪೧ ದಿನಗಳ ಬಳಿಕ ಪಟ್ಟಣದಲ್ಲಿ ಇರುವ ಶಾಸಕ ಎಚ್.ಡಿ.ರೇವಣ್ಣ ಅವರ ಮನೆಗೆ ಸ್ಥಳ ಮಹಜರು ಸಲುವಾಗಿ ಮಾಜಿ ಸಂಸದ ಪ್ರಜ್ವಲ್‌ರನ್ನು ಕರೆತಂದರು.
ಎಎಸ್ಪಿ ವೆಂಕಟೇಶ್ ನಾಯ್ಡು ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಸುರೇಶ್ ಕುಮಾರ್ ನೇತೃತ್ವದಲ್ಲಿ ೩ ಪಿಎಸ್ಸೈಗಳು, ೩ ಎಎಸ್ಸೈ, ಪೊಲೀಸ್ ಸಿಬ್ಬಂದಿ ಹಾಗೂ ಮೀಸಲು ತುಕುಡಿ ಇತ್ತು.
ಲೋಕಸಭಾ ಚುನಾವಣೆಯ ಮತದಾನದ ನಂತರ ವಿದೇಶಕ್ಕೆ ಪರಾರಿಯಾಗಿದ್ದ ಪ್ರಜ್ವಲ್ ವಾಪಸ್ ಬಂದ ನಂತರ ಬಂಧಿಸಿದ ಎಸ್‌ಐಟಿ ಇದೇ ಮೊದಲ ಬಾರಿಗೆ ಸ್ಥಳ ಮಹಜರ್ ನಡೆಸಲು ಪ್ರಜ್ವಲ್‌ರನ್ನು ತವರಿಗೆ ಕರೆತರಬೇಕಿತ್ತು. ಪ್ರಜ್ವಲ್ ಕಂಡ ವೇಳೆ ಅವರ ಪಕ್ಷದ ಬೆಂಬಲಿಗರು ಅಥವಾ ಸಾರ್ವಜನಿಕರು ಗುಂಪುಗೂಡಿ ಅನಾಹುತ ಸಂಭವಿಸಬಹುದು ಎನ್ನುವ ಕಾರಣಕ್ಕಾಗಿ ಪ್ರಜ್ವಲ್‌ರನ್ನು ಪೊಲೀಸ್ ವ್ಯಾನಿನಲ್ಲಿ ಕಿಟಕಿಗಳಿಗೆ ಮರೆ ಮಾಡಿ, ಪ್ರಜ್ವಲ್ ಮಲಗಿದ ಸ್ಥಿತಿಯಲ್ಲಿ ಹೊಳೆನರಪುರದ ಎಚ್.ಡಿ.ರೇವಣ್ಣ ನಿವಾಸಕ್ಕೆ ಕರೆತರಲಾಯಿತು ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ.