ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಶಾಸಕ ತಮ್ಮಯ್ಯ ಸೂಚನೆ

KannadaprabhaNewsNetwork |  
Published : Jun 09, 2024, 01:34 AM IST
ಇತ್ತೀಚೆಗೆ ಭಾರೀ ಮಳೆಗೆ ಜಲಾವ್ರತವಾಗಿದ್ದ ಚಿಕ್ಕಮಗಳೂರಿನ ಟೀಚರ್ಸ್‌ ಲೇಔಟ್‌ಗೆ ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ನಗರಸಭೆ ಸದಸ್ಯೆ ಕವಿತಾ ಶೇಖರ್‌, ಪೌರಾಯುಕ್ತ ಬಿ.ಸಿ. ಬಸವರಾಜ್‌, ಎಂಜಿನಿಯರ್‌ ಲೋಕೇಶ್‌, ರಶ್ಮಿ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಒತ್ತುವರಿಯಾಗಿರುವ ರಾಜಕಾಲುವೆ ತೆರವುಗೊಳಿಸಿ ಸುಗಮವಾಗಿ ನೀರು ಹರಿಯುವಂತೆ ಮಾಡಲು ಈಗಾಗಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

- ಚಿಕ್ಕಮಗಳೂರಿನ ಟಿಚರ್ಸ್‌ ಲೇಔಟ್‌ಗೆ ಭೇಟಿ । ಮಳೆ ಹಾನಿ ಪ್ರದೇಶ ಪರಿಶೀಲನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಒತ್ತುವರಿಯಾಗಿರುವ ರಾಜಕಾಲುವೆ ತೆರವುಗೊಳಿಸಿ ಸುಗಮವಾಗಿ ನೀರು ಹರಿಯುವಂತೆ ಮಾಡಲು ಈಗಾಗಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು. ನಗರದ ಹೌಸಿಂಗ್‌ ಬೋರ್ಡ್‌ನ ಟೀಚರ್ಸ್‌ ಲೇ ಔಟ್‌ನಲ್ಲಿ ಇತ್ತೀಚೆಗೆ ಭಾರಿ ಮಳೆಯಿಂದ ಆಗಿದ್ದ ಅವ್ಯವಸ್ಥೆ ಯನ್ನು ಶನಿವಾರ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಲೆನಾಡು, ಬಯಲು ಸೀಮೆ ಹೊಂದಿರುವ ಚಿಕ್ಕಮಗಳೂರು ನಗರದಲ್ಲಿ ಹೆಚ್ಚು ಮಳೆ ಬಂದಾಗ ತಗ್ಗು ಪ್ರದೇಶಗಳಿಗೆ ಮಳೆ ನೀರು ಬರುವುದು ಸಹಜವಾಗಿದ್ದು, ನೀರು ಸರಾಗವಾಗಿ ಹರಿದು ಹೋಗುವಂತೆ ನಿರ್ಮಾಣ ಮಾಡಿದ್ದ ರಾಜಕಾಲುವೆ ಒತ್ತುವರಿಯಾಗಿರುವುದರಿಂದ ಸಮಸ್ಯೆ ತಲೆದೋರಿದೆ ಎಂದು ಹೇಳಿದರು. ಈ ಸಂಬಂಧ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸ್ಥಳಕ್ಕೆ ಬರುವಂತೆ ಸೂಚಿಸಿದ್ದು, ಸ್ಥಳ ಪರಿಶೀಲಿಸಿ ರಾಜಕಾಲುವೆ ಒತ್ತುವರಿಯಾಗಿದ್ದರೆ ತೆರವು ಮಾಡುವಂತೆ ಸೂಚನೆ ನೀಡಿದರು. ಕಂದಾಯ ಭೂಮಿಯಲ್ಲಿ ನಿವೇಶನಗಳಾಗಿ ಪರಿವರ್ತಿಸಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಈ ಭಾಗದ ನಗರಸಭೆ ಸದಸ್ಯರು ಹಾಗೂ ಶಾಸಕರ ಜವಬ್ದಾರಿ ಯಾಗಿದೆ ಎಂದು ತಿಳಿಸಿದರು. ರಾಜಕಾಲುವೆ ದುರಸ್ತಿ, ಸೇತುವೆ ಹಾಗೂ ಚಾನೆಲ್ ನಿರ್ಮಾಣ ಮಾಡಿ, ನೀರು ಸುಗಮವಾಗಿ ಹರಿಯುವಂತೆ ಮಾಡಲು ಆದೇಶಿಸಲಾಗಿದೆ. ತಹಸೀಲ್ದಾರ್ ಜೊತೆ ಸಹಾಯಕ ಸರ್ವೇಯರ್ ಆಗಮಿಸಿ ರಾಜಕಾಲುವೆ ಸರ್ವೇ ಮಾಡಿ ಮಾರ್ಕ್ ಮಾಡುತ್ತಾರೆ. ನಂತರ ರಾಜಕಾಲುವೆಯಲ್ಲಿ ಶೌಚಾಲಯ, ಪೈಪ್‌ಲೈನ್ ಅಳವಡಿಸಿ ಕೊಂಡಿರುವವರಿಗೆ ನೊಟೀಸ್ ನೀಡಿ ತೆರವುಗೊಳಿಸುವಂತೆ ತಿಳಿಸಲಾಗುವುದು ಎಂದರು. ಮುಂದಿನ ದಿನಗಳಲ್ಲಿ ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಬಳಿಗೆ ಹೋಗಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗುವುದು. ರಾಜಕಾಲುವೆ ಕಿರಿದಾಗಿ ನಿರ್ಮಾಣ ಮಾಡಲಾಗಿದ್ದು, ಈಗಿನ ಜನಸಂಖ್ಯೆಗೆ ಅನುಗುಣವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ನಗರದ ಬಸವನಹಳ್ಳಿ ಕೆರೆ ತೂಬು ದುರಸ್ತಿ ಮಾಡಿ, ನೀರು ಸಂಗ್ರಹಣೆಗೆ ಮುಂದಾಗಿದ್ದು ಈ ಬಾರಿ ಮಳೆಗಾಲ ಮುಕ್ತಾಯವಾಗುವುದರೊಳಗೆ ಅಚ್ಚುಕಟ್ಟುದಾರರಿಗೆ ಅನುಕೂಲವಾಗುವಂತೆ ನೀರು ತುಂಬಿಸಲಾಗುವುದೆಂದು ಹೇಳಿದರು. ನಗರಸಭೆ ಸದಸ್ಯೆ ಕವಿತಾ ಶೇಖರ್ ಮಾತನಾಡಿ, ಕಳೆದ 2 ವರ್ಷದಿಂದ ಈ ರೀತಿ ನೀರು ವಸತಿ ಬಡಾವಣೆಗೆ ಹರಿದು ಬರುತ್ತಿದೆ. ರಾಜಕಾಲುವೆ ಪಕ್ಕದಲ್ಲಿ ಮತ್ತೊಂದು ಕಾಲುವೆ ನಿರ್ಮಾಣ ಮಾಡಿ ಗುಡ್ಡದಿಂದ ಹರಿದು ಬರುವ ನೀರು ಸುಗಮವಾಗಿ ಹೋಗುವಂತೆ ಮಾಡಲು ಒತ್ತಾಯಿಸಿದರು. ಕಳೆದ ಬಾರಿ ನಗರೋತ್ಥಾನದಡಿ 65 ಲಕ್ಷ ರು.ಮಂಜೂರಾಗಿದ್ದು ಕಾಲುವೆ ಪೂರ್ಣಗೊಳಿಸಲು ಗುತ್ತಿಗೆ ದಾರರಿಗೆ ಸೂಚಿಸಲಾಗುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಕಾಲುವೆಯನ್ನು ಅಗಲವಾಗಿ ತೆಗೆಯಲು ಕೋರಲಾಗಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್, ಪರಿಸರ ಅಭಿಯಂತರರಾದ ತೇಜಸ್ವಿನಿ, ಎಂಜಿನಿಯರ್ ಲೋಕೇಶ್, ರಶ್ಮಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ವಿಕಾಸ್ ಹಾಗೂ ಸಿಬ್ಬಂದಿ ಇದ್ದರು.

ಪೋಟೋ ಫೈಲ್‌ ನೇಮ್‌ 8 ಕೆಸಿಕೆಎಂ 2ಇತ್ತೀಚೆಗೆ ಬಾರೀ ಮಳೆಗೆ ಜಲಾವೃತವಾಗಿದ್ದ ಚಿಕ್ಕಮಗಳೂರಿನ ಟೀಚರ್ಸ್‌ ಲೇಔಟ್‌ಗೆ ಶಾಸಕ ಎಚ್‌.ಡಿ. ತಮ್ಮಯ್ಯ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ನಗರಸಭೆ ಸದಸ್ಯೆ ಕವಿತಾ ಶೇಖರ್‌, ಪೌರಾಯುಕ್ತ ಬಿ.ಸಿ. ಬಸವರಾಜ್‌, ಎಂಜಿನಿಯರ್‌ ಲೋಕೇಶ್‌, ರಶ್ಮಿ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ