ಬ್ಯಾಡಗಿ: ಕಟ್ಟುನಿಟ್ಟಾದ ರಸ್ತೆ ನಿಯಮಗಳನ್ನು ಜಾರಿಗೆ ತಂದಿರುವುದು ಕೇವಲ ಅಪಘಾತದಂತಹ ಪ್ರಕರಣಗಳಿಂದ ಜನರ ಜೀವ ಕಾಪಾಡುವ ಉದ್ದೇಶದಿಂದ ಹೊರತು, ಇದರಲ್ಲಿ ಪೊಲೀಸ್ ಸಿಬ್ಬಂದಿಗಳ ಯಾವುದೇ ವೈಯಕ್ತಿಕ ಹಿತಾಸಕ್ತಿ ಇದರಲ್ಲಿಲ್ಲ ಸಾರ್ವಜನಿಕರು ಇದೊಂದನ್ನು ಅರ್ಥೈಸಿಕೊಂಡು ರಸ್ತೆ ನಿಯಮಗಳನ್ನು ಪಾಲಿಸುವಂತೆ ಪಿಎಸ್‌ಐ ಬಿ.ಎಸ್. ಅರವಿಂದ ಕರೆ ನೀಡಿದರು.
ಪಟ್ಟಣದ ಆದರ್ಶ ಪಿಯು ಕಾಲೇಜಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಸ್ತೆ ನಿಯಮಗಳ ಪಾಲನೆ ಪ್ರತಿಯೊಬ್ಬ ವಾಹನ ಚಾಲಕ ಹಾಗೂ ಸಾರ್ವಜನಿಕರ ಕರ್ತವ್ಯವಾಗಬೇಕು, ಅಂದಾಗ ಮಾತ್ರ ಹೆಚ್ಚುತ್ತಿರುವ ಅಪಘಾತ ಹಾಗೂ ಜೀವಹಾನಿಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಹೆಲ್ಮೇಟ್ ಧಾರಣೆ ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸಿದಲ್ಲಿ ಅಪಘಾತ ನಡೆದ ಸಂದರ್ಭದಲ್ಲಿ ಇವು ಜೀವ ರಕ್ಷಣೆ ಮಾಡಲಿವೆ, ವಾಹನ ಚಲಾಯಿಸುವಾಗ ಮೊಬೈಲ್ ಮತ್ತು ಹೆಡ್ ಪೋನ್ ಬಳಕೆ ತಪ್ಪು, ಅಲ್ಲದೇ ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿದಲ್ಲಿ ಅಪಘಾತವಾದ ಸಂದರ್ಬದಲ್ಲಿ ಅಕಸ್ಮಾತ ಪ್ರಾಣ ಹಾನಿ ಸಂಭವಿಸಿದಲ್ಲಿ ಕುಟುಂಬಸ್ಥರಿಗೆ ಹಣಕಾಸಿನ ಅನುಕೂಲವಾಗಲಿದೆ ಎಂದರು.
ಎ.ಎಸ್.ಐ ಬಸವರಾಜ ಅಂಚಟಗಿ ಮಾತನಾಡಿ, ರಸ್ತೆ ನಿಯಮ ಮೀರಿದಲ್ಲಿ ಪೊಲೀಸರು ದಂಡ ಹಾಕುತ್ತಾರೆ ಅಲ್ಲಲ್ಲಿ ನಿಂತು ಸಾರ್ವ ಜಕನಿಕರಿಗೆ ತೊಂದರೆ ಕೊಡುತ್ತಾರೆ ಎಂಬ ಮನಸ್ಥಿತಿಯಿಂದ ಜನರು ಹೊರಬರಬೇಕಿದೆ, ರಸ್ತೆ ನಿಯಮಗಳ ಪಾಲನೆ ನಿಮ್ಮಗಳ ಪ್ರಾಣ ರಕ್ಷಣೆಗೆ ಹೊರತು ದಂಡಕ್ಕಾಗಿ ಅಲ್ಲ ಆದ್ದರಿಂದ ಎಲ್ಲರು ರಸ್ತೆ ನಿಯಮ ಪಾಲಿಸಿ ಎಂದರು.ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಜಯದೇವ ಶಿರೂರು, ಪ್ರಾಂಶುಪಾಲ ಎನ್.ಡಿ.ಮಾಚೇನಹಳ್ಳಿ, ಎಫ್.ಎಂ.ಖಾಜಿ, ಪೊಲೀಸ್ ಪೇದೆ ಮುತ್ಯುಂಜಯ ಸಂಕಣ್ಣನವರ ಸೇರಿದಂತೆ ವಿದ್ಯಾರ್ಥಿಗಳು ಭಾವಹಿಸಿದ್ದರು.