ಕನ್ನಡಪ್ರಭ ವಾರ್ತೆ ಮಂಡ್ಯ
ದೀರ್ಘಕಾಲದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವ ಅವಕಾಶ ಈ ಬಾರಿ ಸಿಕ್ಕಿತ್ತು. ಆದರೆ ಬಹುತೇಕ ಶಿಕ್ಷಕರು ನನಗೆ ಸೋಲುಂಟು ಮಾಡಿದ್ದಾರೆ. ಆದರೂ ಸಾಕಷ್ಟು ಮಂದಿ ಮತ ಹಾಕಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ನಾನು ಸೋತಿಲ್ಲ, ನನ್ನನ್ನು ಶಿಕ್ಷಕರೇ ಸೋಲಿಸಿದ್ದಾರೆ, ಪ್ರಜಾಪ್ರಭುತ್ವದಲ್ಲಿ ಸೋಲು- ಗೆಲುವು ಅನಿವಾರ್ಯ, ಒಬ್ಬ ಸಮರ್ಥ ಅಭ್ಯರ್ಥಿಯನ್ನ ಸೋಲಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ. ಶಿಕ್ಷಕರು ಏಕೆ ಈ ರೀತಿ ಚಿಂತನೆ ಮಾಡಿದರು ಎಂಬ ಪ್ರಶ್ನೆ ಈಗಲೂ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕಳೆದ ೨೪ ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಯಾವುದೇ ರಾಜಕೀಯ ನಾಯಕರ ಬೆಂಬಲವಿಲ್ಲದೇ, ಅದರಲ್ಲಿಯೂ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಬೆಂಬಲವಿಲ್ಲದೇ, ನಾಲ್ಕು ಬಾರಿ ವಿಧಾನ ಪರಿಷತ್ ಚುನಾವಣೆ ಎದುರಿಸಿ ಗೆದ್ದಿದ್ದೇನೆ, ಈ ಚುನಾವಣೆಯಲ್ಲಿ ಇವರ ಅನುಪಸ್ಥಿತಿ ಪರಿಣಾಮ ಬೀರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವು ನೆಲಕಚ್ಚಿದೆ, ಮುಂದಿನ ದಿನಗಳಲ್ಲಿ ಆ ಪಕ್ಷಕ್ಕೆ ಮರು ಜೀವ ಬರಲು ಸಾಧ್ಯವೇ ಇಲ್ಲ, ಈಗಾಗಲೇ ಆ ಪಕ್ಷದ ಬಹುತೇಕ ನಾಯಕರು ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ, ಅದೇನಿದ್ದರೂ ಮುಳುಗುವ ದೋಣಿ, ಕಾಂಗ್ರೆಸ್ ಗ್ಯಾರಂಟಿಗಳ ನಡುವೆ ಈ ಪಕ್ಷ ಚೇತರಿಸಿಕೊಳ್ಳುತ್ತದೆ ಎಂಬ ವಿಶ್ವಾಸವೇ ಇಲ್ಲ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಖಂಡರಾದ ಜಯರಾಂ ಕೀಲಾರ, ಗುರುಮೂರ್ತಿ, ಶಿವರುದ್ರ, ಶಂಕರೇಗೌಡ ಇದ್ದರು.