ನೈಋತ್ಯ ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ: ಕರಾವಳಿಯಲ್ಲಿ ಬಿಜೆಪಿಗೆ ಬಂಡಾಯ ಭೀತಿ?

KannadaprabhaNewsNetwork |  
Published : May 13, 2024, 01:01 AM ISTUpdated : May 13, 2024, 12:57 PM IST
32 | Kannada Prabha

ಸಾರಾಂಶ

ಇಲ್ಲಿವರೆಗೆ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಮಲೆನಾಡು ಮತ್ತು ಕರಾವಳಿಗೆ ಬಿಜೆಪಿಯಲ್ಲಿ ಪ್ರಾತಿನಿಧ್ಯ ಇರುತ್ತಿತ್ತು. ಈ ಬಾರಿ ಬಿಜೆಪಿ ಕೇವಲ ಮಲೆನಾಡು ಪ್ರದೇಶದವರಿಗೆ ಮಾತ್ರ ಟಿಕೆಟ್‌ ನೀಡಿದೆ. ಇದು ಬಿಜೆಪಿಯ ಕರಾವಳಿ ಟಿಕೆಟ್‌ ಆಕಾಂಕ್ಷಿಗಳ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. 

  ಮಂಗಳೂರು :  ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ್ದು, ಕರಾವಳಿಯ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಿಗೆ ತೀವ್ರ ನಿರಾಶೆಯಾಗಿದೆ. ಇಲ್ಲಿವರೆಗೆ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಮಲೆನಾಡು ಮತ್ತು ಕರಾವಳಿಗೆ ಬಿಜೆಪಿಯಲ್ಲಿ ಪ್ರಾತಿನಿಧ್ಯ ಇರುತ್ತಿತ್ತು. ಈ ಬಾರಿ ಬಿಜೆಪಿ ಕೇವಲ ಮಲೆನಾಡು ಪ್ರದೇಶದವರಿಗೆ ಮಾತ್ರ ಟಿಕೆಟ್‌ ನೀಡಿದೆ. ಇದು ಬಿಜೆಪಿಯ ಕರಾವಳಿ ಟಿಕೆಟ್‌ ಆಕಾಂಕ್ಷಿಗಳ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದಾಗಿ ಬಿಜೆಪಿ ಪಾಳಯದಲ್ಲಿ ಬಂಡಾಯ ಸ್ಪರ್ಧೆಯ ಭೀತಿ ಎದುರಾಗಿದೆ. ನೈಋತ್ಯ ಪದವೀಧರ ಕ್ಷೇತ್ರಕ್ಕೆ ಶಿವಮೊಗ್ಗದ ಡಾ.ಧನಂಜಯ ಸರ್ಜಿ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ಕಳೆದ ಅವಧಿಯಲ್ಲಿ ಬಿಜೆಪಿಯ ಆಯನೂರು ಮಂಜುನಾಥ್‌ ಸ್ಪರ್ಧಿಸಿ ಗೆಲುವು ಕಂಡಿದ್ದರು. ಬಳಿಕ ಅವರು ಜೆಡಿಎಸ್‌ಗೆ ಹೋಗಿ ನಂತರ ಈಗ ಕಾಂಗ್ರೆಸ್‌ನಿಂದ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಇತ್ತೀಚೆಗಷ್ಟೆ ಬಿಜೆಪಿಯಲ್ಲಿ ಹುದ್ದೆ ಪಡೆದ ಡಾ.ಧನಂಜಯ ಸರ್ಜಿ ಅವರಿಗೆ ಟಿಕೆಟ್‌ ಕೊಡುವ ಮೂಲಕ ಬಿಜೆಪಿ ಮತ್ತೆ ಶಿವಮೊಗ್ಗಕ್ಕೆ ಮಣೆ ಹಾಕಿದೆ. ಶಿಕ್ಷಕರ ಕ್ಷೇತ್ರದಲ್ಲಿ ಇದುವರೆಗೆ ಬಿಜೆಪಿ ಯಾರಿಗೂ ಟಿಕೆಟ್‌ ಘೋಷಿಸಿಲ್ಲ. ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಾರೆ ಎಂದೇ ಹೇಳಲಾಗಿದೆ. ಈ ಬಗ್ಗೆ ಅಧಿಕೃತವಾಗಿ ರಾಷ್ಟ್ರೀಯ ನಾಯಕರು ಏನನ್ನೂ ಹೇಳದಿದ್ದರೂ ಜೆಡಿಎಸ್‌ನ ಹಾಲಿ ಪರಿಷತ್‌ ಸದಸ್ಯ ಭೋಜೇ ಗೌಡರೇ ಮತ್ತೆ ಸ್ಪರ್ಧಿಸುವ ಮಾತನ್ನಾಡಿದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲೂ ಕರಾವಳಿಯ ಬಿಜೆಪಿಗರು ಟಿಕೆಟ್‌ ವಂಚಿತರಾಗುತ್ತಿದ್ದಾರೆ.

ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ:

ಕಳೆದ ಬಾರಿ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಸ್ಪರ್ಧಿಸಿ ಸೋಲು ಕಂಡಿದ್ದರು. ಅಲ್ಲಿವರೆಗೂ ಶಿಕ್ಷಕರ ಕ್ಷೇತ್ರಕ್ಕೆ ಕರಾವಳಿಗರಿಗೆ ಟಿಕೆಟ್‌ ನೀಡಿದರೆ, ಪದವೀಧರಕ್ಕೆ ಮಲೆನಾಡು ಬಿಜೆಪಿಗರಿಗೆ ನೀಡುತ್ತಿದ್ದರು. ಈ ಬಾರಿ ಎರಡೂ ಇಲ್ಲದ ಪರಿಸ್ಥಿತಿ ಕರಾವಳಿ ಬಿಜೆಪಿಗರಿಗಾಗಿದೆ.

ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಪರಿವಾರ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮುಖಂಡರಾದ ಹರೀಶ್‌ ಆಚಾರ್ಯ, ರಮೇಶ್‌ ಕೆ. ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಹರೀಶ್‌ ಆಚಾರ್ಯ ಅವರು ಹೊಸ ಮತದಾರರ ನೋಂದಣಿಗೆ ಕ್ಷೇತ್ರದಾದ್ಯಂತ ಓಡಾಟ ನಡೆಸಿದ್ದರು. ಈಗ ಅಭ್ಯರ್ಥಿಯನ್ನೂ ಘೋಷಿಸದೆ, ಮುಂದೇನು ಮಾಡಬೇಕು ಎಂದು ಚಿಂತಿಸುವಂತೆ ಮಾಡಿದೆ.

ಪದವೀಧರ ಕ್ಷೇತ್ರಕ್ಕೆ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಉಡುಪಿ ಮಾಜಿ ಶಾಸಕ ರಘುಪತಿ ಭಟ್‌ ಅವರ ಬಂಡಾಯ ಸ್ಪರ್ಧೆಯ ಭೀತಿ ಬಿಜೆಪಿ ನಾಯಕರನ್ನು ಕಾಡತೊಡಗಿದೆ. ಇನ್ನೋರ್ವ ಟಿಕೆಟ್ ಆಕಾಂಕ್ಷಿ ವಿಕಾಸ್‌ ಪಿ. ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ಪದವೀಧರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಅದಕ್ಕಾಗಿ ಸಾಕಷ್ಟು ಪ್ರಯತ್ನವನ್ನೂ ನಡೆಸಿದ್ದೇನೆ. ಆದರೆ ಕೊನೆಕ್ಷಣದಲ್ಲಿ ಹೊಸದಾಗಿ ಜವಾಬ್ದಾರಿ ವಹಿಸಿಕೊಂಡವರಿಗೆ ಟಿಕೆಟ್‌ ನೀಡಿದ್ದಾರೆ. ಕರಾವಳಿಗೆ ಯಾವುದೇ ಪ್ರಾತಿನಿಧ್ಯ ನೀಡಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವ ಬಗ್ಗೆ ವರಿಷ್ಠರ ಜತೆ ಮಾತನಾಡುತ್ತೇನೆ.

-ವಿಕಾಸ್‌ ಪಿ., ಪದವೀಧರ ಕ್ಷೇತ್ರ ಬಿಜೆಪಿ ಟಿಕೆಟ್ ಆಕಾಂಕ್ಷಿ

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!