ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜ್ಯದಲ್ಲಿ ಬಿತ್ತನೆ ಬೀಜದ ಬೆಲೆ ಹೆಚ್ಚಳ ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ಹಾಗೂ ರೈತ ಮೋರ್ಚಾದಿಂದ ನಗರದ ಕೃಷಿ ಇಲಾಖೆ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ಬರಗಾಲ ಇದ್ದರೂ ಕೂಡ ಕಾಂಗ್ರೆಸ್ ಸರ್ಕಾರ ರೈತರಿಗೆ ನೆರವಾಗುವ ಬದಲು ಬಿತ್ತನೆ ಬೀಜ ದ್ವಿಗುಣಗೊಳಿಸಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಸಂದರ್ಭ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಬಿತ್ತನೆ ಬೀಜ ಬೆಲೆ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರ ಎಂದು ಸಾಬೀತು ಪಡಿಸಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರೈತ ಸಮ್ಮಾನ್ ಯೋಜನೆ ರದ್ದುಪಡಿಸಿದ್ದಾರೆ. ರೈತ ವಿದ್ಯಾನಿಧಿ ಕೂಡ ರದ್ದುಪಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಬರದಿಂದ ರೈತರು ತತ್ತರಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭ ರಾಜ್ಯ ಸರ್ಕಾರ ರೈತರ ಪರ ಇರಬೇಕಾಗಿತ್ತು. ಉಚಿತವಾಗಿ ಬಿತ್ತನೆ ಬೀಜ ವಿತರಣೆ ಮಾಡಬೇಕಿತ್ತು ಎಂದು ಆಗ್ರಹಿಸಿದರು.
ರೈತರು ಕಷ್ಟದಲ್ಲಿರುವ ಸಂದರ್ಭದಲ್ಲಿ ಬಿತ್ತನೆ ಬೀಜಗಳನ್ನು ದ್ವಿಗುಣಗೊಳಿಸಿರುವುದುನ್ನು ಬಿಜೆಪಿ ಖಂಡಿಸುತ್ತದೆ. ರಾಜ್ಯದ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ. ಮತ ಪಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರದ ಖಜಾನೆ ಖಾಲಿ ಮಾಡಿದೆ. ಇದರಿಂದ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಸರ್ಕಾರ ಇದೆಯೋ ಇಲ್ಲವೋ ಎಂದು ಕಾಣುತ್ತಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಸ್ತ್ರೀಯರಿಗೆ ಭದ್ರತೆ ಇಲ್ಲ. ರಾಜ್ಯದಲ್ಲಿ ಒಂದಲ್ಲ ಒಂದು ಘಟನೆ ನಡೆಯುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿವೃಷ್ಟಿ ಸಂದರ್ಭ ರೈತರಿಗೆ ಹಲವು ಯೋಜನೆ ನೀಡಿತ್ತು. ಆದರೆ ಈ ಸರ್ಕಾರ ಪರಿಹಾರ ಕೂಡ ಸರಿಯಾಗಿ ವಿತರಣೆ ಮಾಡಿಲ್ಲ. ಆದ್ದರಿಂದ ಕೃಷಿ ಸಚಿವ ಚೆಲುವರಾಯಸ್ವಾಮಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ ಅವರಿಗೆ ಪ್ರತಿಭಟನಾಗಾರರು ಮನವಿ ಸಲ್ಲಿಸಿದರು.ಕೃಷಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಪ್ರಮುಖರಾದ ಮನು ಮುತ್ತಪ್ಪ, ರಾಬಿನ್ ದೇವಯ್ಯ, ವಿ.ಕೆ. ಲೋಕೇಶ್, ಅನಿತಾ ಪೂವಯ್ಯ ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.