ಕನ್ನಡಪ್ರಭ ವಾರ್ತೆ ಕಲಬುರಗಿ
ಬಿತ್ತನೆ ಬೀಜದಿಂದ ಬೀಜಕ್ಕೆ ದರ ಹೆಚ್ಚಳದಲ್ಲಿ ವ್ಯತ್ಯಾಸವಿದ್ದು, ಪ್ರತಿ ಕೆಜಿಗೆ ₹14ರಿಂದ ₹61ರವರೆಗೆ ಹೆಚ್ಚಳವಾಗಿದೆ. ಆದರೆ, ರೈತರಿಗೆ ನೀಡುವ ರಿಯಾಯಿತಿಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ. ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ವರುಣನ ಅವಕೃಪೆಗೆ ತುತ್ತಾಗಿದ್ದ ರೈತರಿಗೆ, ಈಗ ಬೀಜಗಳ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಮಾಲಿಪಾಟೀಲ ಆರೋಪಿಸಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿರುವ ಅವರು, ತೊಗರಿ ಹೆಸರು ಮುಂತಾದ ಬೀಜಗಳು 5 ಕೆಜಿ ಚೀಲ ಬರುತ್ತಿದ್ದು, ಅವುಗಳ ದರ ನೂರಾರು ರುಪಾಯಿ ಏರಿಕೆ ಆಗಿದೆ. 5 ಎಕರೆವರೆಗೆ ಮಾತ್ರ ರಿಯಾಯ್ತಿ ನೀಡಲಾಗುತ್ತಿದ್ದು, ಉಳಿದ ಬೀಜಗಳನ್ನು ಮಾರುಕಟ್ಟೆ ದರದಲ್ಲೇ ಖರೀದಿಸಬೇಕು.ಸೂರ್ಯಕಾಂತಿ ಬೀಜದ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಪ್ರತಿ ಕೆಜಿಗೆ ₹940ಕ್ಕೆ ನೀಡಲಾಗುತ್ತಿದೆ. ಸೋಯಾ ಅವರೆ ಬೆಲೆಯಲ್ಲಿ ಪ್ರತಿ ಕೆಜಿಗೆ ₹6, ಹೈಬ್ರಿಡ್ ಜೋಳ ₹7 ಕಡಿಮೆ ಆಗಿದೆ. ಉಳಿದ ಎಲ್ಲ ಬೀಜಗಳ ಬೆಲೆಯಲ್ಲಿ ಏರಿಕೆ ಆಗಿದೆ.
ಕಳೆದ ವರ್ಷ ಸ್ಪ್ರಿಂಕ್ಲರ್ ಪೈಪ್ ಮತ್ತು ಉಪಕರಣಗಳ ದರ ಹೆಚ್ಚಿಸಲಾಗಿತ್ತು. ಈಗ ಬಿತ್ತನೆ ಬೀಜಗಳ ಬೆಲೆ ಹೆಚ್ಚಿಸಲಾಗಿದೆ. ಮುಂದೆ ಮಳೆ ಹೇಗೂ ಎನ್ನುವ ರೈತರಿಗೆ ಬೆಲೆ ಹೆಚ್ಚಳ ಹೊಸ ಹೊರೆಯಾಗಿಸಿದೆ.‘ಬರಗಾಲದಿಂದ ರೈತ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಬೀಜಗಳ ದರ ಹೆಚ್ಚಳ ಮಾಡಿರುವುದು ರೈತರ ಸಂಕಷ್ಟ ಹೆಚ್ಚಿಸಲಿದೆ. ಸರ್ಕಾರ ಕೂಡಲೇ ಬೀಜಗಳ ದರವನ್ನು ಕಡಿಮೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.