ರಾಜ್ಯದಲ್ಲಿ 82 ಲಕ್ಷ‌ ಹೆಕ್ಟೇರ್ ಬಿತ್ತನೆ ಗುರಿ: ಬೈರೇಗೌಡ

KannadaprabhaNewsNetwork | Updated : Jun 25 2024, 12:31 AM IST

ಸಾರಾಂಶ

ಕಳೆದ ವರ್ಷ ಕೇವಲ 8.37 ಲಕ್ಷ ಹೆಕ್ಟೇರ್ ಬಿತ್ತನೆ. 2025 ಅಂತ್ಯಕ್ಕೆ ಕಂದಾಯ ಇಲಾಖೆ ಡಿಜಿಟಲೀಕರಣ ಮಾಡಲಾಗುವುದು. ವಿಎ., ಆರ್‌ಐಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದ್ದು, ಅವರು ಹಳ್ಳಿಯಲ್ಲಿಯೆ ಕುಳಿತು ಕೆಲಸ ಮಾಡಬಹುದು ಎಂದು ಸಚಿವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರಸಕ್ತ ವರ್ಷ ಮುಂಗಾರು ಪೂರ್ವ ಮತ್ತು ಮುಂಗಾರು ಹಂಗಾಮಿನಲ್ಲಿ ಮಳೆ ವಾಡಿಕೆಗಿಂತ ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆ ಆಶಾದಾಯಕವಾಗಿವೆ. ಈ ವರ್ಷ ರಾಜ್ಯದಾದ್ಯಂತ 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಸೋಮವಾರ ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೂವರೆಗೆ 33 ಲಕ್ಷ ಹೆಕ್ಟೇರ್ ಅಂದರೆ ಶೇ.40ರಷ್ಟು ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಕೇವಲ 8.37 ಲಕ್ಷ ಹೆಕ್ಟೇರ್ ಪ್ರದೇಶ ಮಾತ್ರ ಬಿತ್ತನೆಯಾಗಿತ್ತು ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಮುಂಗಾರು ಪೂರ್ವ 115 ಮಿ.ಮೀ ಮಳೆಯಾದರೆ ಜೂನ್ ಮಾಹೆಯಲ್ಲಿ ಒಟ್ಟಾರೆ 148 ಮಿ.ಮೀ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 95 ಮಿ.ಮೀ. ಮಳೆಯಾಗಿದ್ದು, ಇದು ವಾಡಿಕೆಗಿಂತ 40 ಮಿ.ಮೀ ಹೆಚ್ಚು. ಅದೇ ರೀತಿ ಉತ್ತರ ಒಳನಾಡಿನಲ್ಲಿ 78 ಮಿ.ಮೀ. ಮಳೆ ವಾಡಿಕೆಯಾದರೆ, ಮಳೆ‌ ಬಿದ್ದಿದ್ದು 134 ಮಿ.ಮೀ. ಇನ್ನು ಮಲೆನಾಡು, ಕರಾವಳಿಯಲ್ಲಿ ವಾಡಿಕೆಯಂತೆ ಮಳೆ ಬೀಳದಿದ್ದರೂ, ಇತ್ತೀಚಿನ 2-3 ದಿನದಲ್ಲಿ ಅಲ್ಲಿ‌ ಮಳೆಯಾಗುತ್ತಿರುವುದರಿಂದ ಅಗತ್ಯಕ್ಕೆ ಅನುಗುಣವಾಗಿ ಅಲ್ಲಿ ಮಳೆಯಾಗಿದೆ ಎಂದರು.

ಹೊಸ ತಾಲೂಕುಗಳಿಗೆ ತಹಸೀಲ್ದಾರ್‌ ಕಚೇರಿ ಮಾತ್ರ ಇವೆ. ಉಳಿದ ಇಲಾಖೆಗಳ ತಾಲೂಕು ಕಚೇರಿ ಇಲ್ಲ. ಈ ಕಚೇರಿ ಆರಂಭ ಯಾವಾಗ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಂದಿನ‌ 3 ವರ್ಷದಲ್ಲಿ ಹಂತ‌ ಹಂತವಾಗಿ ತಾಲೂಕು ಕಚೇರಿ ಆರಂಭಿಸಲಾಗುವುದು ಎಂದರು.

2025 ಅಂತ್ಯಕ್ಕೆ ಕಂದಾಯ ಇಲಾಖೆ ಡಿಜಿಟಲೀಕರಣ:

ಕಂದಾಯ ಇಲಾಖೆಯು ಎಲ್ಲಾ ಆಯಾಮದಿಂದ ಡಿಜಿಟಲೀಕರಣಕ್ಕೆ ಮುಂದಾಗಿದೆ. ಈಗಾಗಲೆ ಇ-ಕಚೇರಿ ಅನುಷ್ಠಾನದಲ್ಲಿ ಶೇ.80ರಷ್ಟು ಪ್ರಗತಿ ಸಾಧಿಸಿದೆ. ಭೂ ಸುರಕ್ಷಾ ಯೋಜನೆಯಡಿ ಕಳೆದ ಫೆಬ್ರವರಿಯಲ್ಲಿ ರಾಜ್ಯದ 31 ತಾಲೂಕು ಕಚೇರಿಯಲ್ಲಿ ಪ್ರಾಯೋಗಿಕವಾಗಿ ರೆಕಾರ್ಡ್ ರೂಂ ದಾಖಲೀಕರಣ ಕಾರ್ಯ ಪ್ರಾರಂಭಿಸಿದ್ದು, ಇದೂವರೆಗೆ 3 ಕೋಟಿ ದಾಖಲೆ ಸ್ಕ್ಯಾನಿಂಗ್‌ ಮಾಡಲಾಗಿದೆ. ಮುಂದಿನ ಒಂದು ತಿಂಗಳಿನಲ್ಲಿ ರಾಜ್ಯದ ಉಳಿದ ತಾಲೂಕಿನಲ್ಲೂ ಇದಕ್ಕೆ ಚಾಲನೆ ನೀಡಲಾಗುವುದು. ವಿಎ., ಆರ್‌ಐಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದ್ದು, ಅವರು ಹಳ್ಳಿಯಲ್ಲಿಯೆ ಕುಳಿತು ಕೆಲಸ ಮಾಡಬಹುದು.

ಕಂದಾಯ ಕೋರ್ಟ್ ಪ್ರಕರಣಗಳ ಸ್ಥಿತಿಗತಿ ಅರಿಯಲು ಆರ್.ಸಿ.ಸಿ.ಎಂ.ಎಸ್. (ರೆವೆನ್ಯೂ ಕೋರ್ಟ್ ಕೇಸ್ ಮ್ಯಾನೇಜಮೆಂಟ್ ಸಿಸ್ಟಮ್) ತಂತ್ರಾಂಶ ಅಭಿವೃದ್ಧಿಪಡಿಸಿದೆ. ಒಟ್ಟಾರೆ 2025ರ ಅಂತ್ಯಕ್ಕೆ ಕಂದಾಯ ಇಲಾಖೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗುವುದೆಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ, ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲಕುಮಾರ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಇದ್ದರು.

Share this article