ಹಾವೇರಿ: ತಾಲೂಕಿನ ಕರ್ಜಗಿ ಹಾಗೂ ಹಾವೇರಿ ನಗರದ ರೈತ ಸಂಪರ್ಕ ಕೇಂದ್ರಗಳಲ್ಲಿ ಸೋಮವಾರ ಸೋಯಾಬಿನ್ ಬಿತ್ತನೆ ಬೀಜ ದಾಸ್ತಾನು ಖಾಲಿಯಾಗಿ ಬೀಜ ಖರೀದಿಗೆ ಆಗಮಿಸಿದ್ದ ರೈತರು ಆಕ್ರೋಶ ವ್ಯಕ್ತಪಡಿಸುವಂತಾಯಿತು. ಬೇಕಾದಷ್ಟು ದಾಸ್ತಾನಿದೆ ಎಂದು ಹೇಳುತ್ತ ಬಂದಿದ್ದ ಅಧಿಕಾರಿಗಳ ವಿರುದ್ಧ ರೈತರು ಸಿಡಿಮಿಡಿಗೊಂಡರು.
ಬಿತ್ತನೆ ಬೀಜಕ್ಕಾಗಿ ಇರುವ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆಯೇ ಬಂದು ಪಾಳಿ ಹಚ್ಚಿದ್ದೇವೆ. ಮಧ್ಯಾಹ್ನದ ವರೆಗೆ ವಿತರಣೆ ಮಾಡಿ ಬಳಿಕ ಯಾವುದೇ ಮುನ್ಸೂಚನೆಯನ್ನು ನೀಡದೇ ದಾಸ್ತಾನು ಖಾಲಿಯಾಗಿದೆ, ನಾಳೆ (ಮಂಗಳವಾರ) ಬನ್ನಿ ಎಂದು ಹೇಳುತ್ತಿದ್ದಾರೆ. ಕಳೆದ ಐದಾರು ದಿನಗಳಿಂದ ಬಿತ್ತನೆ ಬೀಜ ಪೂರೈಕೆ ಮಾಡುವಾಗ, ಅಧಿಕಾರಿಗಳು ಸೋಯಾಬಿನ್ ಬಿತ್ತನೆ ಬೀಜದ ಅಭಾವ ಇಲ್ಲ. ನಮ್ಮಲ್ಲಿ ದಾಸ್ತಾನು ಇದೆ. ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಹೇಳುತ್ತಲೆ ಬಂದಿದ್ದಾರೆ. ಅದನ್ನು ನಂಬಿಕೊಂಡು ಬಂದಿರಲಿಲ್ಲ. ಆದರೆ, ಬೆಳಗ್ಗೆ ಖರೀದಿಗೆ ಆಗಮಿಸಿ ಮಧ್ಯಾಹ್ನದ ವರೆಗೆ ಊಟ ಬಿಟ್ಟು ಕಾದರೆ, ಏಕಾಏಕಿ ದಾಸ್ತಾನು ಖಾಲಿಯಾಗಿದೆ ಎಂದು ಹೇಳಿದರೆ ಏನು ಮಾಡಬೇಕು ಎಂದು ರೈತರು ಪ್ರಶ್ನಿಸಿದರು. ನಮ್ಮ ಕಷ್ಟ ಯಾರಿಗೆ ಹೇಳಬೇಕು, ಪ್ರತಿ ಸಲವೂ ನಮಗೆ ಸಂಕಷ್ಟ ತಪ್ಪಿದ್ದಲ್ಲ ಎಂದು ಹಳಹಳಿಸಿದರು.
ದಾಸ್ತಾನು ಬರಲಿದೆ: ಸೋಯಾಬಿನ್ ಖಾಲಿಯಾಗಿದ್ದರ ಬಗ್ಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಅವರನ್ನು ಕೇಳಿದಾಗ, ಹಾವೇರಿ ಹಾಗೂ ಕರ್ಜಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳಗ್ಗೆಯಿಂದ 168 ಕ್ವಿಂಟಲ್‌ನಷ್ಟು ಸೋಯಾಬಿನ್ ಬೀಜ ಪೂರೈಸಿದ್ದು, ಮಧ್ಯಾಹ್ನದ ವೇಳೆ ದಾಸ್ತಾನು ಖಾಲಿಯಾಗಿದೆ. ಮಂಗಳವಾರ ಲೋಡ್ ಬರಲಿದ್ದು, ಆಯಾ ಆರ್‌ಎಸ್‌ಕೆಗಳಿಗೆ ಹಂಚಿಕೆಯಾಗಲಿವೆ. ಎಂದಿನಂತೆ ಮಂಗಳವಾರದಿಂದ ಮತ್ತೆ ಸೋಯಾಬಿನ್ ಪೂರೈಸಲಾಗುತ್ತಿದ್ದು, ರೈತರು ಸಹಕರಿಸಬೇಕು. ಶೇಂಗಾ, ಮೆಕ್ಕೆಜೋಳ, ತೊಗರಿ, ಹೆಸರು ಬಿತ್ತನೆ ಬೀಜಗಳನ್ನು ವಿತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.