ಅಕ್ರಮ ವಿದ್ಯುತ್ ತೆರವಿಗೆ ಭದ್ರತೆ ನೀಡದ ಎಸ್‌ಪಿ: ರವೀಂದ್ರ

KannadaprabhaNewsNetwork |  
Published : Sep 06, 2026, 01:30 AM IST
೫ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಮಾತನಾಡಿದರು. | Kannada Prabha

ಸಾರಾಂಶ

ತಮಿಳು ಕಾಲೋನಿಯ ೨೦೦ಕ್ಕೂ ಹೆಚ್ಚು ಶೆಡ್/ ಮನೆಗಳಲ್ಲಿ ವಾಸವಿರುವವರು ಎಲ್‌ಟಿ ಲೈನ್‌ಗೆ ಕೊಕ್ಕೆ ಹಾಕಿಕೊಂಡು ವಿದ್ಯುತ್ ಸಂಪರ್ಕ ಪಡೆದಿರುವುದಾಗಿ ಕಂಡುಬಂದಿದ್ದು ಇದರ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ವಹಿಸುವಂತೆ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೆಸ್ಕ್ ಜಾಗೃತದಳದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ರವರಿಗೆ ಪತ್ರ ಬರೆದಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿಯ ೨೦೦ಕ್ಕೂ ಹೆಚ್ಚು ಶೆಡ್/ಮನೆಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಆರೋಪದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಗೆ ಪೊಲೀಸ್ ರಕ್ಷಣೆ ನೀಡುವಂತೆ ಮೈಸೂರು ವಿಭಾಗೀಯ ಸೆಸ್ಕ್ ಜಾಗೃತದಳ ಮಾಡಿದ ಮನವಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಒಪ್ಪದಿದ್ದರಿಂದ ವಾಪಸ್ ತೆರಳಿದೆ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಆರೋಪಿಸಿದರು.

ತಮಿಳು ಕಾಲೋನಿಯ ೨೦೦ಕ್ಕೂ ಹೆಚ್ಚು ಶೆಡ್/ ಮನೆಗಳಲ್ಲಿ ವಾಸವಿರುವವರು ಎಲ್‌ಟಿ ಲೈನ್‌ಗೆ ಕೊಕ್ಕೆ ಹಾಕಿಕೊಂಡು ವಿದ್ಯುತ್ ಸಂಪರ್ಕ ಪಡೆದಿರುವುದಾಗಿ ಕಂಡುಬಂದಿದ್ದು ಇದರ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ವಹಿಸುವಂತೆ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೆಸ್ಕ್ ಜಾಗೃತದಳದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ರವರಿಗೆ ಪತ್ರ ಬರೆದಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅದರಂತೆ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಇನ್ನಿತರ ಜಿಲ್ಲೆಗಳಿಂದ ಜಾಗೃತದಳದ ಎಸ್‌ಪಿ, ಡಿವೈಎಸ್ಪಿ ನೇತೃತ್ವದ ತಂಡ ತೆರವು ಕಾರ್ಯಾಚರಣೆಗೆ ಆಗಮಿಸಿ ೮೦ ಮಂದಿ ಪೊಲೀಸರನ್ನು ಭದ್ರತೆಗೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರಿಗೆ ಮನವಿ ಸಲ್ಲಿಸಿದರು. ಆದರೆ, ತಮಿಳು ಕಾಲೋನಿ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿರುವುದು ಅಕ್ರಮ ವಿದ್ಯುತ್ ಕಳವು ಮಾಡುವವರ ಬೆಂಬಲಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರೇ ನಿಂತಿರುವುದನ್ನು ಸಾಬೀತುಪಡಿಸುತ್ತಿದೆ ಎಂದು ಹರಿಹಾಯ್ದರು.

ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಆದರೆ, ಮನೆಗಳಿಗೆ ಅಕ್ರಮ ವಿದ್ಯುತ್ ಪಡೆದಿರುವುದಕ್ಕೂ ಜಾಗಕ್ಕೂ ಏನು ಸಂಬಂಧ. ಅನಧಿಕೃತ ವಿದ್ಯುತ್ ತೆರವು ಕಾರ್ಯಾಚರಣೆಗೆ ಎಸ್‌ಪಿ ಅವರು ತಡೆಯೊಡ್ಡುತ್ತಿರುವುದೇಕೆ. ಜವಾಬ್ದಾರಿಯುತ ಅಧಿಕಾರಿಯೊಬ್ಬರು ನಡೆದುಕೊಳ್ಳುವ ರೀತಿಯೇ ಇದು. ಯಾರ ಪ್ರಭಾವಕ್ಕೆ ಮಣಿದು ಡಾ.ವಿ.ಜೆ. ಶೋಭಾರಾಣಿ ಅವರು ಪೊಲೀಸ್ ರಕ್ಷಣೆ ಕೊಡದೆ ನಿರಾಕರಿಸಿದರು. ನ್ಯಾಯ ಕಾಪಾಡಬೇಕಾದ ಪೊಲೀಸರೇ ಅನ್ಯಾಯಕೋರರ ಪರ ನಿಂತಿರುವುದು ನಾಚಿಕೆಗೇಡು ಎಂದು ಕಿಡಿಕಾರಿದರು.

ಗೋಷ್ಠಿಯಲ್ಲಿ ಶಿವರಾಮೇಗೌಡ, ಅಣ್ಣಯ್ಯ, ಎಚ್.ಡಿ.ಜಯರಾಂ, ಮಧುಸೂಧನ್, ವಿಜಯ್‌ಕುಮಾರ್, ಆನಂದ್‌ಕುಮಾರ್, ಕಿರಣ್‌ಕುಮಾರ್, ಕೃಷ್ಣ ಇದ್ದರು.

ತಮಿಳು ಕಾಲೋನಿ, ನ್ಯೂ ತಮಿಳು ಕಾಲೋನಿ ಗೊಂದಲ ಸೃಷ್ಟಿ!

ತಮಿಳು ಕಾಲೋನಿಯಲ್ಲಿ ವಾಸಿಸುತ್ತಿರುವ ಜಾಗಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತರುವಲ್ಲಿಯೂ ನಿವಾಸಿಗಳು ಬುದ್ಧಿವಂತಿಕೆ ಪ್ರದರ್ಶಿಸಿ ಗೊಂದಲ ಸೃಷ್ಟಿಸಿರುವುದು ಕಂಡುಬಂದಿದೆ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಬಹಿರಂಗಪಡಿಸಿದರು.

ಜಾಗದ ಸಂಬಂಧ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ಕೋರಿ ೨೦೧೩ರಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವವರು ನಗರದ ಹಾಲಹಳ್ಳಿ ಬಡಾವಣೆಯ ನ್ಯೂ ತಮಿಳು ಕಾಲೋನಿ ನಿವಾಸಿಗಳು. ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿಯನ್ನೂ ನ್ಯೂ ತಮಿಳು ಕಾಲೋನಿ ಜೊತೆ ಸೇರಿಸಿಕೊಂಡಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ತಡೆಯಾಜ್ಞೆ ತಂದಿದ್ದಾರೆ. ಇದರಲ್ಲಿ ದೂರುದಾರರಾಗಿ ಆಸ್ಪತ್ರೆ ತಮಿಳು ಕಾಲೋನಿಯಿಂದ ಕೇವಲ ಮೂರು ಜನರಿದ್ದರೆ, ಬಹುತೇಕರು ನ್ಯೂ ತಮಿಳು ಕಾಲೋನಿ ನಿವಾಸಿಗಳಾಗಿದ್ದಾರೆ. ಇದರಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದು ನ್ಯೂ ತಮಿಳು ಕಾಲೋನಿ ಜಾಗಕ್ಕೋ ಅಥವಾ ಆಸ್ಪತ್ರೆ ಜಾಗದ ತಮಿಳು ಕಾಲೋನಿ ಜಾಗಕ್ಕೋ ಎನ್ನುವುದು ಗೊಂದಲಕಾರಿಯಾಗಿದೆ. ಇದನ್ನೇ ಮುಂದಿಟ್ಟುಕೊಂಡು ಎಲ್ಲರ ದಾರಿತಪ್ಪಿಸುವ ತಂತ್ರಗಾರಿಕೆಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ದೂಷಿಸಿದರು.

೫೦೦-೬೦೦ ಜನರ ಹಿತಕ್ಕೆ ೨೦ ಲಕ್ಷ ಜನರ ಆರೋಗ್ಯ ಹಾಳು

ತಮಿಳು ಕಾಲೋನಿಯಲ್ಲಿರುವ ೫೦೦ ರಿಂದ ೬೦೦ ಜನರ ಹಿತರಕ್ಷಣೆಗಾಗಿ ೨೦ ಲಕ್ಷ ಜನರ ಆರೋಗ್ಯವನ್ನು ರಾಜಕಾರಣಿಗಳು, ಅಧಿಕಾರಿಗಳು, ಪ್ರಭಾವಿಗಳು ಬಲಿಕೊಡುತ್ತಿದ್ದಾರೆ ಎಂದು ಕೆ.ಆರ್.ರವೀಂದ್ರ ಟೀಕಾಪ್ರಹಾರ ನಡೆಸಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ೩೧೧ ಕೋಟಿ ರು., ಟ್ರಾಮಾ ಕೇರ್ ಸೆಂಟರ್ ನಿರ್ಮಾಣಕ್ಕೆ ೧೬೧ ಕೋಟಿ ರು.ಗೆ ಅಂದಾಜುಪಟ್ಟಿ ಸಲ್ಲಿಸಲಾಗಿದೆ. ಇವುಗಳ ಸ್ಥಾಪನೆಗೆ ೧೦ ಎಕರೆ ಜಾಗದ ಅವಶ್ಯಕತೆ ಇದೆ. ತಮಿಳು ಕಾಲೋನಿ ಸೇರಿದಂತೆ ಅಕ್ರಮ ಕಟ್ಟಡಗಳ ಒತ್ತುವರಿಯನ್ನು ತೆರವುಗೊಳಿಸಿದರೆ ೧೯ ಎಕರೆ ಜಾಗ ಸಿಗಲಿದೆ. ಇದರ ಬಗ್ಗೆ ರಾಜಕಾರಣಿಗಳಿಗೆ ಇಚ್ಛಾಶಕ್ತಿಯೇ ಇಲ್ಲ. ಕೇಂದ್ರ ಸಚಿವರು ಸೇರಿದಂತೆ ಜಿಲ್ಲೆಯಿಂದ ಸಚಿವ ಸಂಪುಟ ಸೇರಿರುವ ಇಬ್ಬರು ಸಚಿವರಿಗೆ ಆಸಕ್ತಿಯೂ ಇಲ್ಲ. ಅಧಿಕಾರಿಗಳಿಗೆ ಕನಿಷ್ಠ ಪ್ರಜ್ಞೆಯೂ ಇಲ್ಲ ಎಂದು ಟೀಕಿಸಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾಕೇರ್ ಸೆಂಟರ್ ನಿರ್ಮಾಣದಿಂದ ಅಪಘಾತ, ಹೃದಯಾಘಾತ, ಕ್ಯಾನ್ಸರ್, ಕಿಡ್ನಿ ಸಮಸ್ಯೆ ಎದುರಿಸುತ್ತಿರುವ ರೋಗಿಗಳ ತುರ್ತು ಚಿಕಿತ್ಸೆಗೆ ಹೆಚ್ಚಿನ ಅನುಕೂಲವಾಗಲಿದೆ. ಇವೆಲ್ಲದಕ್ಕೂ ಪೂರಕವಾಗಿ ತಮಿಳು ಕಾಲೋನಿ ತೆರವು ಕಾರ್ಯಾಚರಣೆ ತುರ್ತಾಗಿ ನಡೆಯಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ
ಒಬ್ಬರ ರಕ್ತದಾನದಿಂದ ಮೂವರಿಗೆ ಜೀವದಾನ: ಡಾ.ಆನಂದ್‌