ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಜಿಲ್ಲಾ ಪೊಲೀಸರು 134 ಪ್ರಕರಣಗಳಲ್ಲಿ ಪತ್ತೆಯಾಗಿರುವ 2.06 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು.ಜ್ಯೋತಿನಗರದಲ್ಲಿರುವ ಡಿಎಆರ್ ಕವಾಯತು ಮೈದಾನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಎಸ್ಪಿ ಎನ್. ವಿಷ್ಣುವರ್ಧನ್ ಅವರು, ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಕಳವು ಮಾಲುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು.ನಂತರ ಎಸ್ಪಿ ಎನ್. ವಿಷ್ಣುವರ್ಧನ್ ಮಾತನಾಡಿ, ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 2023ರ ಜುಲೈನಿಂದ 2025ರ ಜನವರಿಯವರೆಗೆ ಒಟ್ಟು 1279 ಪ್ರಕರಣಗಳು ದಾಖಲಾಗಿದ್ದು, 28.72 ಕೋಟಿ ಮೌಲ್ಯದ ವಸ್ತುಗಳು ಕಳವಾಗಿದ್ದವು. ಇದರಲ್ಲಿ 255 ಪ್ರಕರಣಗಳನ್ನು ಪತ್ತೆ ಹಚ್ಚಿ, 3.96 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ನ್ಯಾಯಾಲಯದಿಂದ ಆದೇಶವಾಗಿರುವ 134 ಪ್ರಕರಣಗಳಿಗೆ ಸಂಬಂಧಿಸಿದ 2.06 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.134 ಪ್ರಕರಣಗಳಲ್ಲಿ 6 ಸುಲಿಗೆ, 6 ಸರಗಳ್ಳತನ, 25 ಮನೆ ಕಳ್ಳತನ, 6 ಮನೆ ಕೆಲಸಾಗರಿಂದ ಕಳವು, 67 ವಾಹನ ಕಳ್ಳತನ, 15 ಸಾಮಾನ್ಯ ಕಳ್ಳತನ, 5 ಜಾನುವಾರು ಕಳ್ಳತನ, 4 ವಂಚನೆ ಪ್ರಕರಣಗಳನ್ನು ಪತ್ತೆ ಮಾಡಿ, 2.06 ಕೋಟಿ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.ಇದರಲ್ಲಿ 35 ಪ್ರಕರಣಗಳಲ್ಲಿ 2.43 ಕೆ.ಜಿ. ಚಿನ್ನ, 4.36 ಕೆ.ಜಿ ಬೆಳ್ಳಿ, 18 ಪ್ರಕರಣಗಳಲ್ಲಿ 42,36,585 ರೂ. ಹಣ, 67 ಪ್ರಕರಣಗಳಲ್ಲಿ 52.12 ಲಕ್ಷ ರೂ. ಮೌಲ್ಯದ 62 ಬೈಕ್, 5 ಕಾರು, 3 ಆಟೋ, 2 ಟ್ರ್ಯಾಕ್ಟರ್, 3 ಟಿಪ್ಪರ್, 3 ರೋಡ್ ರೋಲರ್ ಹಿಂದಿರುಗಿಸಲಾಯಿತು. ಅಲ್ಲದೆ, 8 ಪ್ರಕರಣಗಳಲ್ಲಿ 3.54 ಲಕ್ಷ ರೂ. ಮೌಲ್ಯದ ಹಾರ್ಡ್ ವೇರ್ ಮತ್ತು ಎಲೆಕ್ಟ್ರಿಕ್ ವಸ್ತುಗಳು, 4 ಪ್ರಕರಣಗಳಲ್ಲಿ 6 ಹಸು, 3 ಕುರಿ, 9 ಪ್ರಕರಣಗಳಲ್ಲಿ 2.90 ಲಕ್ಷ ಮೌಲ್ಯದ ಇತರೆ ವಸ್ತುಗಳು ಹಾಗೂ 13.50 ಲಕ್ಷ ಮೌಲ್ಯದ 90 ಮೊಬೈಲ್ ಗಳು ಸೇರಿವೆ ಎಂದು ಅವರು ವಿವರಿಸಿದರು.ಹೆಚ್ಚುವರಿ ಎಸ್ಪಿಗಳಾದ ಸಿ. ಮಲ್ಲಿಕ್, ಎಲ್. ನಾಗೇಶ್, ಡಿವೈಎಸ್ಪಿಗಳಾದ ಕರೀಂ ರಾವತರ್, ಜಿ.ಎಸ್. ರಘು, ಗೋಪಾಲಕೃಷ್ಣ, ಎನ್. ರಘು ಹಾಗೂ ಜಿಲ್ಲೆಯ ವಿವಿಧ ಠಾಣೆಗಳ ಅಧಿಕಾರಿಗಳು ಇದ್ದರು.