ಪಾದಯಾತ್ರೆ ವೇಳೆ ಕಾವೇರಿ ನದಿ ದಡಕ್ಕೆ ಎಸ್ಪಿ ಭೇಟಿ

KannadaprabhaNewsNetwork | Published : Feb 24, 2025 12:32 AM

ಸಾರಾಂಶ

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ರಾಮನಗರ, ಕೋಲಾರ, ದೊಡ್ಡಬಳ್ಳಾಪುರ ಗ್ರಾಮಗಳಿಂದ ಪಾದಯಾತ್ರೆಯ ಮೂಲಕ ಕಾವೇರಿ ನದಿ ದಾಟಿ ಬರುತ್ತಿರುವ ಹಿನ್ನೆಲೆ, ಕಾವೇರಿ ನದಿ ಸಮೀಪದ ಬಸವನ ಕಡ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ ಟಿ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹನೂರು

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ರಾಮನಗರ, ಕೋಲಾರ, ದೊಡ್ಡಬಳ್ಳಾಪುರ ಗ್ರಾಮಗಳಿಂದ ಪಾದಯಾತ್ರೆಯ ಮೂಲಕ ಕಾವೇರಿ ನದಿ ದಾಟಿ ಬರುತ್ತಿರುವ ಹಿನ್ನೆಲೆ, ಕಾವೇರಿ ನದಿ ಸಮೀಪದ ಬಸವನ ಕಡ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ ಟಿ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ, ಫೆಬ್ರವರಿ 25 ರಿಂದ ಮಾರ್ಚ್ 1ರವರೆಗೆ ಐದು ದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ರಾಮನಗರ, ಮಾಗಡಿ, ಕನಕಪುರ, ಕೋಲಾರ, ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ, ಬಿಡದಿ, ಚನ್ನಪಟ್ಟಣ ತಾಲೂಕಿನಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಿರುವ ಹಿನ್ನೆಲೆ ರಾಮನಗರ ಜಿಲ್ಲಾಡಳಿತ ವತಿಯಿಂದ, ಕಳೆದ ಎರಡು ದಿನಗಳಿಂದ ಬೊಮ್ಮಸಂದ್ರದ ಬಳಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.

ಶನಿವಾರ ಮಧ್ಯಾಹ್ನದಿಂದ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಬಸವನ ಕಡ ಮಾರ್ಗದ ಮೂಲಕ ಅರಣ್ಯ ವ್ಯಾಪ್ತಿಯಲ್ಲಿ, ಪಾದಯಾತ್ರೆಯ ಮೂಲಕ ಶಾಗ್ಯ ಗ್ರಾಮದಲ್ಲಿ ಭಕ್ತರು ವಾಸ್ತವ್ಯ ಹೂಡಲಿದ್ದಾರೆ. ಈ ನಿಟ್ಟಿನಲ್ಲಿ ಅರಣ್ಯದಲ್ಲಿ ಬರುವುದರಿಂದ ಅರಣ್ಯ ಇಲಾಖೆ ವತಿಯಿಂದ ಸಿಬ್ಬಂದಿಗಳನ್ನು ನೇಮಕ ಮಾಡಿ ಗಸ್ತು ಮಾಡಲಾಗುತ್ತಿದೆ. ಈ ವ್ಯಾಪ್ತಿಯು ಹನೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ .ಟಿ ಕವಿತಾ, ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ ಇನ್ಸ್ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿಗಳು ಕಾವೇರಿ ನದಿ ದಂಡೆಯ ಸ್ಥಳಕ್ಕೆ ಭೇಟಿ ನೀಡಿ, ಪಾದಯಾತ್ರಿಕರನ್ನು ಸುರಕ್ಷಿತವಾಗಿ ದಾಟಿಸುತ್ತಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ರಾಮನಗರ ಹಾಗೂ ಚಾಮರಾಜನಗರ ಜಿಲ್ಲಾಡಳಿತ ವತಿಯಿಂದ ಯಾವುದೇ ಮುಂಜಾಗ್ರತ ಕ್ರಮ ಕೈಗೊಳ್ಳದೆ ಇದ್ದಿದ್ದರಿಂದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ, ನೀರಿನ ಸೆಳೆತಕ್ಕೆ ಸಿಲುಕಿ ಐದಾರು ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರು ಕಳೆದ ಜನವರಿಯಲ್ಲಿಯೇ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ರಾಮನಗರ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು ಅದರಂತೆ ಈ ಬಾರಿ ರಾಮನಗರ ಹಾಗೂ ಚಾಮರಾಜನಗರ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಕಳೆದ ಎರಡು ದಿನಗಳಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಶ್ರೀ ಕ್ಷೇತ್ರಕ್ಕೆ ಬರುತ್ತಿದ್ದಾರೆ ಎಂದರು.

Share this article