ಬಾಹ್ಯಾಕಾಶ ನಿಲ್ದಾಣಕ್ಕೆ ಧಾರವಾಡ ಕೃಷಿ ವಿವಿಯ ಹೆಸರು, ಮೆಂತೆ ಬೀಜ

KannadaprabhaNewsNetwork |  
Published : Jun 26, 2025, 01:32 AM IST
ಧಾರವಾಡ ಕೃಷಿ ವಿವಿ ಬಾಹ್ಯಾಕಾಶಕ್ಕೆ ಕಳಿಸಿರುವ ಹೆಸರುಕಾಳು ಮತ್ತು ಮೆಂತೆ ಬೀಜಗಳು. | Kannada Prabha

ಸಾರಾಂಶ

ಗಗನಯಾತ್ರಿಗಳು ಹೆಚ್ಚಾಗಿ ಬಾಹ್ಯಾಕಾಶದಲ್ಲಿ ಪೌಷ್ಟಿಕಾಂಶದ ಕೊರತೆ ಸೇರಿದಂತೆ ಗಮನಾರ್ಹ ಆರೋಗ್ಯ ಸವಾಲುಗಳನ್ನು ಎದುರಿಸುತ್ತಾರೆ. ಇದಕ್ಕೆ ಪರಿಹಾರವಾಗಿ ಬಾಹ್ಯಾಕಾಶದಲ್ಲಿ ತಾಜಾ, ಮೊಳಕೆಯೊಡೆದ ಆಹಾರ ಮೂಲಗಳಾಗಿ ಬಳಸಲು ಕೃಷಿ ವಿವಿಯು ಎರಡು ಭಾರತೀಯ ಆಹಾರ ಪ್ರಧಾನ ಬೆಳೆಗಳಾದ ಹೆಸರುಕಾಳು ಮತ್ತು ಮೆಂತೆ ಬೀಜಗಳನ್ನು ಕಳುಹಿಸಿದೆ.

ಧಾರವಾಡ: ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್ -4 ಕಾರ್ಯಾಚರಣೆಯ ಯಶಸ್ವಿ ಉಡಾವಣೆಯನ್ನು ಜಗತ್ತು ಸಂಭ್ರಮಿಸುವಾಗ ಧಾರವಾಡದ ಕೃಷಿ ವಿಶ್ವವಿದ್ಯಾಲಯ (ಯುಎಎಸ್) ತನ್ನದೇ ಆದ ವಿಶಿಷ್ಟ ಮೈಲಿಗಲ್ಲನ್ನು ದಾಖಲಿಸುತ್ತಿದೆ. ಬಾಹ್ಯಾಕಾಶ ಆಧಾರಿತ ಪೌಷ್ಟಿಕಾಂಶ ಸಂಶೋಧನೆಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಹೆಸರುಕಾಳು ಮತ್ತು ಮೆಂತೆ (ಮೇಥಿ) ಒಣ ಬೀಜಗಳನ್ನು ಕಳುಹಿಸಿದೆ.

ಗಗನಯಾತ್ರಿಗಳು ಹೆಚ್ಚಾಗಿ ಬಾಹ್ಯಾಕಾಶದಲ್ಲಿ ಪೌಷ್ಟಿಕಾಂಶದ ಕೊರತೆ ಸೇರಿದಂತೆ ಗಮನಾರ್ಹ ಆರೋಗ್ಯ ಸವಾಲುಗಳನ್ನು ಎದುರಿಸುತ್ತಾರೆ. ಇದಕ್ಕೆ ಪರಿಹಾರವಾಗಿ ಬಾಹ್ಯಾಕಾಶದಲ್ಲಿ ತಾಜಾ, ಮೊಳಕೆಯೊಡೆದ ಆಹಾರ ಮೂಲಗಳಾಗಿ ಬಳಸಲು ಕೃಷಿ ವಿವಿಯು ಎರಡು ಭಾರತೀಯ ಆಹಾರ ಪ್ರಧಾನ ಬೆಳೆಗಳಾದ ಹೆಸರುಕಾಳು ಮತ್ತು ಮೆಂತೆ ಬೀಜಗಳನ್ನು ಕಳುಹಿಸಿದೆ ಎಂದು ಧಾರವಾಡದ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಯೋಜನೆಯ ಪ್ರಧಾನ ತನಿಖಾಧಿಕಾರಿ ಡಾ. ರವಿಕುಮಾರ್ ಹೊಸಮನಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ನಾವು ಕಳುಹಿಸಿರುವ ಬೀಜಗಳಿಗೆ ನೀರನ್ನು ಸೇರಿಸುವ ಮೂಲಕ ಬೀಜಗಳನ್ನು ಜೀವಂತ ಇಟ್ಟು, 2 ರಿಂದ 4 ದಿನಗಳಲ್ಲಿ ಮೊಳಕೆಯೊಡೆಯವಂತೆ ಮಾಡುತ್ತಾರೆ. ನಂತರ, ಬೀಜಗಳನ್ನು ಫ್ರೀಜ್ ಮಾಡಿ ಭೂಮಿಗೆ ಹಿಂತಿರುಗಿಸುವ ಮೊದಲು ನಿಲ್ದಾಣದಲ್ಲಿ ಸಂರಕ್ಷಿಸಲಾಗುತ್ತದೆ. ಅವುಗಳು ಹಿಂತಿರುಗಿದ ನಂತರ, ಕೃಷಿ ವಿವಿಯಲ್ಲಿ ಮೊಳಕೆಯ ಪ್ರಮಾಣವನ್ನು ಅವುಗಳ ಪೋಷಕಾಂಶ ಗುಣಮಟ್ಟವನ್ನು ಫೈಟೊಹಾರ್ಮೋನ್ ಡೈನಾಮಿಕ್ಸ್‌ನಲ್ಲಿನ ಬದಲಾವಣೆಗಳು ಮತ್ತು ಬಾಹ್ಯಾಕಾಶ ಪರಿಸ್ಥಿತಿಗಳಿಗೆ ಹೊಂದುಕೊಳ್ಳುವ ಕುರಿತು ನಾವು ವಿಶ್ಲೇಷಿಸುತ್ತೇವೆ ಎಂದರು.

ಈ ಸಂಶೋಧನೆಯಿಂದ ಭವಿಷ್ಯದಲ್ಲಿ ಅಂತರಿಕ್ಷಯಾನದಲ್ಲಿ ಭಾರತೀಯರ ಆಹಾರದ ಭಾಗವಾಗಬಲ್ಲ ಆರೋಗ್ಯಕರ ಸಲಾಡ್‌ ತರಕಾರಿ ಅಭಿವೃದ್ಧಿಗೆ ಸಹಾಯಕಾರಿಯಾಗಲಿದೆಯೇ ಎಂಬುದೇ ನಮ್ಮ ಗುರಿ.

ಮೊಳಕೆಯೊಡೆದ ಬೀಜಗಳು ಪೌಷ್ಟಿಕವಾಗಿರುತ್ತವೆ ಎಂದು ತಿಳಿದುಬಂದಿದೆ. ಅನೇಕ ಸಂಪೂರ್ಣ ಸಲಾಡ್ ಸಸ್ಯಗಳಿಗಿಂತ ಹೆಚ್ಚಿನ ಆಹಾರ ಮೌಲ್ಯವನ್ನು ಇವು ನೀಡುತ್ತವೆ. ಭಾರತೀಯ ಪಾಕಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾಗುವ ಹೆಸರುಕಾಳು, ಅರೆ-ಶುಷ್ಕ ಪರಿಸ್ಥಿತಿಗಳಲ್ಲಿ ಬೆಳೆಯುತ್ತದೆ ಮತ್ತು ಬಾಹ್ಯಾಕಾಶ ಕೃಷಿಗೆ ಸೂಕ್ತವಾಗಿದೆ. ಇನ್ನು, ಮತ್ತೊಂದೆಡೆ, ಮೆಂತೆ ಪೌಷ್ಟಿಕಾಂಶದ ಸಂಯುಕ್ತಗಳಿಂದ ಸಮೃದ್ಧವಾಗಿದೆ ಮತ್ತು ರೋಗನಿರೋಧಕ ಶಕ್ತಿ, ಸುಧಾರಿತ ಮೂಳೆ ಆರೋಗ್ಯ, ಮೂತ್ರಪಿಂಡದ ಕಲ್ಲುಗಳ ಅಪಾಯ ಕಡಿಮೆ ಮತ್ತು ಹೃದಯರಕ್ತನಾಳದ ಬೆಂಬಲ ಸೇರಿದಂತೆ ಹಲವಾರು ಔಷಧೀಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಡಾ. ಹೊಸಮನಿ ಮಾಹಿತಿ ನೀಡಿದರು.

ಧಾರವಾಡಕ್ಕೆ ಹೆಮ್ಮೆ: ಧಾರವಾಡ ಕೃಷಿ ವಿವಿಗೆ ಹೆಮ್ಮೆ ತರುವ ನಿಟ್ಟಿನಲ್ಲಿ ಹೆಸರುಕಾಳು ಹಾಗೂ ಮೆಂತೆ ಬೀಜಗಳನ್ನು ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಹೆಪ್ಪುಗಟ್ಟಿದ ಈ ಕಾಳುಗಳ ಬೀಜಗಳನ್ನು ಮುಂದಿನ 14 ದಿನಗಳಲ್ಲಿ ಧಾರವಾಡದ ಕೃಷಿ ವಿವಿಗೆ ಹಿಂತಿರುಗಿಸುವ ನಿರೀಕ್ಷೆಯಿದೆ. ಅವು ಬಂದ ನಂತರ ವಿವರವಾದ ಪೌಷ್ಟಿಕಾಂಶ ಮತ್ತು ಶಾರೀರಿಕ ಮೌಲ್ಯಮಾಪನಗಳನ್ನು ಮಾಡಬಹುದು. ಈ ಯೋಜನೆಯನ್ನು ಐಐಟಿ-ಧಾರವಾಡದ ಅಸೋಸಿಯೇಟ್ ಪ್ರೊಫೆಸರ್ ಡಾ. ಸುಧೀರ್ ಸಿದ್ದಾಪುರರೆಡ್ಡಿ ಅವರ ಸಹಯೋಗದೊಂದಿಗೆ ನಡೆಸಲಾಗುತ್ತಿದೆ ಎಂದು ಕೃಷಿ ವಿವಿ ಕುಲಪತಿ ಪ್ರೊ. ಪಿ.ಎಲ್‌. ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ