ದಾವಣಗೆರೆಯಲ್ಲಿ ಜನಗಣತಿಗೆ ದಿನಕ್ಕೊಂದು ಆದೇಶಕ್ಕೆ ಕಿಡಿ

KannadaprabhaNewsNetwork |  
Published : Oct 15, 2025, 02:06 AM IST
ಕ್ಯಾಪ್ಷನ14ಕೆಡಿವಿಜಿ48, 49 ರಾಜ್ಯ ಸರ್ಕಾರದ ದಿನಕ್ಕೊಂದು ಆದೇಶ ಖಂಡಿಸಿ ದಾವಣಗೆರೆಯಲ್ಲಿ ಗಣತಿ ಶಿಕ್ಷಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ನಡೆಯುತ್ತಿರುವ ಜಾತಿಗಣತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ದಿನಕ್ಕೊಂದು ಆದೇಶ ಹೊರಡಿಸುತ್ತಿರುವುದನ್ನು ಖಂಡಿಸಿ ಗಣತಿದಾರ ಶಿಕ್ಷಕರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ನಡೆಯುತ್ತಿರುವ ಜಾತಿಗಣತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ದಿನಕ್ಕೊಂದು ಆದೇಶ ಹೊರಡಿಸುತ್ತಿರುವುದನ್ನು ಖಂಡಿಸಿ ಗಣತಿದಾರ ಶಿಕ್ಷಕರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆದರು.

ಶೂನ್ಯದಿಂದ 6 ವರ್ಷದ ಒಳಗಿನ ಮಕ್ಕಳ ಗಣತಿ ಕಾರ್ಯ ಮಾಡುವಂತೆ ಆದೇಶಿಸಿರುವ ಸರ್ಕಾರದ ನಿರ್ಧಾರ ಖಂಡಿಸಿದ ಗಣತಿದಾರ ಶಿಕ್ಷಕರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಮಂಗಳವಾರ ಬೆಳಿಗ್ಗೆ ದಿಢೀರನೆ ಪ್ರತಿಭಟನೆ ನಿರ್ಧಾರ ಕೈಗೊಂಡ 500 ಕ್ಕೂ ಅಧಿಕ ಶಿಕ್ಷಕರು ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಕಾಲ ಧರಣಿ ನಡೆಸಿ ನಾಳೆಯಿಂದ ಯಾವುದೇ ಕಾರಣಕ್ಕೂ ಮರು ಗಣತಿಗೆ ತೆರಳುವುದಿಲ್ಲ ಎಂದು ಪಟ್ಟುಹಿಡಿದರು.

ಹಲವಾರು ಸವಾಲುಗಳ ನಡುವೆಯೂ ಜಿಲ್ಲೆಯಲ್ಲಿ ಶೇ.97 ಕ್ಕಿಂತ ಅಧಿಕ ಗಣತಿ ಕಾರ್ಯ ಯಶಸ್ವಿಯಾಗಿ ಮುಗಿದಿದೆ. ಇದೀಗ ಮತ್ತೆ ಪ್ರತಿ ಗಣತಿದಾರರು ತಮಗೆ ನಿಗದಿಪಡಿಸಿದ 150 ಮನೆಗಳಿಗೆ ತೆರಳಿ ಶೂನ್ಯದಿಂದ 6 ವರ್ಷದೊಳಗಿನ ಮಕ್ಕಳ ಗಣತಿ ಮಾಡಬೇಕೆಂದು ಆದೇಶಿಸಿರುವುದು ಸರಿಯಲ್ಲ. ಸ್ವಲ್ಪ ವಿಷ ಕೊಡಿ ಇಲ್ಲವೇ ಗಣತಿ ಕಾರ್ಯದಿಂದ ಮುಕ್ತಿಕೊಡಿ ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಒಡೆನಪುರ ಮಾತನಾಡಿ, ಜಿಲ್ಲಾಡಳಿತ ಮತ್ತು ಮೇಲಾಧಿಕಾರಿಗಳು ಅ.18 ರವರೆಗೆ ಮರು ಸಮೀಕ್ಷೆ ಮಾಡಬೇಕು ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್, ಶಿಸ್ತು ಕ್ರಮದ ಎಚ್ಚರಿಕೆಯಿಂದ ನೌಕರರು ಸಾಕಷ್ಟು ನೊಂದಿದ್ದೇವೆ. ಹಾಗಾಗಿ ತಕ್ಷಣವೇ ಗಣತಿದಾರರನ್ನು ಸಮೀಕ್ಷಾ ಕಾರ್ಯದಿಂದ ಬಿಡುಗಡೆಗೊಳಿಸಿ ಶಾಲೆಗಳಿಗೆ ತೆರಳಲು ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮನವಿ ಆಲಿಸಿದ ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ, ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಪಾಲಾಕ್ಷಿ, ಖಜಾಂಚಿ ತಿಪ್ಪೇಸ್ವಾಮಿ, ರಾಜ್ಯ ಜಂಟಿ ಕಾರ್ಯದರ್ಶಿ ಶಿವಣ್ಣ, ರಾಜ್ಯ ಸಾಂಸ್ಕೃತಿಕ ಕಾರ್ಯದರ್ಶಿ, ಮಂಜಮ್ಮ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮುಬಾರಕ್ ಅಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಮಪ್ಪ, ಕರಿಬಸಪ್ಪ, ರವಿಶಂಕರ್, ಜಿಪಿಟಿ ಸಂಘದ ಎ.ಮಾರುತಿ, ಮಹಾಂತೇಶ ಎಸ್, ಮಹಾರುದ್ರಪ್ಪ ಹಲವರು ಹಾಜರಿದ್ದರು.

PREV

Recommended Stories

ಮರಳು ದಂಧೆ ತಡೆದ ಎಎಸ್‌ಐಗೆ ಹಲ್ಲೆ: ರಾಜೂಗೌಡ
ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ