- ‘ತಾರತಮ್ಯ ಕೊನೆಗೊಳಿಸುವುದು, ಘನತೆ ಕಾಪಾಡುವುದು’ ಘೋಷವಾಕ್ಯ: ಸಿಇಒ
ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜ.30ರಿಂದ ಫೆ.13ರವರೆಗೆ ಜಿಲ್ಲೆಯಲ್ಲಿ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ -2026 ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ತಾರತಮ್ಯವನ್ನು ಕೊನೆಗೊಳಿಸುವುದು ಘನತೆಯನ್ನು ಕಾಪಾಡುವುದು’ ಈ ವರ್ಷದ ಘೋಷವಾಕ್ಯವಾಗಿದೆ ಎಂದರು.
ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ನೆಲೆಸಿರುವವರು, ಕುಷ್ಠರೋಗಿಗಳೊಂದಿಗೆ ಸಂಪರ್ಕ ಹೊಂದಿದವರು, ಶಾಲೆ-ಕಾಲೇಜಿನ ವಿದ್ಯಾರ್ಥಿಗಳು, ನಗರದ ಸ್ಲಂ ಪ್ರದೇಶಗಳಲ್ಲಿ ವಾಸಿಸುವವರಿಗೆ ಕುಷ್ಠರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅವರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಬೇಕು. ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಬೇಕು. ರೋಗಿಗಳನ್ನು ಗುರುತಿಸುವುದು ಹಾಗೂ ಚಿಕಿತ್ಸೆ ನೀಡುವುದಕ್ಕೆ ಕಾರ್ಮಿಕರ ವಲಸೆಯು ಸವಾಲಾಗಿದೆ ಎಂದು ಹೇಳಿದರು.
5ರಿಂದ 10 ವರ್ಷಗಳ ಚಿಕಿತ್ಸೆ ಅಗತ್ಯತೆ ಇರುತ್ತದೆ. ರೋಗಿಗಳಿಗೆ ಉಚಿತ ಔಷಧಿ ಮತ್ತು ಕಿಟ್ ನೀಡಲಾಗುವುದು. ಕುಷ್ಠರೋಗದ ಬಗ್ಗೆ ಗ್ರಾಮಗಳಲ್ಲಿ ಅರಿವು ಮೂಡಿಸಲು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಒಬ್ಬ ಕುಷ್ಠರೋಗಿಯನ್ನು ಪತ್ತೆ ಹಚ್ಚಿದರೆ ಆಶಾ ಕಾರ್ಯಕರ್ತೆಯರಿಗೆ ₹600 ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.
- - -
ದಾವಣಗೆರೆಯಲ್ಲಿ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಜಿಪಂ ಸಿಇಓ ಗಿತ್ತೆ ಮಾಧವ ವಿಠಲ ರಾವ್ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನದ ಪೋಸ್ಟರ್ ಬಿಡುಗಡೆ ಮಾಡಿದರು.