ಆನಂದಪುರ : ಶಾಸಕ ಗೋಪಾಲಕೃಷ್ಣ ಬೇಳೂರು ರವರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಸಾಗರ ತಾಲೂಕು ಕಾಂಗ್ರೆಸ್ ಮುಖಂಡ ಚೇತನ್ ರಾಜ್ ಕಣ್ಣೂರ್ ಕಿಡಿಕಾರಿದರು.
ಆನಂದಪುರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸಾಗರ ಕ್ಷೇತ್ರದ ಶಾಸಕರಿಂದ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಬಡವರ,ದಲಿತರ,ಯುವಕರ ಜನಸಾಮಾನ್ಯರ ಅಭಿವೃದ್ಧಿಗೆ ಶ್ರಮಿಸುತ್ತಿರುವಂತಹ ಶಾಸಕರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ವಿರುದ್ಧ ಹರಿಹಾಯ್ದರು.
ಆಡಳಿತ ವ್ಯವಸ್ಥೆ ಎಂದಾಗ ಅಲ್ಪಸಲ್ಪ ವ್ಯತ್ಯಾಸಗಳಾಗಿರಬಹುದು, ಮಾಜಿ ಶಾಸಕ ಹರತಾಳು ಹಾಲಪ್ಪನವರ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲವೆ ಎಂದು ಪ್ರಶ್ನಿಸಿದರು.
ಬಿಜೆಪಿ ಪಕ್ಷದಲ್ಲಿ ರತ್ನಾಕರ ಹೊನಗೋಡು ಅವರಿಗೆ ಯಾವುದೇ ಸ್ಥಾನಮಾನ ದೊರೆತಿಲ್ಲ. ಬಿಜೆಪಿ ಪಕ್ಷ ಇವರನ್ನು ನಿರ್ಲಕ್ಷ್ಯ ಮಾಡಿದ್ದರಿಂದ ತಮ್ಮನ್ನು ತಾವು ಗುರುತಿಸಿಕೊಳ್ಳಲು ಶಾಸಕರ ಬಗ್ಗೆ ಮಾತನಾಡುತ್ತಿದ್ದಾರೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಸಾಗರ- ಸೊರಬ ರಸ್ತೆಗಳಿಗೆ ಕಾಗೋಡು ತಿಮ್ಮಪ್ಪನವರ ಅಧಿಕಾರದ ಅವಧಿಯಲ್ಲಿ ಅನುದಾನ ದೊರಕಿದ್ದು, ರತ್ನಾಕರ ಹೊನಗೋಡು ಅವರು ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾದರು ಯಾವುದೇ ಜನ ಪರ ಕಾರ್ಯ ಮಾಡಿಲ್ಲ. ಈಗಲಾದರೂ ಲೋಕಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರಿಂದ ಅನುದಾನವನ್ನು ತಂದು ಆನಂದಪುರ ಹೋಬಳಿಯ ಅಭಿವೃದ್ಧಿಗೆ ಶ್ರಮಿಸಿ ಜನರ ಋಣ ತೀರಿಸುವಂತಹ ಕೆಲಸವನ್ನು ಮಾಡಲಿ ಎಂದು ಕುಟುಕಿದರು.
ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಗ್ಯಾರಂಟಿ ಯೋಜನೆಯ ನಡುವೆಯೂ ಕ್ಷೇತ್ರಕ್ಕೆ ಕೋಟಿ ಕೋಟಿ ರು. ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳುನ್ನು ಮಾಡುತ್ತಿದ್ದಾರೆ. ಆದರೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ರವರಿಂದ ಆನಂದಪುರ ಹೋಬಳಿಗೆ ಯಾವ ಅಭಿವೃದ್ಧಿ ಕೆಲಸವಾಗಿದೆ ಎಂದರು.
ಪದೇ ಪದೇ ಸಾಗರ ಕ್ಷೇತ್ರದ ಶಾಸಕರ ಬಗ್ಗೆ ಮಾತನಾಡುವುದನ್ನು ಬಿಟ್ಟು ಹಾಲಪ್ಪನವರ ಅವಧಿಯಲ್ಲಿನ ಕಾಮಗಾರಿ, ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮಾಡುತ್ತಿರುವ ಅಭಿವೃದ್ಧಿಯ ಬಗ್ಗೆ ದಾಖಲೆ ಸಮೇತವಾಗಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಕಿಡಿಕಾರಿದರು.
ಹೊಸೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶರತ್ ನಾಗಪ್ಪ, ಆಚಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಕಲೀಮುಲ್ಲಾ ಖಾನ್, ಸದಸ್ಯ ಅಬ್ದುಲ್ ಗನ್ನಿಸಾಬ್, ನಜರುಲ್ಲಾ ಖಾನ್, ಎನ್. ಉಮೇಶ್, ಗೌತಮ್ ಪುರ ಗ್ರಾಮ ಪಂಚಾಯತಿ ಅಧ್ಯಕ್ಷ ರೇಣುಕಾ, ಇತರರು ಇದ್ದರು.