ಕೂಡ್ಲಿಗಿ: ವ್ಯವಹಾರಿಕ ಭಾಷೆಯಾಗಿ ಎಲ್ಲ ಕಡೆ ಕನ್ನಡ ಮಾತನಾಡುವುದರ ಮೂಲಕ ಗೌರವ ಸಲ್ಲಿಸಬೇಕು ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಕರೆ ನೀಡಿದರು.
ಅವರು ಪಟ್ಟಣದ ಚಂದ್ರಶೇಖರ್ ಆಜಾದ್ ರಂಗಮಂದಿರದಲ್ಲಿ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.ನಮ್ಮ ನೆಲದಲ್ಲಿ ಕನ್ನಡ ಪಸರಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಕನ್ನಡಿಗರಾದ ನಮ್ಮ ಹೃದಯದಲ್ಲಿ ಕನ್ನಡದ ಜ್ಯೋತಿ ಬೆಳಗಬೇಕು. ಅದಕ್ಕಾಗಿ ಕೂಡ್ಲಿಗಿ ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಈಗಾಗಲೇ ಜಾಗ ಕಾಯ್ದಿರಿಸಿದೆ. ಅದಕ್ಕೆ ಒಂದು ಕೋಟಿ ರು. ಅನುದಾನ ಮಂಜೂರು ಮಾಡಿಸಲಾಗಿದೆ. ನಾನು ಶಾಸಕನಾಗಿ ಎರಡೂವರೆ ವರ್ಷದಲ್ಲಿ ₹1300 ಕೋಟಿ ಅನುದಾನ ತಂದು ಅಭಿವೃದ್ಧಿಗೆ ಪೂರಕವಾಗಿ ಕ್ಷೇತ್ರದ ಜನತೆಯ ನಂಬಿಕೆ, ಶಕ್ತಿ, ಪ್ರೀತಿಗೆ ಸಾಕ್ಷಿಯಾಗಿದ್ದೇನೆ ಎಂದರು.
ನ.೯ರಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ತಾಲೂಕಿನ ೭೪ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಕಾರ್ಪಣೆ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.ಪಟ್ಟಣದ ಮಹದೇವ ಮೈಲಾರ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಶಾಸಕ ಡಾ.ಶ್ರೀನಿವಾಸ್ ಎನ್.ಟಿ ಮತ್ತು ತಹಸಿಲ್ದಾರ್ ಹಾಗೂ ಅಧಿಕಾರಿವರ್ಗ, ಸಂಘಟನೆಯವರು ಪುಷ್ಪ ನಮನ ಸಲ್ಲಿಸಿದರು.
ಕ್ರೀಡಾಂಗಣದ ಮಧ್ಯದಲ್ಲಿರುವ ಧ್ವಜ ಕಂಬದ ಬಳಿ ನಡಿಗೆ ಮೂಲಕ ಬಂದು ತಹಸಿಲ್ದಾರ ವಿ.ಕೆ. ನೇತ್ರಾವತಿ ಚಪ್ಪಲಿಯನ್ನು ಧರಿಸಿಕೊಂಡೇ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.ಧ್ವಜ ಕಟ್ಟೆಯ ಕೆಳಭಾಗದಲ್ಲಿ ರಾಷ್ಟ್ರ ನಾಯಕರ ಭಾವಚಿತ್ರಗಳು ಇದ್ದರೂ ಅದರ ಪರಿವಿಲ್ಲದೇ ಶಾಸಕರ ಜೊತೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ಕೆ.ನರಸಪ್ಪ, ಡಿವೈಎಸ್ಪಿ ಮಲ್ಲೇಶ ದೊಡ್ಮನೆ, ಸಿಪಿಐ ಪ್ರಹ್ಲಾದ್ ಆರ್.ಚನ್ನಗಿರಿ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪ ಇದ್ದರು.