ಮಾಡೂರು ಸರ್ಕಾರಿ ಶಾಲೆಗೆ ಮರುಜೀವಕ್ಕೆ ಚಿಂತನೆ: ಸ್ಪೀಕರ್‌ ಖಾದರ್‌ ನೇತೃತ್ವ

KannadaprabhaNewsNetwork |  
Published : Feb 21, 2025, 12:46 AM IST
32 | Kannada Prabha

ಸಾರಾಂಶ

ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗೆ ಸ್ಥಳೀಯರ ನೆರವಿನೊಂದಿಗೆ ವಿಧಾನ ಸಭಾಧ್ಯಕ್ಷ ಯು‌.ಟಿ. ಖಾದರ್ ಮರುಜೀವ ನೀಡಲು ಮುಂದಾಗಿದ್ದಾರೆ. ಭಾರೀ ಬೇಡಿಕೆ ಇರುವ ಹಿನ್ನಲೆಯಲ್ಲಿ ಮಾಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಆರಂಭಿಸಲು ಯೋಜನೆ ರೂಪಿಸಿದ್ದಾರೆ.

ವಜ್ರ ಗುಜರನ್ ಮಾಡೂರು

ಕನ್ನಡಪ್ರಭ ವಾರ್ತೆ ಉಳ್ಳಾಲ

ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗೆ ಸ್ಥಳೀಯರ ನೆರವಿನೊಂದಿಗೆ ವಿಧಾನ ಸಭಾಧ್ಯಕ್ಷ ಯು‌.ಟಿ. ಖಾದರ್ ಮರುಜೀವ ನೀಡಲು ಮುಂದಾಗಿದ್ದಾರೆ. ಭಾರೀ ಬೇಡಿಕೆ ಇರುವ ಹಿನ್ನಲೆಯಲ್ಲಿ ಮಾಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಆರಂಭಿಸಲು ಯೋಜನೆ ರೂಪಿಸಿದ್ದಾರೆ.

ಶಾಲೆಯ ಉಳಿವಿಗಾಗಿ ಪಕ್ಷ ಬೇಧ ಮರೆತು ಸ್ಥಳೀಯ ಜನ ಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಎಸ್‌ಡಿಎಂಸಿ ಸದಸ್ಯರು, ಹಳೆವಿದ್ಯಾರ್ಥಿಗಳು ಆಂಗ್ಲ ಶಿಕ್ಷಣದ ಕನಸು ಕಂಡಿದದ್ದರು. ಈ ಕನಸಿಗೆ ಮಂಗಳೂರು ಕ್ಷೇತ್ರದ ಶಾಸಕ, ವಿಧಾನ ಸಭಾಧ್ಯಕ್ಷರು ಆಗಿರುವ ಯು.ಟಿ ಖಾದರ್ ಬೆಂಬಲವಾಗಿ ನಿಂತಿದ್ದಾರೆ. ಶಾಲೆಯ ಅಭಿವೃದ್ಧಿ ಮತ್ತು ಆಂಗ್ಲ ಶಿಕ್ಷಣವನ್ನು ಈ ಸರ್ಕಾರಿ ಶಾಲೆಯಲ್ಲಿ ಆರಂಭಿಸುವ ಕುರಿತು ಶಾಲೆಯಲ್ಲಿ ಸಮಾಲೋಚನಾ ಸಭೆ ನಡೆಸಿದ್ದಾರೆ.

ಆಂಗ್ಲ ಮಾಧ್ಯಮ ಆರಂಭಕ್ಕೆ ಸ್ಥಳೀಯವಾಗಿ ಇರುವ ಬೇಡಿಕೆ ಮತ್ತು ಮಕ್ಕಳ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲು ಯು‌.ಟಿ ಖಾದರ್ ಸೂಚಿಸಿದ್ದು, ಅದರಂತೆ ಎಲ್‌ಕೆಜಿ, ಯುಕೆಜಿ, ಹಾಗೂ ಒಂದನೇ ತರಗತಿ ಆಂಗ್ಲ ಮಾಧ್ಯಮ ಬೇಡಿಕೆಯ ನಿಗದಿತ ಅಂಕಿ ಅಂಶ ನೀಡುವಂತೆ ಶಾಲಾ ಶಿಕ್ಷಕರಿಗೆ ಸಲಹೆ ನೀಡಿದ್ದಾರೆ.

ಈಗಾಗಲೇ ಸ್ಥಳೀಯ ಹಲವು ಪೋಷಕರು ಆಂಗ್ಲ ಮಾಧ್ಯಮದ ಬೇಡಿಕೆ ಇಟ್ಟಿದ್ದು ಇಂಗ್ಲಿಷ್ ಮಿಡಿಯಂ ಆರಂಭವಾದರೆ ಮಕ್ಕಳನ್ನು ಖಾಸಗಿ ಶಾಲೆಯ ಬದಲಾಗಿ ಮಾಡೂರು ಸರ್ಕಾರಿ ಶಾಲೆಗೆ ಸೇರಿಸುವ ಬಗ್ಗೆ ಉತ್ಸುಕರಾಗಿದ್ದಾರೆ.

ಅದರನ್ವಯ ಮುಂದಿನ ಶೈಕ್ಷಣಿಕ ವರ್ಷ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಮೂರು ತರಗತಿಗಳಿಗೆ 100ಕ್ಕೂ ಅಧಿಕ ಪೋಷಕರು ಮಕ್ಕಳನ್ನು ಸೇರಿಸಲು ಉತ್ಸುಕರಾಗಿದ್ದಾರೆ.

ಪಕ್ಷಭೇದ ಮರೆತರು:

ಶಾಲೆಯ ಅಭಿವೃದ್ಧಿ ಯೋಜನೆ ಬಂದ ಬೆನ್ನಲೇ ಸ್ಥಳೀಯ ಪ್ರತಿನಿಧಿ ಕಾರ್ಯಪ್ರವೃತ್ತ ರಾಗಿದ್ದಾರೆ. ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯ ಸುಜೀತ್ ಮಾಡೂರು ವಾರ್ಡ್‌ ವ್ಯಾಪ್ತಿಯಲ್ಲಿ ಈ ಸರ್ಕಾರಿ ಶಾಲೆ ಇದ್ದು, ಅವರು ಈ ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿದ್ದು, ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟರು. ಅವರು ಶಾಲೆಗೆ ಹೊಸ ಕಟ್ಟಡ ಸೇರಿ ಹಲವು ಯೋಜನೆಗಳ ಪಟ್ಟಿ ಸಿದ್ಧಪಡಿಸಿದರು.

ಅದರಂತೆ ಪಂಚಾಯತಿ ಅನುದಾನದ ಜೊತೆಗೆ ಕೆಲ ಕಂಪನಿಗಳ ಸಿಎಸ್‌ಆರ್‌ ಫಂಡ್‌ನಡಿ ಅನುದಾನ ತಂದು ಶಾಲೆಗೆ ನೂತ‌ನ ಕಟ್ಟಡ ಕಟ್ಟುವ ಯೋಜನೆ ಹಾಕಿದ್ದಾರೆ. ಸ್ಥಳೀಯ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಮುಖರು ಕೂಡ ಸಾಥ್ ನೀಡಿದ್ದಾರೆ.

ಇತಿಹಾಸ:

ಮಾಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ 1979 ರಲ್ಲಿ ಆರಂಭವಾಯಿತು. 2010ರಲ್ಲಿ 8ನೇ ತರಗತಿ ಆರಂಭವಾಗುವ ಮೂಲಕ ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಯಾಯಿತು‌‌. ಈ ಸರ್ಕಾರಿ ಶಾಲೆಯಲ್ಲಿ ಇದೀಗ 68 ವಿದ್ಯಾರ್ಥಿಗಳಿದ್ದಾರೆ. ಒಬ್ಬರು ಅತಿಥಿ ಶಿಕ್ಷಕರ ಜೊತೆಗೆ ಒಟ್ಟು 3 ಶಿಕ್ಷಕರೂ ಕಾರ್ಯನಿರ್ವಹಿಸುತ್ತಿದ್ದಾರೆ.

ಆಂಗ್ಲ ಮಾಧ್ಯಮ ಘೋಷಣೆಗೆ ಸಲಹೆ:

ನನ್ನ ಕ್ಷೇತ್ರದಲ್ಲಿ ಅನೇಕ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಮಾಡಲಾಗಿದೆ. ಮಾಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ವಿಭಾಗವನ್ನು ಆರಂಭಿಸುವ ಅನ್ನುವ ಆಶಯ ಈ ಊರಿನ ಜನರ ಮೇಲಿದೆ‌. ಮೊದಲಿಗೆ ಸಮಿತಿ ರಚನೆ ಮಾಡಬೇಕು. ನಂತರ ಈ ವರ್ಷದಿಂದ ಮಾಡೂರು ಶಾಲೆಯನ್ನು ಇಂಗ್ಲಿಷ್ ಮಾಧ್ಯಮ ಮಾಡುವ ಬಗ್ಗೆ ಘೋಷಣೆ ಮಾಡಬೇಕು. ಆ ನಂತರ ಬರುವ ಅರ್ಜಿಗಳನ್ನು ಪರಿಶೀಲಿಸಿ ಆಂಗ್ಲ ಮಾಧ್ಯಮ ಕ್ಕೆ ಬೇಕಾಗುವಷ್ಟು ವಿದ್ಯಾರ್ಥಿಗಳು ಇದ್ದ ಪಕ್ಷದಲ್ಲಿ ಆಗಲೇ ಇದನ್ನು ಇಂಗ್ಲಿಷ್ ಮೀಡಿಯಂ ಶಾಲೆಯಾಗಿ ಮಂಜೂರು ಮಾಡಲಾಗುತ್ತದೆ ಎಂದು ಸ್ಥಳೀಯ ಶಾಸಕ ಹಾಗೂ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಸಲಹೆ ನೀಡಿದ್ದಾರೆ.

ನೂತನ ಕಟ್ಟಡ ನಿರ್ಮಾಣ:

ಊರಿನವರ ಸಹಕಾರ ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಜೊತೆ ಸೇರಿ ಈ ಶಾಲೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಎಲ್ಲ ಶಾಲೆಯಂತೆ ಇಲ್ಲಿಯೂ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗಿದೆ. ಶಾಲೆಯ ಹಳೆ ಕಟ್ಟಡ ದುರಸ್ತಿಯಲ್ಲಿದ್ದು, ಇದನ್ನು ಕೆಡವಿ ಇದೇ ಜಾಗದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ ಎನ್ನುವುದು ಈ ಭಾಗದ ಪಂಚಾಯತಿ ಕೌನ್ಸಿಲರ್ ಸುಜೀತ್ ಮಾಡೂರು ವಿಶ್ವಾಸ.

ಬುಧವಾರ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೊಳಿಯಾರ್, ಕೌನ್ಸಿಲರ್‌ ಸುಜೀತ್‌ ಮಾಡೂರು, ಧಾರ್ಮಿಕ ಪರಿಷತ್‌ ಸದಸ್ಯ ಸುರೇಶ್ ಭಟ್ನಗರ್, ತಾಲೂಕು ಪಂಚಾಯತಿ ಮಾಜಿ ಸದಸ್ಯೆ ಸುರೇಖ ಚಂದ್ರಹಾಸ್, ಚಂದ್ರಿಕ ರೈ, ಅಜೀಝ್ ಮಾಡೂರು, ಹಮೀದ್ ಮಾಡೂರು , ಸುಕುಮಾರ್ ಗಟ್ಟಿ ಮುಖೋಪಾಧ್ಯಯಿನಿ‌ ಪುಷ್ಪ ಇದ್ದರು.....................ಪ್ರತಿ ವರ್ಷ ಪೋಷಕರು ಶಾಲೆಗೆ ಬಂದು ಇಂಗ್ಲಿಷ್ ಮೀಡಿಯಂ ಆಗುವ ಬಗ್ಗೆ ವಿಚಾರಿಸುತ್ತಾರೆ.‌ ಆಂಗ್ಲ ಮಾಧ್ಯವನ್ನು ಆರಂಭಿಸುವುದು ಈ ಊರಿನವರ ಬಹು ಕಾಲದ ಬೇಡಿಕೆ ಇದು ನೆರವೇರಿದರೆ ಅದಕ್ಕೆ ಅನುಗುಣವಾಗಿ ಒಂದು ಶಿಕ್ಷಕರನ್ನು ಸರ್ಕಾರ ನೇಮಿಸುತ್ತದೆ. ಆದಷ್ಟು ಬೇಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಂಗ್ಲ ಮಾಧ್ಯಮ ಶಾಲೆಯಾಗಲಿ ಅನ್ನುವುದು ನಮ್ಮ ಆಶಯ.

-ಪುಷ್ಪಾ, ಶಾಲಾ ಮುಖೋಪಾಧ್ಯಾಯಿನಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ