ಜೀಪಲ್ಲಿ ಆಫ್‌ ರೋಡ್‌ ಡ್ರೈವ್‌ ಮಾಡಿದ ಸ್ಪೀಕರ್‌ ಖಾದರ್‌, ಸಂಸದ ಚೌಟ

KannadaprabhaNewsNetwork |  
Published : Sep 22, 2024, 01:54 AM IST
11 | Kannada Prabha

ಸಾರಾಂಶ

ಮಹಿಳೆಯರಿಗೂ ಉತ್ತೇಜನ ನೀಡುವ ಸಲುವಾಗಿ ಮಹಿಳಾ ಕ್ಲಾಸ್ ಸ್ಪರ್ಧೆ ಆಯೋಜಿಸಲಾಗಿದೆ. ಈಗಾಗಲೇ 5 ಎಂಟ್ರಿಗಳನ್ನು ಮಹಿಳೆಯರು ಪಡೆದುಕೊಂಡಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಕೆ.ಎ.19-20 ಯುನೈಟಡ್ ಆಫ್ ರೋಡರ್ಸ್ ವತಿಯಿಂದ ಶನಿವಾರ ಆರಂಭಗೊಂಡ ಕುಡ್ಲ ಚಾಲೆಂಜ್ ಸೀಸನ್ -4 ಆಫ್ ರೋಡಿಂಗ್‌ ಸ್ಪರ್ಧೆಯಲ್ಲಿ ಸ್ಪೀಕರ್‌ ಯು.ಟಿ. ಖಾದರ್ ಹಾಗೂ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಜೀಪಲ್ಲಿ ಆಫ್‌ ರೋಡ್ ಡ್ರೈವ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಮುಡಿಪು ನವೋದಯ ಶಾಲೆಯ ಸಮೀಪದ ನಾರ್ಯಗುತ್ತು ಜಾಗದಲ್ಲಿ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ನಡೆಯಲಿರುವ ಕುಡ್ಲ ಚಾಲೆಂಜ್ ಸೀಸನ್ -4 ಆಫ್ ರೋಡಿಂಗ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಪೀಕರ್ ಯು‌.ಟಿ. ಖಾದರ್ ಮಾತನಾಡಿ ಆಫ್ ರೋಡ್‌ನಂತಹ ಕಾರ್ಯಕ್ರಮಗಳನ್ನು ಸಂಘಟನೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಬದ್ಧತೆ,‌ ಪ್ರಾಮಾಣಿಕತೆ, ಶ್ರಮ ಹಾಗೂ ಆಸಕ್ತಿ ಇದ್ದಾಗ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯವಿದೆ. ನನ್ನ ಕಾಲೇಜು ದಿ‌ನಗಳಲ್ಲಿ ಇಂತಹ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಹಾಗೂ ಸಂಘಟನೆ ಕೂಡ ಮಾಡಿದ್ದೆ ಎಂದರು.

ಮುಡಿಪುವಿನಲ್ಲಿ ಇಂತಹ ಅರ್ಥಪೂರ್ಣವಾದ ಸ್ಪರ್ಧೆಯನ್ನು ನಡೆಸುವ ಮೂಲಕ ಇಡೀ ದೇಶಕ್ಕೆ ಮುಡಿಪನ್ನು ಪರಿಚಯ ಮಾಡುವ ಕೆಲಸವನ್ನು ಈ ಸಂಘಟನೆ ಮಾಡಿರುವುದು ಶ್ಲಾಘನೀಯ ಎಂದರು. ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ ರಾಜಕೀಯ ಕಾರ್ಯಕ್ರಮಗಳ ನಡುವೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತುಂಬಾ ಸಂತೋಷವಾಗುತ್ತದೆ‌. ಮಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಭಾಗದಿಂದ ಹೆಚ್ಚು ವಿದ್ಯಾರ್ಥಿಗಳು ಬರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಆಫ್ ರೋಡ್‌ನಂತಹ ಸಂಸ್ಕೃತಿಯನ್ನು ಕಾಣಬಹುದಾಗಿದೆ ಎಂದರು.

ನರಿಂಗಾನ ಲವ ಕುಶ ಕಂಬಳದ ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ, ರತ್ನ ಎಜ್ಯುಕೇನ್‌ ಟ್ರಸ್ಟ್‌ನ ರವೀಂದ್ರ ಶೆಟ್ಟಿ ಉಳಿದೊಟ್ಟು, ಮುಖಂಡರಾದ ಜಗದೀಶ್ ಆಳ್ವ ಕುವೆತ್ತಬೈಲ್, ಪ್ರವೀಣ್ ಆಳ್ವ, ಮುಖಂಡರಾದ ಸಂತೋಷ್ ಕುಮಾರ್ ಬೋಳಿಯಾರ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಬಾಳೆಪುಣಿ ಪಂಚಾಯಿತಿ ಅಧ್ಯಕ್ಷೆ ಎ. ಸುಕನ್ಯಾ ಶೆಟ್ಟಿ ಮುಖಂಡರಾದ ಸೀತಾರಾಂ, ಹರಿಪ್ರಸಾದ್ ರೈ ಕೊದಂಟಿ, ಪಂಚಾಯಿತಿ ಸದಸ್ಯೆ ನಮಿಮಾ , ನವೋದಯ ಪ್ರಾಂಶುಪಾಲ ರಾಜೇಶ್ ಪಿ., ಪಂಚಾಯಿತಿ ಸದಸ್ಯ ಕುಂಞಿಮೋನು, ಜುಬೈರ್, ಸೂಫಿ ಕುಂಞಿ, ಗೀತಾ ಭಂಡಾರಿ, ಅರುಣ್ ಡಿಸೋಜ, ದಿನೇಶ್ ಮಂಗಳೂರು, ಗಣೇಶ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಆಯೋಜಕರಾದ ಅವಿನಾಶ್ ಅಡಪ, ನಾಸೀರ್ ಎನ್.ಎಸ್. ನಡುಪದವು, ವಿಜೇಶ್ ನಾಯ್ಕ್, ಋಷಿತ್ ಕುಮಾರ್ ಇದ್ದರು. ದಿವ್ಯರಾಜ್ ಕಾರ್ಯಕ್ರಮ ನಿರೂಪಿಸಿದರು.ಶನಿವಾರ ಹಾಗೂ ಭಾನುವಾರ ನಡೆಯಲಿರುವ ಆಫ್ ರೋಡಿಂಗ್ ಸ್ಪರ್ಧೆಯಲ್ಲಿ ಪೆಟ್ರೋಲ್ ಸ್ಟಾಕ್, ಡಿಸೀಲ್ ಸ್ಟಾಕ್, ಸೇರಿದಂತೆ ಐದು ವಿಧಗಳಲ್ಲಿ ಸ್ಪರ್ಧೆ ನಡೆಯಲಿದೆ.ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೆ.ಎ 19-20 ಯುನೈಟಡ್ ಆಫ್ ರೋಡರ್ಸ್ ಐದು ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು, ಈಗಾಗಲೇ ಮೂರು ಈವೆಂಟ್ ಗಳನ್ನು ಆಯೋಜಿಸಿದೆ. ಈಗಾಗಲೇ 105 ವಾಹನಗಳು ಎಂಟ್ರಿಯನ್ನು ಪಡೆದಿದ್ದು, ದೇಶದಲ್ಲೇ ಮೊದಲ ಬಾರಿಗೆ ಇಂತಹ ದೊಡ್ಡಮಟ್ಟಿನ ಆಫ್ ರೋಡಿಂಗ್ ಆಯೋಜನೆ ಮಾಡಲಾಗಿದೆ.

ಕರಾವಳಿ ಮೂಲದ ಖ್ಯಾತ ಆಫ್ ರೋಡರ್ ಅಶ್ವಿನ್ ನಾಯಕ್ ಸೇರಿದಂತೆ ವಿವಿಧ ರಾಜ್ಯಗಳ ಖ್ಯಾತಿಯನ್ನು ಹೊಂದಿರುವ ಜಯ ಗಳಿಸಿದ ಆಫ್ ರೋಡರ್ ಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಮಹಿಳಾ ಕ್ಲಾಸ್ ಗೂ ಎಂಟ್ರಿ : ಮಹಿಳೆಯರಿಗೂ ಉತ್ತೇಜನ ನೀಡುವ ಸಲುವಾಗಿ ಮಹಿಳಾ ಕ್ಲಾಸ್ ಸ್ಪರ್ಧೆ ಆಯೋಜಿಸಲಾಗಿದೆ. ಈಗಾಗಲೇ 5 ಎಂಟ್ರಿಗಳನ್ನು ಮಹಿಳೆಯರು ಪಡೆದುಕೊಂಡಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ