ರಾಣಿಬೆನ್ನೂರಿನಲ್ಲಿ ಯುದ್ಧ ಟ್ಯಾಂಕರ್ ಮೆರವಣಿಗೆಗೆ ಇಂದು ಸ್ಪೀಕರ್ ಖಾದರ್ ಚಾಲನೆ

KannadaprabhaNewsNetwork |  
Published : Aug 15, 2025, 01:00 AM IST
 ಪ್ರಕಾಶ ಕೋಳಿವಾಡ ತಿ | Kannada Prabha

ಸಾರಾಂಶ

ಆ. 15ರಂದು ಬೆಳಗ್ಗೆ 7.45ಕ್ಕೆ ನಗರದ ಎಪಿಎಂಸಿ ಗಣೇಶ ದೇವಸ್ಥಾನ ಬಳಿ ಟ್ಯಾಂಕರ್‌ಗೆ ಸ್ಪೀಕರ್ ಯು.ಟಿ. ಖಾದರ್ ಪೂಜೆ ಸಲ್ಲಿಸಿ, ನಂತರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ರಾಣಿಬೆನ್ನೂರು: ಪಾಕಿಸ್ತಾನ ವಿರುದ್ಧ ಬಳಕೆ ಮಾಡಿದ್ದ ಯುದ್ಧ ಟ್ಯಾಂಕರ್ ಮೆರವಣಿಗೆಗೆ ಆ. 15ರಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಯುದ್ಧದಲ್ಲಿ ಬಳಸಿದ ವಿಮಾನ ಅಥವಾ ಟ್ಯಾಂಕರ್ ತರುವ ಬಗ್ಗೆ ಸೈನ್ಯದಲ್ಲಿ ಸೇವೆ ಸಲ್ಲಿಸಿದ ನನ್ನ ಸ್ನೇಹಿತರೊಬ್ಬರು ನನ್ನ ಗಮನಕ್ಕೆ ತಂದಿದ್ದರು. ಅದಕ್ಕೆ ಅಗತ್ಯವಿರುವ ದಾಖಲೆಗಳನ್ನು ಹೊಂದಿಸಿ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ದಿನ ಅದು ಕಾರ್ಯರೂಪಕ್ಕೆ ಬರುತ್ತಿದೆ. ಇದು ದೇಶದ ಹೆಮ್ಮೆ ಹಾಗೂ ಗೆಲುವಿನ ಪ್ರತೀಕವಾಗಿದೆ. ಯುವಜನರು ಈ ಬಗ್ಗೆ ಅರಿಯಲು ಅವಶ್ಯವಾಗಿದೆ. ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆ ಕಾರ್ಯಕ್ರಮ ಪಕ್ಷಾತೀತವಾಗಿರಲಿ ಎಂಬ ಚಿಂತನೆಯಿಂದ ಇದರ ಮೆರವಣಿಗೆ ಉದ್ಘಾಟನೆಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಆಹ್ವಾನಿಸಿದ್ದು, ಅವರು ಬರಲು ಸಮ್ಮತಿ ನೀಡಿದ್ದಾರೆ. ಆ. 15ರಂದು ಬೆಳಗ್ಗೆ 7.45ಕ್ಕೆ ನಗರದ ಎಪಿಎಂಸಿ ಗಣೇಶ ದೇವಸ್ಥಾನ ಬಳಿ ಟ್ಯಾಂಕರ್‌ಗೆ ಸ್ಪೀಕರ್ ಯು.ಟಿ. ಖಾದರ್ ಪೂಜೆ ಸಲ್ಲಿಸಿ, ನಂತರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದರು.

ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆಗೆ ನನ್ನ ಅನುದಾನದಲ್ಲಿ ₹15 ಲಕ್ಷ ನೀಡಿದ್ದು, ಅದನ್ನು ಇಲ್ಲಿಗೆ ತರಿಸಲು ತಗುಲುವ ಸಾರಿಗೆ ಹಣವನ್ನು ನಗರಸಭೆಯವರು ನೀಡಿದ್ದಾರೆ. ಕಾರ್ಯಕ್ರಮಕ್ಕೆ ಸ್ಥಳೀಯ ವಿಧಾನಸಭಾ ಕ್ಷೇತ್ರದ ಎಲ್ಲ ಮಾಜಿ ಶಾಸಕರಿಗೆ ಹಾಗೂ ಎಲ್ಲ ರಾಜಕೀಯ ಪಕ್ಷಗಳಿಗೂ ಆಹ್ವಾನ ನೀಡಿರುವೆ. ಮುಂದಿನ ದಿನಗಳಲ್ಲಿ ಯುದ್ಧದಲ್ಲಿ ಬಳಸಿದ ಮಿಗ್- 29 ಅಥವಾ ಜಾಗ್ವಾರ ಯುದ್ಧ ವಿಮಾನ ತರಿಸುವ ಚಿಂತನೆಯಿದೆ ಎಂದರು.

ತಪ್ಪುಗ್ರಹಿಕೆಗೆ ವಿಷಾದ

ನಗರದ ತಹಸೀಲ್ದಾರ್‌ ಕಚೇರಿ ಮುಂಭಾಗದ ಜಾಗದ ಬಳಿ ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆ ವಿಷಯವಾಗಿ ಬುಧವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ ಎಂದು ಸದನದಲ್ಲಿ ನಾನು ಹೇಳಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಸದನದಲ್ಲಿದ್ದಾಗ ಇಲ್ಲಿನ ತಹಸೀಲ್ದಾರ್‌ ಹಾಗೂ ನಗರಸಭೆ ಆಯುಕ್ತರು ಫೋನ್ ಮಾಡಿ ಯುದ್ಧ ಟ್ಯಾಂಕರ್ ಮೇಲೆ ನನ್ನ ಭಾವಚಿತ್ರ ಹಾಕಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿಸಿದರು. ಆದರೆ ನಾನು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಸದನದಲ್ಲಿ ರಾಷ್ಟ್ರದ ಹೆಮ್ಮೆಯ ಪ್ರತೀಕವಾಗುತ್ತಿರುವ ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ ಎಂದು ಪ್ರಸ್ತಾಪಿಸಿದೆ. ಇದು ತಪ್ಪು ಗ್ರಹಿಕೆಯಿಂದ ಆಗಿದೆ ಎಂದು ಸ್ಪಷ್ಟಪಡಿಸಿದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ