ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಸಂವಿಧಾನಬದ್ಧವಾದ ಘನತೆಯ ಸಭಾಧ್ಯಕ್ಷ ಸ್ಥಾನ ಅತ್ಯಂತ ಶ್ರೇಷ್ಠವಾಗಿದೆ. ಸ್ಪೀಕರ್ ಆದವರು ಹೆಚ್ಚು ಮಾತನಾಡದೇ ಪ್ರತಿಪಕ್ಷದ ಸ್ನೇಹಿತರಂತೆ ಕಾರ್ಯನಿರ್ವಹಿಸಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಕರಾವಳಿಯಿಂದ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಶನಿವಾರ ಸಂಜೆ ಆಗುಂಬೆ ಸಮೀಪದ ಹಸಿರುಮನೆ ಗ್ರಾಮದ ತಾಲೂಕು ಎಪಿಎಂಸಿ ಮಾಜಿ ಅಧ್ಯಕ್ಷ ಮಹಾಬಲೇಶ್ ಮನೆ ಆವರಣದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಂವಿಧಾನವೇ ನಮ್ಮ ಪಕ್ಷ ಮತ್ತು ಧರ್ಮವಾಗಿದ್ದು, ಅದಕ್ಕೆ ನಿಷ್ಠರಾಗಿ ಶಿಷ್ಠಾಚಾರಕ್ಕೆ ಅಪಚಾರವಾಗದಂತೆ ಕಾರ್ಯನಿರ್ವಹಿಸುವ ಬದ್ಧತೆ ನಮ್ಮ ಮೇಲಿದೆ. ಆಡಳಿತವನ್ನು ಎಚ್ಚರಿಸುವ ಸಲುವಾಗಿ ವಿರೋಧ ಪಕ್ಷದವರಿಗೆ ಹೆಚ್ಚಿನ ಅವಕಾಶವನ್ನೂ ಕಲ್ಪಿಸಬೇಕಾಗುತ್ತದೆ ಎಂದರು. ಕಾಡು ಪ್ರಾಣಿಗಳ ಹಾವಳಿ: ಇದೇ ವೇಳೆ ರೈತರು ನೀಡಿದ ಮನವಿಯನ್ನು ಸ್ವೀಕರಿಸಿದ ಖಾದರ್ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಾಕೃತಿಕವಾಗಿ ಎದುರಾಗುವ ಸಮಸ್ಯೆಗಳಿಗೆ ರೈತರು ಎಂದಿಗೂ ಧೈರ್ಯಗುಂದಬಾರದು. ಈ ಭಾಗದ ಎಲೆಚುಕ್ಕಿ ಗಂಭೀರವಾಗಿದೆ. ಸರ್ಕಾರ ರೈತರ ನೆರವಿಗೆ ಬರುವ ಅಗತ್ಯವಿದೆ. ಈ ಭಾಗದ ಕಾಡುಪ್ರಾಣಿಗಳ ಹಾವಳಿ, ಇತರೆ ಸಮಸ್ಯೆಗಳ ಕುರಿತಂತೆ ಸಂಬಂಧಿಸಿದ ಸಚಿವರ ಗಮನಕ್ಕೂ ತರವುದಾಗಿ ಭರವಸೆ ನೀಡಿದರು. ಮಂತ್ರಿ ಆಗಬಹುದು, ಆದರೆ ಮಹಾನ್ ವ್ಯಕ್ತಿಗಳು ಅಲಂಕರಿಸಿದ ಸಭಾಧ್ಯಕ್ಷ ಸ್ಥಾನದ ಘನತೆ ಬೇರೆಯೇ ಆಗಿದೆ. ಸಭಾ ನಡವಳಿಕೆಗೆ ವಿರುದ್ಧವಾದ ಬೆಳವಣಿಗೆಯನ್ನು ಸಹಿಸದೇ ನಿಷ್ಠುರವಾಗಿ ನಡೆದುಕೊಂಡಿದ್ದೇನೆ. ಆಡಳಿತ ಮತ್ತು ಪ್ರತಿಪಕ್ಷಗಳು ಜಗಳವಾಡಿಕೊಂಡು ಸ್ಪೀಕರ್ರೇ ಸರಿ ಇಲ್ಲ ಎಂದು ನಮ್ಮ ಮೇಲೇ ಬೀಳುವ ಸಂಧರ್ಭವೂ ಇದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಮುಖಂಡರಾದ ಬಾಳೇಹಳ್ಳಿ ಪ್ರಭಾಕರ್, ಡಿ.ಎಸ್. ವಿಶ್ವನಾಥ ಶೆಟ್ಟಿ ಮುಂತಾದವರು ಇದ್ದರು. - - - -22ಟಿಟಿಎಚ್01: ಆಗುಂಬೆ ಸಮೀಪದ ಹಸಿರುಮನೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗೌರವಿಸಿದರು.