ಮಾರುತಿ ಶಿಡ್ಲಾಪುರ
ಕನ್ನಡಪ್ರಭ ವಾರ್ತೆ ಹಾನಗಲ್ಲಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾದ ನವನಗರದಲ್ಲಿನ ಉದ್ಯಾನಕ್ಕೆ ಸಾರ್ವಜನಿಕರೇ ಕಾಯಕಲ್ಪ ಕಲ್ಪಿಸಿದ್ದು, ಬೆಳೆದು ನಿಂತಿದ್ದ ಕಸವನ್ನು ಅಲ್ಲಿನ ಸ್ವಸಹಾಯ ಸಂಘಗಳ ಸದಸ್ಯರು ಗಮನಿಸಿ ಸಾರ್ವಜನಿಕರ ಸಹಯೋಗದಲ್ಲಿ ಸ್ವಚ್ಛಗೊಳಿಸಿದ್ದಾರೆ.
ನಗರದಲ್ಲಿ ಐದಾರು ಉದ್ಯಾನಗಳಿವೆ ಎಂದು ದಾಖಲೆಯಲ್ಲಿದೆ. ಆದರೆ ವಿನಾಯಕ ನಗರದ ಬಳಿ ಇರುವ ಒಂದು ಉದ್ಯಾನ ಒಂದಷ್ಟು ಮಟ್ಟಿಗೆ ಉದ್ಯಾನದ ರೂಪದಲ್ಲಿದೆ. ಆದರೆ ಉಳಿದೆಲ್ಲವೂ ತಮ್ಮ ಸ್ವರೂಪವನ್ನೇ ಉಳಿಸಿಕೊಂಡಿಲ್ಲ. ಪುರಸಭೆ ಸಂಪೂರ್ಣವಾಗಿ ಪಟ್ಟಣದ ಉದ್ಯಾನಗಳನ್ನು ನಿರ್ಲಕ್ಷಿಸಿದ್ದು ಮೇಲ್ನೋಟಕ್ಕೇ ಎದ್ದು ಕಾಣುತ್ತದೆ. ಇದಕ್ಕೆ ಅನುದಾನದ ಕೊರತೆಯೋ ಅಥವಾ ಅಧಿಕಾರಿಗಳು ಗಮನ ಹರಿಸದಿರುವುದೋ ತಿಳಿಯದಾಗಿದೆ. ಪುರಸಭೆ ಆವರಣದಲ್ಲಿನ ಉದ್ಯಾನವೇ ಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ದುರಂತದ ಸಂಗತಿಯಾಗಿದೆ.ನವನಗರದ ದೊಡ್ಡ ಉದ್ಯಾನ ಹುಲ್ಲು ಕಸ, ಮುಳ್ಳುಗಳು ಬೆಳೆದು ಕಾಡಿನಂತಾಗಿತ್ತು. ಇದನ್ನು ಗಮನಿಸಿದ ಸ್ಥಳೀಯ ಸಾರ್ವಜನಿಕರು ಸ್ವಸಹಾಯ ಸಂಘಗಳ ಸಹಯೋಗದಲ್ಲಿ ಸ್ವಚ್ಛತೆ ಕೈಗೊಂಡಿದ್ದಾರೆ. ನವನಗರದ ಮಹಿಳಾ ಸಂಘಟನೆಯ ಸದಸ್ಯರು ಸ್ವಚ್ಛತಾ ಕಾರ್ಯಕ್ಕೆ ನೆರವು ನೀಡಿದ್ದಾರೆ. ಆದರೆ ಅಲ್ಲಿ ಹಿಂದೆ ಉದ್ಯಾನಕ್ಕಾಗಿ ನೆಟ್ಟಿರುವ ಗಿಡಗಳಿಲ್ಲ. ಅಲ್ಲಿ ಸಿಕ್ಕಿರುವುದು ಕಸ ಮಾತ್ರ. ಉದ್ಯಾನ ಇದೆ ಎಂಬ ಯಾವ ಕುರುಹು ಇಲ್ಲಿ ಕಾಣಸಿಗುವುದಿಲ್ಲ. ಉದ್ಯಾನಕ್ಕೆ ಸುತ್ತಲೂ ತಂತಿ ಬೇಲಿ ಇದೆ. ಅದೂ ಕೂಡ ಅಲ್ಲಲ್ಲಿ ಕಿತ್ತು ಹೋಗಿದೆ.
ಅಂದಾಜು ೩೦ ಗುಂಟೆಯಷ್ಟಿರುವ ಈ ಉದ್ಯಾನ ನವನಗರದ ಮಕ್ಕಳ ಆಟಕ್ಕೆ ಮತ್ತೆ ಸಿದ್ಧವಾಗುವುದೇ? ಹಿರಿಯರಿಗೆ ವಿಶ್ರಾಂತಿ ಮತ್ತು ವಾಕಿಂಗ್ ತಾಣವಾಗಬಹುದೇ ಎಂಬ ಪ್ರಶ್ನೆಗಳು ಮಾತ್ರ ಹಾಗೇ ಉಳಿದಿವೆ. ಇದು ಉದ್ಯಾನವಾಗಿಯೇ ಉಳಿಯಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.ಹಾನಗಲ್ಲ ತಹಸೀಲ್ದಾರ್ ರವಿಕುಮಾರ ಕೊರವರ ಹಾಗೂ ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ ಈ ಸಂದರ್ಭದಲ್ಲಿದ್ದು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಉದ್ಯಾನ ಸ್ವಚ್ಛಗೊಳಿಸುವ ಕಾರ್ಯ ಮಾದರಿ ಎಂದಿದ್ದಾರೆ. ಪುರಸಭೆ ಸದಸ್ಯರಾದ ಪ್ರಸಾದ ತಳವಾರ, ಎಂ.ಎಂ. ಬಡಗಿ, ಖುರ್ಷಿದ ಅಹಮ್ಮದ್ ಹುಲ್ಲತ್ತಿ, ಪರಶುರಾಮ ಖಂಡೂನವರ, ಸಾವಿತ್ರಿ ಕೊಲ್ಲಾಪುರ ಸಹ ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದಾರೆ. ನಮ್ಮ ಊರು ನಮ್ಮ ಆರೋಗ್ಯ ಎಂಬ ಅರಿವು, ಸ್ವಚ್ಛತೆಗಾಗಿ ನಮ್ಮ ಕಾಳಜಿ ಎಂಬ ಜಾಗೃತಿಯ ಕಾರಣದಿಂದ ಈ ಉದ್ಯಾನ ಕಸಮುಕ್ತವಾಗಿರುವುದು ಗಮನಾರ್ಹ ಸಂಗತಿ.
ಈಗಲಾದರೂ ಪುರಸಭೆ ಎಚ್ಚೆತ್ತುಕೊಂಡು ಉದ್ಯಾನಗಳ ಸೂಕ್ತ ನಿರ್ವಹಣೆಗೆ ಮುಂದಾಗಲಿದೆಯೇ ಎಂದು ಕಾದು ನೋಡಬೇಕಾಗಿದೆ.ಸಾರ್ವಜನಿಕರ ಸಹಭಾಗಿತ್ವದಲ್ಲಿ ನವನಗರದ ಉದ್ಯಾನ ಸ್ವಚ್ಛಗೊಳಿಸಿರುವುದು ಮಾದರಿ ಕೆಲಸವಾಗಿದೆ. ಸರ್ಕಾರದ ಇಲಾಖೆಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಪಟ್ಟಣದ ಅಭಿವೃದ್ಧಿಗೆ ಮುಂದಾಗಬೇಕು. ಎಲ್ಲದಕ್ಕೂ ಮುಖ್ಯವಾಗಿ ನಗರವನ್ನು ಶುಚಿಯಾಗಿಡುವ ಮೂಲಕ ನಮ್ಮ ಆರೋಗ್ಯಕ್ಕೂ ಆದ್ಯತೆ ನೀಡಿದಂತಾಗುತ್ತದೆ ಎನ್ನುತ್ತಾರೆ ತಹಸೀಲ್ದಾರ್ ರವಿಕುಮಾರ ಕೊರವರ.
ನವನಗರದ ಉದ್ಯಾನ ಸ್ವಚ್ಛತೆಗೆ ಮುಂದಾದಾಗ ಇಲ್ಲಿನ ಮಹಿಳಾ ಸಂಘಟನೆಗಳು ಸ್ವಯಂಸ್ಫೂರ್ತಿಯಿಂದ ನಮ್ಮೊಂದಿಗೆ ಕೈ ಜೋಡಿಸಿವೆ. ಇಲ್ಲಿನ ಜನರ ಕಳಕಳಿಯ ಕಾರಣದಿಂದಾಗಿ ಇಂಥ ಸತ್ಕಾರ್ಯ ನಡೆದಿದೆ. ಸಾರ್ವಜನಿಕರ ಸಹಕಾರವಿದ್ದಲ್ಲಿ ನಗರದ ಎಲ್ಲ ಉದ್ಯಾನಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ ಎನ್ನುತ್ತಾರೆ ಪುರಸಭೆ ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ.