- ರೈತ ಹಿತರಕ್ಷಣಾ ಸಮಿತಿಯಿಂದ ಧರಣಿ ಮುಂದುವರಿಕೆ - ಶಿವಳ್ಳಿ, ಗುನ್ನಾಯಕನಹಳ್ಳಿ, ಗೊರವಾಲೆ, ಮರಡಿಪುರ ಗ್ರಾಮಸ್ಥರ ಬೆಂಬಲ ಕನ್ನಡಪ್ರಭ ವಾರ್ತೆ ಮಂಡ್ಯ ಸಂಕಷ್ಟ ಕಾಲದಲ್ಲಿ ನೀರನ್ನು ಹೇಗೆ ಹಂಚಿಕೊಳ್ಳಬೇಕು ಎಂಬ ಬಗ್ಗೆ ಕಾವೇರಿ ನ್ಯಾಯಾಧೀಕರಣ ಅಂತಿಮ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿ ಸಂಕಷ್ಟ ಸೂತ್ರ ರೂಪಿಸಿದೆ ಎಂದು ಕಾವೇರಿ ಕುಟುಂಬದ ಪ್ರೊ.ಕೆ.ಸಿ.ಬಸವರಾಜ್ ತಿಳಿಸಿದರು. ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಿರಂತರ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿ, ಕಾವೇರಿ ವಿಚಾರದಲ್ಲಿ ಸಂಕಷ್ಟ ಸೂತ್ರ ಇಲ್ಲ ಎಂಬುದು ತಪ್ಪು ತಿಳಿವಳಿಕೆ. ಆಳುವ ಸರ್ಕಾರಗಳು ಈ ವಿಚಾರವನ್ನು ಮರೆಮಾಚುತ್ತಾ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತಿವೆ ಎಂದರು. ಕಾವೇರಿ ನ್ಯಾಯಾಧೀಕರಣದ ತೀರ್ಪಿನ 27ನೇ ಅಧ್ಯಾಯದಲ್ಲಿ ಸಂಕಷ್ಟ ಸೂತ್ರದ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಅದೇ ರೀತಿ 28ನೇ ಅಧ್ಯಾಯದಲ್ಲಿ ಸಂಕಷ್ಟ ಸಂದರ್ಭದಲ್ಲಿ ನೀರು ಹಂಚಿಕೆ ಪರಿಹಾರದ ಬಗ್ಗೆಯೂ ಸಹ ತಿಳಿಸಿದೆ. ರಾಜ್ಯದ ಕಾವೇರಿ ಕೊಳ್ಳ ಪ್ರದೇಶದಲ್ಲಿ ಪ್ರಸ್ತುತ ಮಳೆ ಕೊರತೆಯಿಂದ ಶೇ.55 ರಷ್ಟು ನೀರಿನ ಕೊರತೆ ಇದೆ ಎಂದು ಅಂಕಿ-ಅಂಶ ತಿಳಿಸಿದ್ದು, ಕೇರಳ ರಾಜ್ಯ ಹೊರತು ಪಡಿಸಿ ಕರ್ನಾಟಕ, ತಮಿಳುನಾಡು, ಪುದುಚೇರಿ ರಾಜ್ಯವು ನೀರಿನ ಕುಂಠಿತ ಪ್ರಮಾಣ ಹಂಚಿಕೊಳ್ಳಬೇಕು, ಹಾಗೆ ನೋಡಿದರೆ ತಮಿಳುನಾಡಿಗೆ ಶೇ.27.50 ಕಡಿಮೆ ನೀರು ಹರಿಸಬೇಕು. ಆದರೆ, ಸರ್ಕಾರ ಇದರ ಅರಿವು ಇಲ್ಲದಂತೆ ನಿರಂತರವಾಗಿ ನೀರು ಹರಿಸುತ್ತಿದೆ ಎಂದರು. ನ್ಯಾಯಾಧೀಕರಣ ತೀರ್ಪಿನಲ್ಲಿರುವ ಸಂಕಷ್ಟದ ಸೂತ್ರ ಅಂಶವನ್ನು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಬೇಕಿತ್ತು, ಆದರೆ, ಸರ್ಕಾರ ಇದರಲ್ಲಿ ವಿಫಲವಾಗಿದೆ, ತಮಿಳುನಾಡಿಗೆ ಪ್ರತಿವರ್ಷ 172.25 ಟಿಎಂಸಿ ನೀರು ಹರಿಸಬೇಕು. ಈ ವರ್ಷ ಮಳೆ ಕೊರತೆ ಹಿನ್ನೆಲೆಯಲ್ಲಿ ಸಂಕಷ್ಟ ಕಾಲದಲ್ಲಿ ನೀರಿನ ಕುಂಠಿತ ಪ್ರಮಾಣ ಕಳೆಯಬೇಕಾಗಿತ್ತು ಆದರೆ, ಸರ್ಕಾರ ರೈತರು ಹಾಗೂ ಜನಸಾಮಾನ್ಯರ ಹಿತವನ್ನು ಕಡೆಗಣಿಸಿ ಹೆಚ್ಚಿನ ಪ್ರಮಾಣದ ನೀರನ್ನು ಹರಿಸುತ್ತಿದೆ. ಇದರಿಂದ ರಾಜ್ಯದಲ್ಲಿ ಸಂಕಷ್ಟ ಹೆಚ್ಚಿದೆ ಎಂದರು. ಈಗಲೂ ಸಹ ಕಾಲ ಮಿಂಚಿಲ್ಲ. ನ್ಯಾಯಾಧೀಕರಣ ಅಂತಿಮ ತೀರ್ಪಿನಲ್ಲಿರುವ ಸಂಕಷ್ಟ ಸೂತ್ರ ಪ್ರಸ್ತಾಪ ಮಾಡಿ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಗೆ ಮನವರಿಕೆ ಮಾಡಿಕೊಡಬೇಕು ಎಂದರು. ಶಿವಳ್ಳಿ, ನಗರಕೆರೆ ವ್ಯಾಪ್ತಿಯ ಗ್ರಾಮಸ್ಥರ ಬೆಂಬಲ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ನಿರಂತರ ಧರಣಿ ಮುಂದುವರೆದಿದ್ದು, ಶಿವಳ್ಳಿ ಹಾಗೂ ನಗರಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ಕಾವೇರಿ ಹೋರಾಟ ಬೆಂಬಲಿಸಿದರು. ನಗರದ ಸರ್ ಎಂ.ವಿ.ಪ್ರತಿಮೆ ಎದುರು ನಿರಂತರ ಧರಣಿಯಲ್ಲಿ 48ನೇ ದಿನದ ಹೋರಾಟವನ್ನು ಮುಂದುವರಿಸಿ, ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ ರೈತರು, ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರನ್ನು ಕಡಿತ ಮಾಡಬೇಕು, ಸಂಕಷ್ಟದ ಕಾಲದಲ್ಲಿ ಕರ್ನಾಟಕದ ಹಿತ ಕಾಪಾಡಬೇಕು. ಕೇಂದ್ರ ಸರ್ಕಾರ ಮಧ್ಯಪ್ರದೇಶ ಮಾಡಿ ಸಂಕಷ್ಟ ಸೂತ್ರ ರಚಿಸಬೇಕು ಎಂದು ಒತ್ತಾಯಿಸಿದರು. ಶಿವಳ್ಳಿ, ಗುನ್ನನಾಯಕನಹಳ್ಳಿ, ಗೊರವಾಲೆ, ಮರಡಿಪುರ ಗ್ರಾಮದ ರೈತರು ಭಾಗಿಯಾದರು. ಶಿವಲಿಂಗಯ್ಯ, ನಾಗರಾಜ್ನಾ, ಗಣ್ಣ, ಶಿವಲಿಂಗಪ್ಪ, ಜಯರಾಮು ನೇತೃತ್ವ ವಹಿಸಿದ್ದರು. ವಿವಿಧ ಗ್ರಾಮಗಳಿಂದ ಬೆಂಬಲ: ಮದ್ದೂರು ತಾಲೂಕು ನಗರಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಲಿಗೆರೆಪುರ, ಉಪ್ಪಾರ ದೊಡ್ಡಿ, ಸೋಂಪುರ, ವೈದ್ಯನಾಥಪುರ, ಮಾಲಗಾರನಹಳ್ಳಿ ರೈತರು ನಿರಂತರ ಧರಣಿ ಬೆಂಬಲಿಸಿದರು. ಮುಖಂಡರಾದ ದೇವೇಗೌಡ, ಚೆನ್ನೇಗೌಡ, ಸುರೇಶ್, ಪ್ರಸನ್ನ, ಪುಟ್ಟಯ್ಯ, ಅಭಿ, ಸೋಮು, ಕಿರಣ್ ಕುಮಾರ್, ನೇತೃತ್ವ ವಹಿಸಿದ್ದರು. ಕಾವೇರಿ ಕುಟುಂಬದ ಮುಖ್ಯಸ್ಥ ಪ್ರೊ. ಕೆ.ಸಿ.ಬಸವರಾಜ್, ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಸುನಂದ ಜಯರಾಂ, ಕೆ ಬೋರಯ್ಯ, ಬೇಕರಿ ರಮೇಶ್, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಕೃಷ್ಣಪ್ರಕಾಶ್, ಕನ್ನಡಸೇನೆ ಮಂಜುನಾಥ್, ಮಹಾಂತಪ್ಪ, ಕೆ.ಸಿ.ಸುಧೀರ್ ಕುಮಾರ್, ಫಯಾಜ್ ನೇತೃತ್ವ ವಹಿಸಿದ್ದರು.