ಕನ್ನಡಪ್ರಭ ವಾರ್ತೆ ಮುದಗಲ್
ಪಟ್ಟಣದಲ್ಲಿ ಮೂರು ಮತಗಟ್ಟೆಗಳು ಹೆಚ್ಚುವರಿಯಾಗಿ ಒಟ್ಟು 22 ಮತಗಟ್ಟೆಗಳಲ್ಲಿ ಮತದಾನ ಕಾರ್ಯವು ಮೇ 7ರಂದು ನಡೆಯಲಿದೆ. ಎಲ್ಲಾ ಮತಗಟ್ಟೆಗಳಿಗೆ ಮೂಲಭೂತ ಸೌಲಭ್ಯಗಳ ಜೊತೆಗೆ ವಿಶೇಷ ಚೇತನ ಮತದಾರರಿಗೂ ಮತದಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮುದಗಲ್ ಪಟ್ಟಣದ ಲೋಕಸಭಾ ಚುನಾವಣೆಯ ಸೆಕ್ಟರ್ ಅಧಿಕಾರಿ ಉಮೇಶ ಕುಲಕರ್ಣಿ ತಿಳಿಸಿದರು.ಪಟ್ಟಣದ ಮತಗಟ್ಟೆಗಳನ್ನು ಪರಿಶೀಲಿಸುವಾಗ ಪತ್ರಕರ್ತರು ಮಾತನಾಡಿಸಿದ ಸಂದರ್ಭದಲ್ಲಿ ಮಾಹಿತಿ ನೀಡಿದ ಅವರು, ಪಟ್ಟಣದಲ್ಲಿ ಎರಡು ಸೆಕ್ಟರ್‌ಗಳನ್ನು ರಚಿಸಲಾಗಿದೆ. ಒಂದು ಸೆಕ್ಟರ್‌ಗೆ 11 ಮತಗಟ್ಟೆಗಳನ್ನು ರಚಿಸಲಾಗಿದೆ. ಇಬ್ಬರು ಅಧಿಕಾರಿಗಳನ್ನು ನೇಮಿಸಿ ಉಸ್ತುವಾರಿ ವಹಿಸಲಾಗಿದೆ. ಎಲ್ಲ ಮತಗಟ್ಟೆಗಳ ಸಂಪೂರ್ಣ ತಯಾರಿಯ ಉಸ್ತುವಾರಿಯನ್ನು ಮತಗಟ್ಟೆ ಬಿಎಲ್‌ಒಗಳಿಗೆ ನೀಡಲಾಗಿದೆ. ಮತಗಟ್ಟೆಗಳಲ್ಲಿ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ನೀಡಲು ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿದೆ ಎಂದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆಗಳನ್ನು ನಿರ್ಮಿಸಲಾಗುವುದು. ಸಖಿ ಮತದಾನ ಕೇಂದ್ರ ಮತ್ತು ಯುವ ಮತದಾರರ ಕೇಂದ್ರಗಳಿದೆ ವಿಶೇಷ ಅಲಂಕಾರಿಕವಾಗಿ ನಿರ್ಮಿಸಲಾಗುತ್ತಿದೆ. ಆಯಾ ಮತಗಟ್ಟೆ ಬಿಎಲ್‌ಒಗಳಿಗೆ ಸೂಚಿಸಲಾಗಿದ್ದು, ಮತದಾನ ಕೇಂದ್ರಗಳನ್ನು ಸಂಪೂರ್ಣವಾಗಿ ನಿರ್ಮಿಸಲಾಗಿದೆ. ಪುರಸಭೆಯಲ್ಲಿ ಸಖಿ ಮತದಾನ ಕೇಂದ್ರ, ಕಿಲ್ಲಾದ ಉರ್ದು ಶಾಲೆಯಲ್ಲಿ ಯುವ ಮತದಾರರ ಕೇಂದ್ರ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.ಪಿಂಕ್ ಮತದಾನ ಕೇಂದ್ರವನ್ನು ಪುರಸಭೆಯಲ್ಲಿ ನಿರ್ಮಿಸಲಾಗಿದ್ದು, ಮತದಾನ ಕೊಠಡಿ ವೀಕ್ಷಿಸಲು ಆಗಮಿಸಿದ್ದ ಸೆಕ್ಟರ್ ಅಧಿಕಾರಿ ಉಮೇಶ ಕುಲಕರ್ಣಿಯವರು ಕೊಠಡಿ ತೆರೆಸಲು ಅರ್ಧ ಘಂಟೆ ಕಾಯಬೇಕಾದ ಪ್ರಸಂಗ ಕಂಡು ಬಂದಿತು. ಈ ಸಂದರ್ಭದಲ್ಲಿ ಕೊಠಡಿಯ ಕೀ ಸಿಬ್ಬಂದಿಗೆ, ಬಿಎಲ್‌ಒಗೆ ಸಿಗದೇ ಕಾಯುತ್ತಾ ನಿಲ್ಲಬೇಕಾಯಿತು. ಕೊನೆಗೆ ಪುರಸಭೆ ಸಿಬ್ಬಂದಿ ಕೀಲಿ ಕೈ ತಂದ ಮೇಲೆ ಕೊಠಡಿ ತೆರೆದರೆ, ಯಾವದೇ ರೀತಿಯ ವ್ಯವಸ್ಥೆ ಇರದೇ ಇರುವುದರಿಂದ ಬಿಎಲ್‌ಒ ಸೂಚಿಸಿ ಕೊಠಡಿ ತಯಾರಿಸಿ ಅದರ ಕೀಯನ್ನು ತಮ್ಮ ಹತ್ತಿರವೇ ಇಟ್ಟುಕೊಳ್ಳತಕ್ಕದ್ದು ಎಂದು ತಾಕೀತು ಮಾಡಿದ ಪ್ರಸಂಗ ಕಂಡು ಬಂದಿತು.