ಕೊಪ್ಪಳ: ಜಿಲ್ಲೆಯಾದ್ಯಂತ ಆಯೋಜಿಸಿರುವ ವಿಶೇಷ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಬುಧವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಸ್ವತಃ ರಕ್ತದಾನ ಮಾಡುವ ಮೂಲಕ ಅಧಿಕಾರಿಗಳು, ಸಿಬ್ಬಂದಿ ಹಾಗೂ ಯುವ ಸಮುದಾಯಕ್ಕೆ ಮಾದರಿಯಾದರು.
ಅಧಿಕಾರಿಗಳಿಂದಲೂ ರಕ್ತದಾನ: ಜಿಲ್ಲಾಧಿಕಾರಿ ಮಾದರಿ ಅನುಸರಿಸಿದ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಜಿಲ್ಲಾಡಳಿತ ಭವನದಲ್ಲಿ ರಕ್ತದಾನ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಸವಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಕೊಪ್ಪಳ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿಶೇಷ ರಕ್ತದಾನ ಶಿಬಿರ ಆಯೋಜಿಸಲಾಗಿದೆ.ಸಹಾಯಕ ಆಯುಕ್ತ ಮಹೇಬೂಬ್ ಜೀಲಾನಿ ಖುರೇಶಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಪ್ರಕಾಶ ವಿ., ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಎ. ಶಶಿಧರ, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ, ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ ಉಪಸ್ಥಿತರಿದ್ದರು.