ತುಳಜಾಪೂರ ಭಕ್ತರಿಗಾಗಿ ವಿಶೇಷ ಬಸ್ ಸೌಲಭ್ಯ

KannadaprabhaNewsNetwork | Published : Sep 25, 2024 12:48 AM

ಸಾರಾಂಶ

ಹುಮನಾಬಾದ್‌ ಘಟಕದಿಂದ 40 ಹಾಗೂ ಬಸವಕಲ್ಯಾಣ ತಾಲೂಕಿನ ಬಂಗ್ಲಾದಿಂದ 20 ಬಸ್ ವ್ಯವಸ್ಥೆ ಸೇರಿದಂತೆ ಜಿಲ್ಲೆಯಿಂದ ಸುಮಾರು 110 ತಡೆ ರಹಿತ ಬಸ್‌ ಸಂಚಾರ

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ದಸರಾ ಹಬ್ಬದ ನಿಮಿತ್ತ ಮಹಾರಾಷ್ಟ್ರದ ತುಳಜಾಪೂರ ಭವಾನಿದೇವಿ ದರ್ಶನಕ್ಕೆ ತೆರಳುವ ಭಕ್ತರ ಸುರಕ್ಷಿತ ಪ್ರಯಾಣಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಿದ್ದು ಪ್ರಯಾಣಿಕರು ಅದರ ಲಾಭ ಪಡೆಯಬೇಕೆಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೆಕರ್‌ ತಿಳಿಸಿದ್ದಾರೆ.

ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ಬಸ್‌ ಹಾಗೂ ತುಳಜಾಭವಾನಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾರಿಗೆ ಸೇವೆಗೆ ಚಾಲನೆ ನೀಡುವ ಮೂಲಕ ಮಾಹಿತಿ ನೀಡಿ, ಈ ಭಾಗದ ಶಕ್ತಿ ಪೀಠಗಳಲ್ಲಿ ಒಂದಾದ ತುಳಜಾ ಭವಾನಿಗೆ ದಸರಾ ಹಬ್ಬದ ಪ್ರಯುಕ್ತ ಕಲ್ಯಾಣ ಕರ್ನಾಟಕ ಭಾಗ ಅಲ್ಲದೇ ತೆಲಂಗಾಣದಿಂದ ಒಂದು ತಿಂಗಳವರೆಗೆ ನಿತ್ಯ ತುಳಜಾ ಭವಾನಿ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕೆ ಹಾಗೂ ಸುಖಕರ ಪ್ರಯಾಣದ ಉದ್ದೇಶದಿಂದ ತಾಲೂಕಿನಿಂದ ಹೋಗಿ ಬರುವ ಲಕ್ಷಾಂತರ ಭಕ್ತರಿಗೆ ಸಾರಿಗೆ ಇಲಾಖೆ ಸೌಲಭ್ಯ ಕಲ್ಪಿಸಿದೆ ಎಂದರು.ಜಿಲ್ಲೆಯಿಂದ 110 ತಡೆ ರಹಿತ ಬಸ್‌ ಸೇವೆ, ₹200 ದರ ನಿಗದಿ:

ಹುಮನಾಬಾದ್‌ ಘಟಕವು ಅ. 6ರಿಂದ ನ. 7ರ ವರೆಗೆ ಒಂದು ತಿಂಗಳ ವರೆಗೆ, ಪ್ರತಿ ಪ್ರಯಾಣಿಕರಿಗೆ 200ರು. ಪ್ರಯಾಣ ದರ ನಿಗದಿ ಮಾಡುವ ಮೂಲಕ, ಹುಮನಾಬಾದ್‌ ಘಟಕದಿಂದ 40 ಹಾಗೂ ಬಸವಕಲ್ಯಾಣ ತಾಲೂಕಿನ ಬಂಗ್ಲಾದಿಂದ 20 ಬಸ್ ವ್ಯವಸ್ಥೆ ಸೇರಿದಂತೆ ಜಿಲ್ಲೆಯಿಂದ ಸುಮಾರು 110 ತಡೆ ರಹಿತ ಬಸ್‌ ಸಂಚಾರ ಸೌಲಭ್ಯ ದೊಂದಿಗೆ, ಈ ಬಾರಿ 3 ಕೋಟಿ ರು. ಆದಾಯ ಗುರಿ ಹೊಂದಲಾಗಿದೆ ಎಂದರು.

ಗುರಿ ಮೀರಿ ಸಾಧನೆ ಮಾಡುವ ಆತ್ಮವಿಶ್ವಾಸವಿದ್ದು, ಹುಮನಾಬಾದ್‌, ಚಿಟಗುಪ್ಪ, ಮನ್ನಾಏಖೇಳ್ಳಿ ಸೇರಿದಂತೆ ತಾಲೂಕಿನ ಯಾವುದೇ ಗ್ರಾಮದಿಂದ 50ಕ್ಕಿಂತ ಹೆಚ್ಚಿನ ಭಕ್ತರು ತುಳಜಾಪೂರಕ್ಕೆ ಪ್ರಯಾಣಿಸುವವರಿದ್ದಲ್ಲಿ ಅಂತಹ ಗ್ರಾಮಗಳಿಗೆ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಲಾಗುತ್ತದೆ. ಪ್ರಯಾಣಿಕರು ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಹುಮನಾಬಾದ್‌ ಚಿಟಗುಪ್ಪ ತಾಲೂಕ ಘಟಕ ವ್ಯವಸ್ಥಾಪಕ ವೈ. ಗುರುಬಸಮ್ಮ ಮಾತನಾಡಿ. ಪ್ರಯಾಣಿಕರ ಸುರಕ್ಷತೆ ಹಾಗೂ ಬಸ್‌ ಸೌಲಭ್ಯಕ್ಕಾಗಿ ಹೆಚ್ಚಿನ ಮಾಹಿತಿಗಾಗಿ ಬೀದಕ್‌ 7760992200, 7760992214, ಹುಮನಾಬಾದ್‌ 7760992215, ಬಸವಕಲ್ಯಾಣ 7760992216, ಭಾಲ್ಕಿ 7760992217, ಔರಾದ್‌ 77609922187 ಸಂಪರ್ಕಿಸಬಹುದು ಎಂದು ಹೇಳಿದರು.

ವಿಭಾಗೀಯ ಸಂಚಾರ ಅಧಿಕಾರಿ ಇಂದ್ರಸೇನ್‌ ಬಿರಾದಾರ, ನಿಲ್ದಾಣಾಧಿಕಾರಿ ರಮೇಶ, ಸಿಬ್ಬಂದಿ ಮೇಲ್ವಿಚಾರಕ ಶಿವಬಸಪ್ಪ ಪಾಟೀಲ್‌, ಲೆಕ್ಕಪತ್ರ ಮೇಲ್ವಿಚಾರಕ ವಿನೋದಕುಮಾರ, ಕಿರಿಯ ಸಹಾಯಕ ವಿಜಯಕುಮಾರ, ಮಾಜಿ ಬಸ್ ನಿಲ್ದಾಣ ನಿಯಂತ್ರಣಾಧಿಕಾರಿ ಎಂಎ ಖಾಲಿದ್‌, ರಾಜಕುಮಾರ, ತಾಂತ್ರಿಕ ಸಿಬ್ಬಂದಿಗಳಾದ ರಾಜಶೇಖರ, ನಾಗರೆಡ್ಡಿ, ಚಾಲಕರಾದ ನಜೀರ್‌, ಮಡಿವಾಳಯ್ಯ ಸ್ವಾಮಿ, ಶರಣಪ್ಪ ಸೇರಿದಂತೆ ಅನೇಕರಿದ್ದರು.

Share this article