ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಸಹವಿದ್ಯುತ್ ಘಟಕಕ್ಕೆ ಸಹಕಾರ ವಿಭಾಗದ 80ರ ಒಳಗಿನ ಬಾರ್ ಪ್ರೆಶರ್ ವಿಭಾಗದಲ್ಲಿನ ಸುಸ್ಥಿರ ಕಾರ್ಯನಿರ್ವಹಣೆಯ ವಿಶೇಷ ವರ್ಗ ಪ್ರಶಸ್ತಿಯನ್ನು ಪುಣೆಯಲ್ಲಿ ಜರುಗಿದ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯರು ಹಾಗೂ ಕೇಂದ್ರ ಮಾಜಿ ಕೃಷಿ ಸಚಿವ ಶರದ ಪವಾರ, ಮಹಾರಾಷ್ಟ್ರ ಸಹಕಾರ ಸಚಿವ ಬಾಬಾಸಾಹೇಬ ಪಾಟೀಲ, ರಾ.ಸ.ಸ.ಕಾ.ನಿ, ಹೊಸದೆಹಲಿಯ ಅಧ್ಯಕ್ಷರು ಹರ್ಷವರ್ಧನ ಪಾಟೀಲ ಹಾಗೂ ಪುಣೆ ಕೋಜನರೇಶನ್ ಅಸೋಸಿಯೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ಜಯಪ್ರಕಾಶ ಸಾಳುಂಕೆ ದಾಂಡೆಗಾಂವಕರ ಇವರುಗಳು ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಪುಣೆ ಕೋ ಜನರೇಶನ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಶಸ್ತಿ ಪ್ರದಾನ ಮಾಡಿದರು.ಸಕ್ಕರೆ ಉದ್ಯಮದಲ್ಲಿನ ಸಹ-ವಿದ್ಯುತ್ ಉಪ ಉತ್ಪಾದನಾ ಘಟಕಗಳ ಕುರಿತು ವಿಶೇಷ ಅಧ್ಯಯನ, ತಾಂತ್ರಿಕತೆ ಅಭಿವೃದ್ಧಿ ಹಾಗೂ ವಿವಿಧ ವಿಷಯಗಳ ಮಾಹಿತಿ ಶಿಬಿರಗಳನ್ನು ಏರ್ಪಡಿಸುವ ಮೂಲಕ ಸಕ್ಕರೆ ಉದ್ಯಮಕ್ಕೆ ಅಮೂಲ್ಯವಾದ ಕೊಡುಗೆ ಮತ್ತು ಪ್ರೋತ್ಸಾಹ ನೀಡುತ್ತಿರುವ ಕೋಜನರೇಶನ್ ಅಸೋಸಿಯೇಷನ್ ಆಫ್ ಇಂಡಿಯಾ ಪುಣೆ ಇವರು ಭಾರತದಲ್ಲಿನ ಎಲ್ಲ ಸಹಕಾರಿ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳ ಪ್ರತಿ ವರ್ಷದ ಕಾರ್ಯನಿರ್ವಹಣೆಯ ಮಾನದಂಡಗಳ ಮೌಲ್ಯಮಾಪನ ಮಾಡಿ ಉತ್ತಮ ಕಾರ್ಯನಿರ್ವಹಿಸಿದ ಕಾರ್ಖಾನೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಕಾರ್ಖಾನೆಯ ಡಿ.ಎಂ.ಪ್ಲಾಂಟ್ ವ್ಯವಸ್ಥಾಪಕ ಸಾಗರ ತುಕಾರಾಮ ವಂಜಿರೆ ಅವರಿಗೆ ಅತ್ಯುತ್ತಮ ಡಿ.ಎಂ.ಪ್ಲಾಂಟ್ ವ್ಯವಸ್ಥಾಪಕ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಕಾರ್ಖಾನೆಯ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕರುಗಳಾದ ಅಜೀತ ದೇಸಾಯಿ, ಪರಸಗೌಡ ಪಾಟೀಲ, ಸಂದೀಪ ಪಾಟೀಲ, ಮಲ್ಲಪ್ಪ ಮೈಶಾಳೆ, ಚೇತನ ಪಾಟೀಲ, ಮಹಾವೀರ ಕಾತ್ರಾಳೆ, ಭೀಮಗೌಡ ಪಾಟೀಲ, ಅಣ್ಣಾಸಾಬ ಇಂಗಳೆ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್.ಬಿ.ಖಾಂಡಗಾವೆ, ಮುಖ್ಯಲೆಕ್ಕಾಧಿಕಾರಿ ಐ.ಎನ್.ಗೊಲಭಾವಿ ಮತ್ತು ಸಹ-ವಿದ್ಯುತ್ ಘಟಕದ ಪ್ರಧಾನ ವ್ಯವಸ್ಥಾಪಕ ಎನ್.ಎಂ.ಮಾಗಿ ಪ್ರಶಸ್ತಿ ಸ್ವೀಕರಿಸಿದರು.