ಕನ್ನಡಪ್ರಭವಾರ್ತೆ ಸೋಮವಾರಪೇಟೆ
ರಾಜ್ಯದಲ್ಲಿ ಮೊದಲು ಕೊಡಗಿನ ಸಿ ಮತ್ತು ಡಿ ಜಾಗದ ಸಮಸ್ಯೆಗಳ ಪರಿಹಾರಕ್ಕೆ ಅನುಪಾಲನ ವರದಿ ನೀಡಲು ಸರ್ಕಾರ ವಿಶೇಷ ಸಮಿತಿ ರಚನೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದು ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ತಿಳಿಸಿದೆ.2024 ಜನವರಿಯಿಂದಲೇ ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯು ಹಂತ ಹಂತವಾಗಿ ಹೋರಾಟ ನಡೆಸುತ್ತಾ ಸರ್ಕಾರದ ಗಮನ ಸೆಳೆಯಲು ಯಶಸ್ವಿಯಾಗಿದೆ ಎಂದು ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಹಿರಿಯ ಅನುಭವಿ ಮಾರ್ಗದರ್ಶಕರು ಮತ್ತು ನುರಿತ ಕಾನೂನು ಸಲಹೆಗಾರರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ತಹಸೀಲ್ದಾರ್, ಅರಣ್ಯ ಇಲಾಖೆ, ಕೊಡಗು ಜಿಲ್ಲಾಧಿಕಾರಿ, ಎಫ್‌ಎಸ್‌ಒ ರೇಣುಕಾಂಬ, ರಾಜ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಕ್ಷಿತ್, ಕಂದಾಯ ಇಲಾಖೆ ಆಯುಕ್ತರು ರಾಜೇಂದ್ರ ಕುಮಾರ್ ಕಟಾರಿಯ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರೊಂದಿಗೆ ಹಲವು ಬಾರಿ ಸಭೆ ನಡೆಸಿ, ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೊಡಗಿನಲ್ಲಿ ರೈತರು ಸಾಗುವಳಿ ಮಾಡಿಕೊಂಡಿರುವ ಜಮೀನಿನ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡು ಹುಡುಕುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಲಾಗಿತ್ತು ಎಂದು ಹೇಳಿದರು.ಮಡಿಕೇರಿ ಶಾಸಕರು ಮುತುವರ್ಜಿ ವಹಿಸಿ ಸದನದಲ್ಲಿ ಕೊಡಗಿನ ಜಮೀನಿನ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು. ಕರ್ನಾಟಕ ರಾಜ್ಯ ಅರ್ಜಿ ಸಮಿತಿಯ ಸದಸ್ಯರು ಆಗಿರುವ ಶಾಸಕರು ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯು ಅರ್ಜಿ ಸಮಿತಿಗೆ ನೀಡಿದ ಪತ್ರಕ್ಕೆ ಸ್ಪಂದಿಸಿ, ಕೊಡಗಿನ ವಿರಾಜಪೇಟೆ ಶಾಸಕರಾದ ಎ ಎಸ್ ಪೊನ್ನಣ್ಣ ಅವರನ್ನು ಜೊತೆಯಲ್ಲಿ ಸೇರಿಸಿಕೊಂಡು ಕಂದಾಯ ಸಚಿವರು, ಅರಣ್ಯ ಸಚಿವರು, ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೊಡಗಿನ ರೈತರು ಅನುಭವಿಸುತ್ತಿರುವ ಜಮೀನು ಸಮಸ್ಯೆಗಳ ಪರಿಹಾರಕ್ಕೆ ಮೊದಲ ಹಂತದಲ್ಲಿ ಸಮಿತಿ ರಚಿಸಿ ಅನುಪಾಲನ ವರದಿ ಪಡೆಯಲು ಮುಂದಾಗಿರುವುದು ಸ್ವಾಗತರ್ಹ ಎಂದು ಹೇಳಿದರು.ಕೊಡಗು ಜಿಲ್ಲೆಗೆ ಪ್ರಾಯೋಗಿಕವಾಗಿ ಅಧಿಕಾರೇತರ ನಿವೃತ್ತ ಐಎಎಸ್, ನಿವೃತ್ತ ಹೆಚ್ಚುವರಿ ಅಡ್ವಕೇಟ್ ಜನರಲ್, ನಿವೃತ್ತ ಡಿಸಿಎಫ್, ನಿವೃತ್ತ ತಹಸೀಲ್ದಾರ್, ಒಳಗೊಂಡಂತೆ ಸಮಿತಿಯನ್ನು ರಚಿಸಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳ ನಡುವಿನ ಸಮಸ್ಯೆಗಳು ಮತ್ತು ವಸ್ತುಸ್ಥಿತಿ ಅಧ್ಯಯನ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವ ಸಲಹಾತ್ಮಕ ಅಂಶಗಳೊಂದಿಗೆ ಅನುಪಾಲನ ವರದಿಯನ್ನು ಆರು ತಿಂಗಳೊಳಗೆ ನೀಡಲು ಸೂಚಿಸಲಾಗಿದ್ದು, ರೈತರು ತಮ್ಮ ಸಮಸ್ಯೆಗಳನ್ನು ಸಮಿತಿಗೆ ತಿಳಿಸುವ ಅವಕಾಶವಿದೆ ಎಂದು ಹೇಳಿದರು. 1977 ರಿಂದ ಸರ್ಕಾರದ ಕೆಲವು ಅವೈಜ್ಞಾನಿಕ ಮತ್ತು ಗೊಂದಲದ ಆದೇಶಗಳಿಂದ ರೈತರು ಹಲವು ಸಮಸ್ಯೆಗಳನ್ನು ಅನುಭವಿಸುವಂತಾಗಿದ್ದು, ಸರಿಪಡಿಸುವ ನಿಟ್ಟಿನಲ್ಲಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಪಾರದರ್ಶಕವಾಗಿ ಸಲಹಾತ್ಮಕ ವರದಿಯನ್ನು ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ನೀಡಬೇಕಾಗಿ ಕೇಳಿಕೊಳ್ಳುತ್ತೇವೆ ಎಂದು ಹೇಳಿದರು.ಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಆದರ್ಶ್, ಖಜಾಂಚಿ ತ್ರಿಶೂಲ್ ಕಾರ್ಯಪ್ಪ, ಪದಾಧಿಕಾರಿಗಳಾದ ಡಿ.ಎ.ಉದಯ್, ಕೆ.ಎ.ಪ್ರಕಾಶ್ ಇದ್ದರು.