ಕನ್ನಡಪ್ರಭ ವಾರ್ತೆ ಮೇಲುಕೋಟೆ
ದೇವಾಲಯದಲ್ಲಿ ವರ್ಷಕ್ಕೆರಡು ಸಲ ಮಾತ್ರ ಸ್ವಾಮಿಗೆ ಕಲ್ಯಾಣೋತ್ಸವ ಹಾಗೂ ಮಹಾಭಿಷೇಕ ನಡೆಯುವ ಸಂಪ್ರದಾಯವಿದ್ದು, ಅದರಲ್ಲೂ ವಿಶೇಷವಾಗಿ ಮೈಸೂರು ಮಹಾರಾಜ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದಂದು ಮಹಾಭಿಷೇಕ ಮತ್ತು ಕಲ್ಯಾಣೋತ್ಸವ ಎರಡೂ ಒಂದೇ ದಿನ ಮಾತ್ರ ನಡೆಯುತ್ತಾ ಬಂದಿರುವುದು ವಿಶೇಷವಾಗಿದೆ.
ಈ ಧಾರ್ಮಿಕ ವಿಶೇಷತೆ ಮತ್ತು ಮಹತ್ವದ ಮಾಹಿತಿ ಬಹುಪಾಲು ಭಕ್ತರಿಗೆ ತಿಳಿಯದ ಕಾರಣ ಬೆರಳೆಣಿಕೆಯ ಭಕ್ತರು ಶುಕ್ರವಾರದ ಕೈಂಕರ್ಯದಲ್ಲಿ ಭಾಗಿಯಾಗಿದ್ದರು. ಮೈನಡುಗಿಸುವ ಚಳಿ ಹಾಗೂ ತುಂತುರು ಮಳೆಯಿಂದ ಕೂಡಿದ ಅರುಣೋದಯದ ವೇಳೆ ದೇವಾಲಯ ತೆರೆದು ನಿತ್ಯ ಪೂಜಾ ಕೈಂಕರ್ಯಗಳು ನಡೆದ ನಂತರ ಲೋಕ ಕಲ್ಯಾಣಾರ್ಥಕ್ಕಾಗಿ ಸಂಕಲ್ಪಮಾಡಿ ಮಹಾಭಿಷೇಕಕ್ಕೆ ಚಾಲನೆ ನೀಡಲಾಯಿತು.ದ್ವಾದಶಾರಾಧನೆ, ವೇದಪಾರಾಯಣದೊಂದಿಗೆ ಹಾಲು, ಮೊಸರು, ಜೇನು, ಎಳೆನೀರು ಮುಂತಾದ ಮಂಗಳದ್ರವ್ಯಗಳಿಂದ ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ ನೆರವೇರಿಸಲಾಯಿತು. ಮಹಾಭಿಷೇಕದ ನಡುವೆ ಅರಿಷಿಣ ಅಲಂಕಾರದಲ್ಲಿ ಸ್ವಾಮಿಯ ದರ್ಶನಕ್ಕೆ ಎಲ್ಲಾ ಭಕ್ತರಿಗೂ ಅವಕಾಶ ನೀಡಲಾಯಿತು.
ಮಾಲೆ ಮರ್ಯಾದೆ ಸಮರ್ಪಣೆ:
ನಂತರ ವಿಶ್ವಕ್ಷೇನರ ತಿರುವೀದಿ ಉತ್ಸವದ ನಂತರ ಕಲ್ಯಾಣೋತ್ಸವ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ರಾತ್ರಿ ಅಮ್ಮನವರ ಸನ್ನಿಧಿಯ ಆವರಣದಲ್ಲಿ ಕಲ್ಯಾಣನಾಯಕಿ ಅಮ್ಮನವರೊಂದಿಗೆ ಸ್ವಾಮಿಗೆ ಸಮನ್ಮಾಲೆ ಲಾಜಹೋಮದೊಂದಿಗೆ ಕಲ್ಯಾಣೋತ್ಸವ ವೈಭವದಿಂದ ನೆರವೇರಿತು. ಕಲ್ಯಾಣೋತ್ಸವದಂದು ದೀಪಾಲಂಕಾರ ಇರಲಿಲ್ಲ.