ತರೀಕೆರೆ ಪಟ್ಟಣದ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಶಾಸಕ ಜಿ.ಎಚ್.ಶ್ರೀನಿವಾಸ್

KannadaprabhaNewsNetwork | Published : Jan 20, 2025 1:31 AM

ಸಾರಾಂಶ

ತರೀಕೆರೆ, ಪಟ್ಟಣದ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ ಮಂಜೂರಾಗಿದ್ದು ಶೀಘ್ರದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿ ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದ್ದಾರೆ.

- ಮಹಾತ್ಮ ಗಾಂಧಿ ರಸ್ತೆ ಡಾಂಬರೀಕರಣ ಕಾಮಗಾರಿಯ ಗುದ್ದಲಿ ಪೂಜೆ

ಕನ್ನಡಪ್ರಭ ವಾರ್ತೆ, ತರೀಕೆರೆ

ತರೀಕೆರೆ ಪಟ್ಟಣದ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ ಮಂಜೂರಾಗಿದ್ದು ಶೀಘ್ರದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿ ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದ್ದಾರೆ.

ಪುರಸಭಾ ಕಾರ್ಯಾಲಯದಿಂದ, ಪುರಸಭೆಗೆ ಎಸ್. ಎಫ್, ಸಿ, ಮುಕ್ತನಿಧಿ ಯೋಜನೆಯಡಿ 2023-24 ಮತ್ತು 2024-25 ನೇ ಸಾಲಿನಲ್ಲಿ ಮಂಜೂರಾಗಿರುವ ಅನುದಾನದಲ್ಲಿ ಅಂದಾಜು ₹28.40 ಲಕ್ಷ ಮೊತ್ತದಲ್ಲಿ ಎಂ.ಜಿ ರಸ್ತೆ ಡಾಂಬರೀಕರಣ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಪುರಸಭೆಗೆ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಏಳೂವರೆ ಕೋಟಿ ಅನುದಾನ ಮಂಜೂರಾಗಿದೆ. ಪ್ರಸ್ತುತ ಅಂದಾಜು ಪಟ್ಟಿ ತಯಾರಿಕಾ ಹಂತದಲ್ಲಿದೆ. ಶಾಸಕರ ಪ್ರದೇಶಾಭಿ ವೃದ್ಧಿಯಿಂದಲೂ ಸಹ ಪಟ್ಟಣದ ಅಭಿವೃದ್ಧಿ ಮತ್ತು ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ಕೊಡಲಾಗುವುದು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ವಸಂತ್ ಕುಮಾರ್ ಮಾತನಾಡಿ ಶಾಸಕರ ನೇತೃತ್ವದಲ್ಲಿ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ ಎಂದ ಅವರು ಸಹಕಾರ ಸಂಘದ ಚುನಾವಣೆಯಲ್ಲಿ ಜಯಶೀಲರಾದ ಶಾಸಕ ಜಿ.ಎಚ್.ಶ್ರೀನಿವಾಸ್ ಮತ್ತು ತಂಡದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮಾ ಮಾತನಾಡಿ ಪಟ್ಟಣದ ಎಂ.ಜಿ ರಸ್ತೆ ಡಾಂಬರೀಕರಣದಿಂದ ಸಾರ್ವ ಜನಿಕರ ಮತ್ತು ವಾಹನಗಳ ಓಡಾಟಕ್ಕೆ ಅನುಕೂಲವಾಗಲಿದ್ದು, ಪಟ್ಟಣದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕೌನ್ಸಿಲ್ ಬದ್ಧವಾಗಿದೆ ಎಂದು ಹೇಳಿದರು. ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ.ಎಸ್. ಪ್ರಕಾಶ್ ವರ್ಮ ಮಾತನಾಡಿ ಎಂ ಜಿ.ರಸ್ತೆ ಅಭಿವೃದ್ಧಿಪಡಿಸಲು ಈ ಹಿಂದೆಯೇ ಶಾಸಕ ಜಿ.ಎಚ್. ಶ್ರೀನಿವಾಸ ಮತ್ತು ತಮ್ಮ ಪುರಸಭೆ ಅಧ್ಯಕ್ಷ ಅವಧಿಯಲ್ಲಿ ಎಂ.ಜಿ.ರಸ್ತೆ ಅಭಿವೃದ್ಧಿಗೆ ₹1.50 ಕೋಟಿ ವಿಶೇಷ ಅನುದಾನ ತಂದಿದ್ದರು. ಈ ಬಗ್ಗೆ ಪುನರ್ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಎಂ.ಜಿ. ರಸ್ತೆ ಅಭಿವೃದ್ಧಿಪಡಿಸಲು ಶಾಸಕರ ನೇತೃತ್ವದಲ್ಲಿ ಪ್ರಯತ್ನಿಸಲಾಗುವುದು. ಶಾಸಕರು ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಶಾಸಕರು ಮತ್ತು ಪುರಸಭೆ ಕೌನ್ಸಿಲ್ ಸಹಯೋಗದೊಂದಿಗೆ ಪಟ್ಟಣದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪುರಸಭಾ ಸದಸ್ಯ ಟಿ ದಾದಾಪೀರ್, ಬಸವರಾಜ್, ದಿವ್ಯ ರವಿ ಪುರಸಭೆ ನಾಮನಿರ್ದೇಶಿತ ಸದಸ್ಯರಾದ ವೇಣು ಪ್ರಿಯಾ, ಟಿ.ಜಿ.ಮಂಜುನಾಥ್, ಸೈಯದ್ ಅಬ್ಬಾಸ್, ಕಿರಿಯ ಅಭಿಯಂತರ ವಿನಾಯಕ್ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

19ಕೆಟಿಆರ್.ಕೆ.6ಃ

ತರೀಕೆರೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಪಟ್ಟಣದ ಎಂ ಜಿ ರಸ್ತೆ ಡಾಂಬರೀಕರಣ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದರು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಪುರಸಭೆ ಸದಸ್ಯರು, ಪುರಸಭೆ ನಾಮಿನಿ ಸದಸ್ಯರು, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರು ಇದ್ದರು.

Share this article