ಮುರಳೀಧರ್ ಶಾಂತಳ್ಳಿ
ಸೋಮವಾರಪೇಟೆ ವಲಯದ ಹುದುಗೂರು ಶಾಖೆಯ ಯಡವನಾಡು ಮೀಸಲು ಅರಣ್ಯದ ಕಾಜೂರು ಗಸ್ತು ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ತೇಗದ ಮರಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅರಣ್ಯ ಇಲಾಖೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ವಿಶೇಷ ತನಿಖಾ ತಂಡ ರಚಿಸಿದ್ದು, ಐದು ದಿನಗಳಾದರೂ ಇನ್ನೂ ಕಾರ್ಯರೂಪಕ್ಕೆ ಬಾರದಿರುವುದು ಜಿಲ್ಲಾ ಅರಣ್ಯ ಇಲಾಖೆಯ ಮುಖ್ಯಸ್ಥರ ಆದೇಶಕ್ಕೇ ಕಿಮ್ಮತ್ತೇ ಇಲ್ಲದಂತಾಗಿರುವುದು ಪ್ರಕರಣದ ಸುತ್ತ ಅನುಮಾನದ ಹುತ್ತ ಸೃಷ್ಟಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭಿಕ ಹಂತದಲ್ಲಿ ಡಿಆರ್‌ಎಫ್‌ಒ ರನ್ನು ಅಮಾನತು ಮಾಡಲಾಗಿದ್ದು, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿ ಕೈವಾಡದ ಕುರಿತು ಅನುಮಾನಗಳು ಬರುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ ಒಂದು ತಿಂಗಳೊಳಗೆ ವರದಿ ನೀಡಲು ಅರಣ್ಯ ಇಲಾಖೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವರ್ಷಿಣಿ ಆದೇಶಿಸಿದ್ದಾರೆ. ಇಲಾಖೆಯೊಳಗಿನ ಒಳಬೇಗುದಿಯಿಂದ ಈವರೆಗೂ ವಿಶೇಷ ತನಿಖಾ ತಂಡಕ್ಕೆ ಪ್ರಕರಣದ ಕುರಿತಾದ ಕಡತ ಹಸ್ತಾಂತರವಾಗದೇ ಇರುವುದೂ ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ. 9.1.2026 ರಂದು ಆದೇಶ ನೀಡಿದ್ದರೂ ಅರಣ್ಯ ಸಂಚಾರಿ ದಳದ ಡಿಎಫ್‌ಒ ನೆಹರು ಅವರ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ ಈವರೆಗೂ ಪ್ರಕರಣದ ಕಡತ ಒಪ್ಪಿಸಿಲ್ಲ. ತನಿಖೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಅಗತ್ಯವಾಗಿ ಬೇಕಾಗಿರುವ ಸಾಕ್ಯಾಧಾರಗಳು ನಾಶವಾಗುವ ಸಾಧ್ಯತೆಯಿದ್ದು, ಇಲಾಖೆಯ ಅಧಿಕಾರಿಗಳ ಒಣ ಪ್ರತಿಷ್ಠೆಗೆ ಪ್ರಕರಣ ಹಳ್ಳ ಹಿಡಿಯುವ ಸಾಧ್ಯತೆಯಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ಪ್ರಕರಣದಲ್ಲಿ ಡಿಆರ್‌ಎಫ್‌ಒ ಅವರನ್ನು ಸಸ್ಪೆಂಡ್ ಮಾಡಲಾಗಿದ್ದು, ಎರಡು ಪ್ರಕರಣವನ್ನು ಪತ್ತೆ ಹಚ್ಚಲು ಮತ್ತು ಎಡವಾರೆ ಗ್ರಾಮದ ಬೆಂಗಳೂರು ಮೂಲದ ಉದ್ಯಮಿಯೋರ್ವರ ಮನೆಯೊಂದರ ನಿರ್ಮಾಣಕ್ಕೆ ಬಳಸಿದ್ದಲ್ಲದೇ, ಸಂಗ್ರಹಿಸಲಾಗಿದ್ದ ತೇಗದ ಮರಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಧಿಕಾರಿಯನ್ನೇ ಅಮಾನತುಗೊಳಿಸಿರುವುದು ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದಲ್ಲಿ ಮರಗಳ್ಳರಿಗೆ ಸಹಕಾರ ನೀಡಿ ರಕ್ಷಿಸುತ್ತಿರುವ ಇಲಾಖೆ ಒಳಗಡೆಯಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕೆಂಬುದು ನಾಗರಿಕರು ಆಗ್ರಹಿಸಿದ್ದಾರೆ.
ಈ ಕುರಿತು ವಿಶೇಷ ತನಿಖಾ ತಂಡದ ಮುಖ್ಯಸ್ಥ ಅರಣ್ಯ ಸಂಚಾರಿ ದಳದ ಡಿಎಫ್‌ಒ ನೆಹರು ನೇತೃತ್ವದಲ್ಲಿ 13 ಸಿಬ್ಬಂದಿ ತಂಡವನ್ನು ರಚಿಸಲಾಗಿದೆ. ಇದರೊಂದಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಾನಶ್ರೀ, ನಾಗರಹೊಳೆಯ ವನ್ಯಜೀವಿ ವಿಭಾಗದ ಎಸಿಎಫ್ ಅನನ್ಯಕುಮಾರ್, ವಲಯ ಅರಣ್ಯ ಅಧಿಕಾರಿ ಸಂಚಾರಿ ದಳ ಕೊಟ್ರೇಶ್, ಇಲವಾಲದ ಅರಣ್ಯ ತರಬೇತಿ ಕೇಂದ್ರದ ವಲಯ ಅರಣ್ಯ ಅಧಿಕಾರಿ ಮುನಿರಾಜು, ಬೆಂಗಳೂರಿನ ಕ್ರೈಮ್ ಸೆಲ್‌ನ ಉಪ ವಲಯ ಅರಣ್ಯ ಅಧಿಕಾರಿ ಹಾಗೂ ಮೋಜಣಿದಾರರಾದ ಅಶ್ವಿನಿ, ಮಂಜುನಾಥ್, ಅರಣ್ಯ ಸಂಚಾರಿ ದಳದ ಡಿಆರ್‌ಎಫ್‌ಒ ಗಳಾದ ಜಗದೀಶ್, ಹಾಲೇಶ್, ಶ್ರೀನಿವಾಸ್, ಮಡಿಕೇರಿ ಅರಣ್ಯ ಸಂಶೋಧನಾ ವಲಯದ ಡಿಆರ್‌ಎಫ್‌ಒ ಫಕೀರಪ್ಪ, ಉಪವಲಯ ಅರಣ್ಯ ಅಧಿಕಾರಿ ರಿಶಾ ಪಾರ್ವತಿ, ಸಮೀರ್ ಅಹಮ್ಮದ್ ಅವರನ್ನು ತನಿಖಾ ತಂಡಕ್ಕೆ ನೇಮಕ ಮಾಡಿ ಸಿಸಿಎಫ್ ಆದೇಶಿಸಿದ್ದಾರೆ.ಯಡವನಾಡು ಮೀಸಲು ಅರಣ್ಯದ ಹುದುಗೂರು ಶಾಖೆಯ ಕಾಜೂರು ಅರಣ್ಯದಲ್ಲಿ ಅಕ್ರಮವಾಗಿ ತೇಗದ ಮರ ಕಡಿದಿರುವ ಹಾಗೂ ಯಡವಾರೆಯ ಮನೆಯೊಂದರ ನಿರ್ಮಾಣಕ್ಕೆ ತೇಗದ ಮರಗಳನ್ನು ಬಳಸಿರುವ ಪ್ರಕರಣವನ್ನು ಭೇದಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. 9.1.2026 ಕ್ಕೆ ಆದೇಶ ನೀಡಿದ್ದು, ಕೂಡಲೇ ಕಾರ್ಯಪೃವೃತ್ತರಾಗಲೂ ಸೂಚನೆ ನೀಡಿದ್ದೇನೆ. ಒಂದು ತಿಂಗಳೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲು ವಿಶೇಷ ತನಿಖಾ ತಂಡಕ್ಕೆ ಆದೇಶಿಸಿದ್ದೇನೆ. ಈ ಕುರಿತು ಕೊಡಗು ಡಿಎಫ್‌ಒ ಅವರೊಂದಿಗೂ ಕೂಡ ಚರ್ಚಿಸಿದ್ದೇನೆ.
ಸೋನಾಲ್ ವರ್ಷಿಣಿ, ಜಿಲ್ಲಾ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ಜಿಲ್ಲೆತನಿಖಾ ತಂಡ ರಚಿಸಿರುವ ಕುರಿತು ಆದೇಶ ಪ್ರತಿ ತಮ್ಮ ಕೈ ಸೇರಿದ್ದರೂ. ಈವರೆಗೂ ಕಾಜೂರು ಅರಣ್ಯದಲ್ಲಿ ನಡೆಸಲಾಗಿರುವ ಮರಗಳ್ಳತನಕ್ಕೆ ಸಂಬಂಧಿಸಿದ ಫೈಲ್ ನಮಗೆ ಸಲ್ಲಿಸಿಲ್ಲ. ಹೀಗಾಗಿ ಮಂಗಳವಾರ ಈ ಪ್ರಕರಣದ ಕುರಿತು ಚರ್ಚಿಸಲು ಇಲಾಖೆಯ ಸಭೆಯನ್ನು ಕರೆಯಲಾಗಿದೆ. ಪ್ರಕರಣವನ್ನು ಒಂದು ತಿಂಗಳೊಳಗೆ ಭೇದಿಸಿ ವರದಿ ಸಲ್ಲಿಸಲು ಸಿಸಿಎಫ್ ಆದೇಶಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕಡತ ವರ್ಗಾವಣೆಯಾದ ಕೂಡಲೇ ಕಾರ್ಯಪೃವೃತ್ತನಾಗುವೆ.
-ನೆಹರು, ಜಿಲ್ಲಾ ಅರಣ್ಯ ಸಂಚಾರಿ ದಳದ ಡಿಎಫ್‌ಒ