ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಜ. 22ರಂದು ನಡೆಯಲಿರುವ ರಾಮನ ಮೂರ್ತಿ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯಿಂದ ಎಂಟು ಮಂದಿ ವಿಶೇಷ ಆಹ್ವಾನಿತರು ವಿಶೇಷ ವಿಮಾನದ ಮೂಲಕ ಅಯೋಧ್ಯೆಗೆ ಪ್ರಯಾಣಿಸಿದರು.
ಡಾ. ಪ್ರಭಾಕರ ಕೋರೆ ಮಾತನಾಡಿ, ರಾಮನ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಭಾಗವಹಿಸುತ್ತಿರುವುದು ನಮ್ಮ ಪಾಲಿಗೆ ನಿಜಕ್ಕೂ ಸಂತಸದ ವಿಚಾರ ಎಂದರು.
ಶಂಕ್ರಣ್ಣ ಮುನವಳ್ಳಿ ಮಾತನಾಡಿ, 3 ಸಾವಿರ ಆಹ್ವಾನಿತರಲ್ಲಿ ನಾವೂ ಇರುತ್ತೇವೆ ಎಂದು ಕನಸಲ್ಲಿ ಸಹ ಎಣಿಸಿರಲಿಲ್ಲ. ಭಗವಾನ್ ಶ್ರೀರಾಮ ಸಕಲರಿಗೂ ಒಳ್ಳೆಯದನ್ನು ಮಾಡಲಿ, ದೇಶ ಸುಭೀಕ್ಷದಿಂದ ಕೂಡಿರಲಿ ಎಂದರು.ಡಾ. ವಿಎಸ್‌ವಿ ಪ್ರಸಾದ ಮಾತನಾಡಿ, ಕೋಟ್ಯಂತರ ಹಿಂದೂಗಳ ಐದುನೂರು ವರ್ಷಗಳ ಕನಸು ಈಗ ನನಸಾಗುತ್ತಿದೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದೆ. ನನ್ನ ಪಾಲಿಗೆ ಪೂರ್ವಜನ್ಮದ ಪುಣ್ಯವೋ ಎನ್ನುವಂತಿದೆ. ಈ ಅವಕಾಶ ನಮಗೆ ದೊರೆತಿರುವುದು ನಿಜಕ್ಕೂ ಸೌಭಾಗ್ಯ ಎಂದು ಭಾವಿಸುವೆ. ಸರ್ವ ಜನಾಂಗದ ಜನತೆಯೂ ಕಳೆದ 15 ದಿನಗಳಿಂದ ರಾಮನ ಪ್ರತಿಷ್ಠಾಪನೆಯನ್ನು ಮನೆಯ ಕಾರ್ಯಕ್ರಮವೆಂಬಂತೆ ಆಚರಿಸುತ್ತಿದ್ದು, ಭಾರತ ವಿಶ್ವದಲ್ಲಿ ನಂ.1 ಆಗಲಿ ಎಂದು ಶ್ರೀರಾಮನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.