ವಿವಿಧ ಸಮಿತಿಗಳ ರಚನೆ । ಶಿರಸಿಯಲ್ಲಿ ಜ. 11ರಂದು ಬೃಹತ್ ಸಮಾವೇಶ
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ವಿಶೇಷ ಸಭೆ ನಗರದ ಪೂಗಭವನದಲ್ಲಿ ನಡೆಯಿತು.
ಸ್ವರ್ಣವಲ್ಲೀಯ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಶಿರಸಿ ನಗರ ಹಾಗೂ 3 ತಾಲೂಕುಗಳ ಸಮಿತಿಯ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದರು. ತನು-ಮನ-ಧನ-ಜನರ ಜೊತೆ ಬೇಡ್ತಿ ಅಘನಾಶಿನಿ ಬೃಹತ್ ಜನಸಮಾವೇಶ ಯಶಸ್ವಿಗೊಳಿಸಲು ಕರೆನೀಡಿದರು.ಮಠಾಧೀಶರು, ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗಡೆ, ಜನಪ್ರತಿನಿಧಿಗಳು, ಗಣ್ಯರು ತಜ್ಞರ ಪಾಲ್ಗೊಳ್ಳುವಿಕೆಯ ಸಮಾವೇಶದ ವ್ಯಾಪಕ ವ್ಯವಸ್ಥೆಗೆ ಶಿರಸಿ ನಗರದ ಗಣ್ಯರ ಸಂಚಲನಾ ಸಮಿತಿ ರಚಿಸಲಾಯಿತು.
ಶಿರಸಿ ಹಾಗೂ ಸುತ್ತಲಿನ ಮಹಿಳಾ ಸಂಘ-ಸಂಸ್ಥೆಗಳ ಸಭೆಯನ್ನು ನಡೆಸಿ ಮನೆ ಮನೆಗೆ ಸಂದೇಶ ತಲುಪಿಸುತ್ತೇವೆ ಎಂದು ಸಮಿತಿಯ ಮಧುಮತಿ, ಭಾರತಿ, ಗೀತಾ, ಶೈಲಜಾ ತಿಳಿಸಿದರು. ವಿವಿಧ ಜಾತಿ-ಸಮುದಾಯಗಳ ಪ್ರಮುಖರ ಸಭೆಯನ್ನು ಡಿ. 27ರಂದು ಏರ್ಪಡಿಸಲು ನಿರ್ಧರಿಸಲಾಯಿತು. ಈ ಕುರಿತು ಶ್ರೀಧರ ಹಿರೇಹದ್ದ ಹರೀಶ ಪಂಡಿತ್, ಸುಧೀರ ಭಟ್, ಅರುಣ್ ಪ್ರಭು ಮುಂತಾದವರು ಜವಾಬ್ದಾರಿ ತೆಗೆದುಕೊಂಡರು. ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ, ಎಂಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಸಹಕಾರ ಸಂಸ್ಥೆಗಳ ಬೆಂಬಲ ಪ್ರಕಟಿಸಿದರು.
ಕುಮಟಾದಲ್ಲಿ ಜ. 1ರಂದು ಅಘನಾಶಿನಿ ಜಾಗೃತಿ ಸಭೆ ನಡೆಸುವ ವಿಷಯವನ್ನು ಬಾಲಚಂದ್ರ ಸಾಯಿಮನೆ ಪ್ರಕಟಿಸಿದರು. ಅಂಕೋಲಾ ತಾಲೂಕಿನ ಕಲ್ಲೇಶ್ವರದಲ್ಲಿ ಸಭೆ ನಡೆಸುವ ಸಂಗತಿಯನ್ನು ನರಸಿಂಹ ಸಾತೊಡ್ಡಿ ತಿಳಿಸಿದರು. ಎಸಿ ಕಚೇರಿ, ಅರಣ್ಯ ಕಚೇರಿಗೆ ಸದ್ಯದಲ್ಲೆ ಬೇಡ್ತಿ ನಿಯೋಗ ಭೇಟಿ ನೀಡಲಿದೆ ಎಂದು ಎನ್.ಎಸ್. ಭಟ್ ಎಫ್ಡಿ ಮಠ ತಿಳಿಸಿದರು. ಡಾ. ಕೇಶವ ಕೊರ್ಸೆ, ಸುರೇಶ ಹಕ್ಕಿಮನೆ ತಂಡ ಸಾಮಾಜಿಕ ಮಾಧ್ಯಮದ ಮೂಲಕ ಬೇಡ್ತಿ-ಅಘನಾಶಿನಿ ಜಾಗೃತಿ ಮಾಡಲು ಜವಾಬ್ದಾರಿ ನೀಡಲಾಯಿತು. ವಿಶ್ವೇಶ್ವರ ಭಟ್, ವೆಂಕಟೇಶ ನಾಯ್ಕ, ಶ್ರೀನಿವಾಸ್ ಹೆಬ್ಬಾರ್, ವಿಶ್ವನಾಥ ಶೀಗೇಹಳ್ಳಿ, ಅನಂತಮೂರ್ತಿ ಹೆಗಡೆ, ಉಪೇಂದ್ರ ಪೈ ಮುಂತಾದವರು ಸಂಚಾಲನಾ ಸಮಿತಿಯಲ್ಲಿ ಇದ್ದಾರೆ.