ದಾವಣಗೆರೆ: ವಿಧಾನ ಪರಿಷತ್ತು ಆಗ್ನೆಯ ಶಿಕ್ಷಕರ ಕ್ಷೇತ್ರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರಗಳಿಗೆ ಜೂನ್ 3ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಮತದಾರ ಶಿಕ್ಷಕರಿಗೆ ಹಾಗೂ ಪದವೀಧರರಿಗೆ ಮತಹಕ್ಕು ಚಲಾಯಿಸಲು ವಿಶೇಷ ಸಾಂದರ್ಭಿಕ ರಜೆ ನೀಡಲಾಗಿದೆ.
ಮತದಾನ ಸಮಯದಲ್ಲಿ ಮತದಾರರು ತಮ್ಮ ಭಾವಚಿತ್ರವುಳ್ಳ ಗುರುತಿನ ಚೀಟಿ ಮುಖ್ಯ ದಾಖಲಾತಿಯಾಗಿ ಹಾಜರುಪಡಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದವರು ಗುರುತಿನ ಚೀಟಿ ಹೊಂದಿಲ್ಲದಿದ್ದಲ್ಲಿ ಅಂತಹವರು ಭಾರತ ಚುನಾವಣಾ ಆಯೋಗ ನಿರ್ಧರಿಸಿರುವ ಪೂರಕ ದಾಖಲಾತಿಗಳ ಪೈಕಿ ಒಂದನ್ನು ಹಾಜರುಪಡಿಸಿ, ಮತದಾನ ಮಾಡಲು ಅವಕಾಶವಿದೆ.
ಪೂರಕ ದಾಖಲಾತಿ:ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಇಂಡಿಯಾನ್ ಪಾಸ್ ಪೋರ್ಟ್, ಕೇಂದ್ರ, ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳು ಅಥವಾ ಇತರ ಖಾಸಗಿ ಕೈಗಾರಿಕಾ ಮನೆಗಳಿಂದ ಅದರ ಉದ್ಯೋಗಿಗಳಿಗೆ ನೀಡಲಾದ ಸೇವಾ ಗುರುತಿನ ಕಾರ್ಡ್, ಸಂಸದರು, ಶಾಸಕರು, ಎಂಎಲ್‌ಸಿಗಳಿಗೆ ಅಧಿಕೃತ ಗುರುತಿನ ಚೀಟಿ, ಶಿಕ್ಷಣ ಸಂಸ್ಥೆಗಳಿಂದ ನೀಡಲಾದ ಸೇವಾ ಗುರುತಿನ ಕಾರ್ಡ್ಗಳು, ಇದರಲ್ಲಿ ಶಿಕ್ಷಕರು, ಪದವೀಧರರ ಕ್ಷೇತ್ರದ ಮತದಾರರನ್ನು ನೇಮಿಸಿಕೊಳ್ಳಬಹುದು. ವಿಶ್ವವಿದ್ಯಾಲಯವು ನೀಡಿದ ಪದವಿ, ಡಿಪ್ಲೊಮಾ ಮೂಲ ಪ್ರಮಾಣ ಪತ್ರ, ಸಕ್ಷಮ ಪ್ರಾಧಿಕಾರದಿಂದ ನೀಡಿದ ದೈಹಿಕನ್ಯೂನತೆಯ ಪ್ರಮಾಣ ಪತ್ರ, ವಿಶಿಷ್ಟ ಅಂಗವೈಕಲ್ಯ ಕಾರ್ಡ್ (ಯುಡಿಐಡಿ) ಮೂಲಕ ಮತದಾನ ಮಾಡಬಹುದು ಎಂದು ತಿಳಿಸಲಾಗಿದೆ.